ರಾಷ್ಟ್ರೀಯ

ಮಸೂದ್​​ ಅಜರ್​​​ನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ಕಾರಣ ಮೋದಿ ಸರ್ಕಾರ ಹೇಗಾಗುತ್ತೇ?; ರಾಹುಲ್​​ ಪ್ರಶ್ನೆ

Pinterest LinkedIn Tumblr


ನವದೆಹಲಿ: ಪಾಕ್​​ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್​​ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಪ್ರಧಾನಿ ಮೋದಿ ಸರ್ಕಾರವೇ ಕಾರಣ ಎನ್ನುತ್ತಿದ್ದ ಬಿಜೆಪಿಗೆ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್​​ ಗಾಂಧಿ ತಪರಾಕಿ ಬಾರಿಸಿದ್ದಾರೆ. ಅಲ್ಲದೇ ದೇಶಕ್ಕಾಗಿ ಪ್ರಾಣತೆತ್ತ ಸೈನಿಕರನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿರುವುದು ನಾವಲ್ಲ. ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಂದು ಕಾಂಗ್ರೆಸ್​​ ಅಧ್ಯಕ್ಷ ಕಿಡಿಕಾರಿದ್ದಾರೆ.

ನ್ಯೂಸ್​​-18 ಜತೆಗೆ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಮಾತಾಡಿದ ರಾಹುಲ್​​ ಗಾಂಧಿ ಅವರು, ಮಸೂದ್‌ ಅಜರ್​​ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರ ಎಂದು ಘೋಷಿಸಲು ಬಿಜೆಪಿ ನೇತೃತ್ವದ ಎನ್​​ಡಿಎ ಸರ್ಕಾರವೇ ಕಾರಣ ಎನ್ನಲಾಗುತ್ತಿದೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ರಕ್ಷಣೆಗೆ ಪ್ರಧಾನಿ ಮೋದಿ ಏನು ಕ್ರಮ ತೆಗೆದುಕೊಂಡಿದ್ದರು ಎಂದು ಉತ್ತರಿಸಲಿ. ಕೈಗೆ ಸಿಕ್ಕ ಉಗ್ರನನ್ನು ಪಾಕ್​​ಗೆ ಕಳಿಸಿದ ಮೋದಿ ಸರ್ಕಾರ ಹೇಗೆ ದೇಶದ ಭದ್ರತೆ ಬಗ್ಗೆ ಮಾತನಾಡಲು ಸಾಧ್ಯ. ಮಸೂದ್‌ ಅಜರ್​​ನನ್ನು ನಾವು ಬಂದಿಸಿದ್ದೆವು. ಆದರೆ, ಬಿಜೆಪಿ ಸರ್ಕಾರ ಬಿಡುಗಡೆ ಮಾಡಿ ಪಾಕಿಸ್ತಾನಕ್ಕೆ ವಾಪಸ್ಸು ಕಳಿಸಿದೆ ಎಂದು ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಅನೇಕ ಭಯೋತ್ಪಾದನೆ ಚುಟವಟಿಕೆ ನಡೆಸಿದ ಆರೋಪ ಹೊತ್ತಿರುವ ಜೇಷ್-ಇ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್​ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಘೋಷಿಸಿತು. ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ನಿಷೇಧ ಸಮಿತಿಯ ಕಪ್ಪುಪಟ್ಟಿಗೆ ಮಸೂದ್ ಅಜರ್ ಸೇರಿಸಿದೆ. ಇದರೊಂದಿಗೆ ಭಾರತದ ಹಲವು ವರ್ಷಗಳ ಪ್ರಯತ್ನಕ್ಕೆ ಸಂದ ಜಯ ಇದಾಗಿದೆ ಎಂದಿದ್ದರು. ​​​

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್ ವಿರುದ್ಧ ನಾಲ್ಕು ಬಾರಿ ನಿರ್ಣಯಗಳಾಗಿದ್ದವು. ಪ್ರತೀ ಬಾರಿಯೂ ಚೀನಾ ಕಲ್ಲು ಹಾಕುತ್ತಿತ್ತು. ಕಳೆದ ವರ್ಷ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ 40ಕ್ಕೂ ಹೆಚ್ಚು ಸೈನಿಕರನ್ನು ಬಲಿತೆಗೆದುಕೊಂಡ ಘಟನೆ ನಡೆದ ಬಳಿಕ ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕ ದೇಶಗಳು ಮಸೂದ್ ಅಜರ್​ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವವನ್ನು ಮತ್ತೊಮ್ಮೆ ಮುಂದಿಟ್ಟಿದ್ದವು. ಆಗಲೂ ಕೂಡ ಚೀನಾ ದೇಶ ತಾಂತ್ರಿಕ ಕಾರಣವೊಡ್ಡಿಈ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಿಲ್ಲ.

ಇತ್ತೀಚಿನ ದಿನಗಳಲ್ಲಿ ಚೀನಾದ ಮನವೊಲಿಸಲು ಭಾರತ ಸಾಕಷ್ಟು ಪ್ರಯತ್ನ ಮಾಡಿತು. ಫ್ರಾನ್ಸ್ ಮತ್ತು ಅಮೆರಿಕ ದೇಶಗಳೂ ಚೀನಾ ಮೇಲೆ ಒತ್ತಡ ಹಾಕಿದವು. ಹೀಗಾಗಿ, ಚೀನಾ ತನ್ನ ಬಿಗಿನಿಲುವನ್ನ ಸಡಿಲಿಸಿತು. ಇದರಿಂದ ಮಸೂದ್​​ ಅಜರ್​​ನನ್ನು ಜಾಗತಿಕ ಉಗ್ರ ಎಂದು ಘೋಷಿಸಿತು.

ಮಸೂದ್​​​ ಅಜರ್​​ನನ್ನು ಜಾಗತಿಕ ಉಗ್ರ ಎಂದು ಘೋಷಿಸಿದ್ದು ಭಾರತಕ್ಕೆ ಸಂದ ಜಯ ಎಂದ ಪ್ರಧಾನಿ ಮೋದಿ ವಿರುದ್ಧ ರಾಹುಲ್​​ ವಾಗ್ದಾಳಿ ಮುಂದುವರಿಸಿದ್ದಾರೆ. ಕಾಶ್ಮೀರದಲ್ಲಿ ಕಾಂಗ್ರೆಸ್​​ ನೇತೃತ್ವದ ಯುಪಿಎ ಸರ್ಕಾರ ಭಯೋತ್ಪಾದನ ಚಟುವಟಿಕೆಗಳಿಗೆ ಬ್ರೇಕ್​​ ಹಾಕುವ ಮೂಲಕ ಶಾಂತಿ ಸ್ಥಾಪಿಸಿತು. ಆದರೆ, ಉಗ್ರರಿಗೆ ಕಾಶ್ಮೀರದಲ್ಲಿ ಮತ್ತೆ ಬಾಗಿಲು ತೆಗೆದವರು ಮೋದಿ ಎಂದು ಗಂಭೀರ ಆರೋಪ ಎಸಗಿದ್ದಾರೆ.

Comments are closed.