ರಾಷ್ಟ್ರೀಯ

ರಾಷ್ಟ್ರಪತಿ ಸರ್ಕಾರ ರಚಿಸಲು ಮೊದಲು ತಮ್ಮನ್ನೆ ಆಹ್ವಾನಿಸುವಂತೆ ವಿಪಕ್ಷಗಳಿಂದ ತಂತ್ರ

Pinterest LinkedIn Tumblr


ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ಒಗ್ಗಟ್ಟಾಗಿರುವ ವಿಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರೂಪಿಸಲು ಹೊಸ ತಂತ್ರ ರೂಪಿಸಿವೆ. ಅಲ್ಲದೆ ಮೇ 21 ರಂದು ಎಲ್ಲಾ ಪಕ್ಷಗಳು ಒಟ್ಟಾಗಿ ಸಭೆ ನಡೆಸಲಿದ್ದು ಈ ಕುರಿತು ಚರ್ಚೆ ನಡೆಸಲಿವೆ ಎಂದು ತಿಳಿದುಬಂದಿದೆ.

ಬುಧವಾರ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಲಿದ್ದು, ಲೋಕಸಭೆ ಫಲಿತಾಂಶಕ್ಕೆ ಎರಡು ದಿನದ ಮುಂಚೆ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಸಭೆ ನಡೆಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ನ್ಯೂಸ್​ 18ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಹಿತಿ ನೀಡಿದ್ದಾರೆ.

ಸಮಯವನ್ನು ವ್ಯರ್ಥ ಮಾಡಲು ಇಚ್ಚಿಸದ ವಿರೋಧ ಪಕ್ಷಗಳು ಲೋಕಸಭೆ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರನ್ನು ಸಂಪರ್ಕಿಸಿ ಸರ್ಕಾರ ರಚಿಸಲು ಮೊದಲು ನಮ್ಮನ್ನೇ ಆಹ್ವಾನ ಮಾಡಬೇಕು ಎಂದು ಒತ್ತಾಯಿಸಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಎಲ್ಲಾ ಸಮೀಕ್ಷೆಗಳು ಫಲಿತಾಂಶದ ನಂತರ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ ಎಂದು ಭವಿಷ್ಯ ನುಡಿದಿವೆ. ಈ ನಡುವೆ ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಒಟ್ಟಾಗಿ ತಮಗೆ ಸರ್ಕಾರ ರಚಿಸಲು ಮೊದಲ ಅವಕಾಶ ನೀಡಬೇಕು ಎಂದು ರಾಷ್ಟ್ರಪತಿಯನ್ನು ಒತ್ತಾಯಿಸಲು ತಂತ್ರ ರೂಪಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗೆ 21 ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ವೋಟ್ ಪೋಲಿಂಗ್ ಮೆಷಿನ್ ಹಾಗೂ ವಿವಿ ಪ್ಯಾಟ್​ ತಾಳೆ ಹಾಕಲು ಒತ್ತಾಯಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ಈ ಎಲ್ಲಾ ಪಕ್ಷಗಳು ಫಲಿತಾಂಶ ಹೊರ ಬೀಳುತ್ತಿದ್ದಂತೆ ಸರ್ಕಾರ ರಚಿಸಲು ರಾಷ್ಟ್ರಪತಿಗೆ ಬೆಂಬಲ ಪತ್ರವನ್ನು ನೀಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈಗಾಗಲೇ 5 ಹಂತದ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. ಮೇ.19ರಂದು ಕೊನೆಯ ಹಂತದ ಚುನಾವಣೆ ಮುಕ್ತಾಯವಾಗಲಿದ್ದು, ಮೇ.23 ರಂದು ಫಲಿತಾಂಶ ಹೊರಬೀಳಲಿದೆ. ಫಲಿತಾಂಶದ ನಂತರ ಆಡಳಿತ ಹಾಗೂ ವಿರೋಧ ಪಕ್ಷಗಳ ಎಲ್ಲಾ ತಂತ್ರ ಪ್ರತಿತಂತ್ರಗಳ ಸಾದ್ಯಾಸಾಧ್ಯತೆಗಳು ಬೆಳಕಿಗೆ ಬರಲಿವೆ.

ವಿರೋಧ ಪಕ್ಷಗಳ ಒತ್ತಾಸೆಗಿದೆ ಇತಿಹಾಸದ ಬಲ : ಲೋಕಸಭೆ ಫಲಿತಾಂಶದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್​ ಸೇರಿದಂತೆ ವಿರೋಧ ಪಕ್ಷಗಳಿಗೆ ಸರ್ಕಾರ ರಚಿಸಲು ಆಹ್ವಾನ ನೀಡಬೇಕು ಎಂಬ ವಿರೋಧ ಪಕ್ಷಗಳ ಕೋರಿಕೆಗೆ ಇತಿಹಾಸ ಬಲವಿರುವುದು ಉಲ್ಲೇಖಾರ್ಹ.

ಈ ಹಿಂದೆ 1996ರ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮ ಬಿಜೆಪಿ ಪಕ್ಷದ ನಾಯಕ ಅಟಲ್​ ಬಿಹಾರಿ ವಾಜಪೇಯಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು. ಆದರೆ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಈ ಸರ್ಕಾರ ಕೇವಲ 13 ದಿನಗಳಲ್ಲಿ ಉರುಳಿತ್ತು.

ಕಳೆದ ಚುನಾವಣೆಯಲ್ಲಿ ಗೋವಾ ಹಾಗೂ ಮಣಿಪುರದಲ್ಲೂ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿದ್ದರು ಅಲ್ಲಿನ ರಾಜ್ಯಪಾಲರು ಬಿಜೆಪಿ ಪಕ್ಷವನ್ನು ಸರ್ಕಾರ ರಚಿಸಲು ಆಹ್ವಾನಿಸಿದ್ದರು. ನಂತರ ಬಿಜೆಪಿ ಪಕ್ಷೇತರ ಶಾಸಕರನ್ನು ತಮ್ಮ ಕಡೆ ಸೆಳೆದು ಬಹುಮತ ಸಾಬೀತುಪಡಿಸಿತ್ತು.

ಇನ್ನೂ 2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ರಾಜ್ಯದಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ರಾಜ್ಯಪಾಲರೂ ಸಹ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನ ನೀಡಿದ್ದರು. ಆದರೆ, ಬಿಜೆಪಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ. ನಂತರ ಮೈತ್ರಿ ಸಾಧಿಸಿದ ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದವು.

ಕರ್ನಾಟಕ ಇತಿಹಾಸವನ್ನೇ ಉಲ್ಲೇಖಿಸಿರುವ ವಿರೋಧ ಪಕ್ಷಗಳು ಲೋಕಸಭೆ ಫಲಿತಾಂಶದ ನಂತರ ಎಲ್ಲಾ ಪಕ್ಷಗಳ ಸಂಸದರು ಒಟ್ಟಾಗಿ ರಾಷ್ಟ್ರಪತಿ ಎದುರು ಸಂಖ್ಯಾಬಲ ಪ್ರದರ್ಶಿಸುವ ಮೂಲಕ ಅಧಿಕ ಸಂಸದರನ್ನು ಹೊಂದಿರುವ ಏಕೈಕ ಮೈತ್ರಿ ಎಂಬುದನ್ನು ಸಾಬೀತುಪಡಿಸಿ ಸರ್ಕಾರ ರಚನೆಗೆ ಆಹ್ವಾನ ಪಡೆಯುವ ತಂತ್ರ ಹೆಣೆದಿವೆ.

Comments are closed.