ಕರ್ನಾಟಕ

ಪ್ರೀತಿಸಿ ಮದುವೆಯಾದ ಜೋಡಿಯಿಂದ ಜೀವ ರಕ್ಷಣೆಗೆ ಎಸ್​ಪಿ ಮೊರೆ!

Pinterest LinkedIn Tumblr


ಬಳ್ಳಾರಿ: ಇದು ಪ್ರೇಮಿಗಳಿಬ್ಬರ ಸಂಕಷ್ಟದ ಕತೆ. ಅವರಿಬ್ಬರು ಕಳೆದ ಒಂದು ವರ್ಷದಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಒಂದು ಕ್ಷಣ ಕೂಡ ಅವರಿಬ್ಬರು ಒಬ್ಬರೊಬ್ಬರನ್ನ ಬಿಟ್ಟು ಇರಲಾರರು. ಆದರೆ ಈ ಪ್ರೇಮಿಗಳಿಗಳಿಗೆ ಪೋಷಕರೇ ವಿಲನ್ ಆಗಿದ್ದಾರೆ. ಯುವತಿಯ ಪೋಷಕರ ವಿರೋಧದ ನಡುವೆ ಈಗ ಮದುವೆಯನ್ನೂ ಆಗಿದ್ದಾರೆ. ಆದರೆ ಪ್ರೇಮಿಗಳಿಗೆ ಇದೀಗ ಪ್ರಾಣ ಬೆದರಿಕೆಯ ಭಯ ಶುರುವಾಗಿದೆ. ಯುವತಿ ಪೋಷಕರ ವಿರೋಧದ ನಡುವೆಯೂ ಮದುವೆಯಾದ ಪ್ರೇಮಿಗಳು ರಕ್ಷಣೆ ಕೋರಿ ಬಳ್ಳಾರಿಯ ಎಸ್​ಪಿ ಅವರ ಮೊರೆ ಹೋಗಿದ್ದಾರೆ.

ತರಬೇತಿ ಕೇಂದ್ರದಲ್ಲಿ ಪರಿಚಯ

ಈ ಪ್ರೇಮಿಗಳ ಹೆಸರು ಉಮೇಶ್ ಹಾಗೂ ವಾಣಿಶ್ರೀ. ಪ್ರಿಯಕರ ಉಮೇಶ್ ಬಳ್ಳಾರಿ ನಗರದ ವಾಸಿಯಾದ್ರೆ, ಪ್ರಿಯತಮೆ ವಾಣಿಶ್ರೀ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ನಿವಾಸಿ. ವಾಣಿಶ್ರೀ ಬ್ಯಾಂಕಿಂಗ್ ಕೋಚಿಂಗ್ ಪಡೆಯುವಾಗ ಉಮೇಶ್ ಪರಿಚಯವಾಗುತ್ತೆ. ಪರಿಚಯ ಆರಂಭದಲ್ಲಿದ್ದ ಸ್ನೇಹ ಕೊನೆಗೂ ಇಬ್ಬರ ನಡುವೆ ಪ್ರೀತಿಯಾಗಿ ಮಾರ್ಪಾಟಾಗುತ್ತೆ. ಕಳೆದೊಂದು ವರ್ಷದಿಂದಲೂ ಪರಸ್ಪರ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ. ಇವರಿಬ್ಬರ ಪ್ರೀತಿ ವಿಚಾರ ಎರಡು ಕಡೆ ಪೋಷಕರಿಗೂ ಗೊತ್ತಾಗಿದೆ. ಆದ್ರೆ ಇಬ್ಬರ ಜಾತಿ ಬೇರೆ-ಬೇರೆಯಾಗಿದ್ದರಿಂದ ಯುವತಿಯ ಪೋಷಕರು ಇವರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇವರಿಗೆ ಮದುವೆಯಾಗದಂತೆ ಎಚ್ಚರಿಕೆಯನ್ನೂ ನೀಡಿದ್ಧಾರೆ. ಆದರೆ ಯುವತಿ ಪೋಷಕರ ವಿರೋಧದ ನಡುವೆಯೂ ಈ ಪ್ರೇಮಿಗಳು ಕಳೆದ ತಿಂಗಳು 27 ರಂದು ಮದುವೆಯಾಗಿದ್ದಾರೆ. ಮದುವೆಯಾಗಿ ಬಳ್ಳಾರಿಯಲ್ಲಿ ಉಮೇಶ್ ಪೋಷಕರನ್ನು ಒಪ್ಪಿಸಿ ಅವರ ಮನೆಯಲ್ಲಿ ವಾಸವಿರುವ ಈ ಪ್ರೇಮಿಗಳಿಗೆ ಯುವತಿಯ ಪೋಷಕರು ಸ್ಥಳೀಯರ ಮೂಲಕ ಜೀವ ಬೆದರಿಕೆ ಹಾಕುತ್ತಿದ್ದರಂತೆ. ಹೀಗಾಗಿ ಯುವತಿ ಪೋಷಕರ ಪ್ರಾಣಭಯದಿಂದ ರಕ್ಷಣೆ ಕೋರಿ ಪ್ರೇಮಿಗಳು ಈಗ ಎಸ್​ಪಿ ಮೊರೆ ಹೋಗಿದ್ದಾರೆ.

ಯುವತಿ ಮನೆಯವರಿಂದ ಜೀವ ಬೆದರಿಕೆ:

ಬಳ್ಳಾರಿಯಲ್ಲಿರುವ ಪ್ರಿಯತಮ ಉಮೇಶ್ ನಿವಾಸಕ್ಕೆ ಯುವತಿಯ ಪೋಷಕರ ಸಂಬಂಧಿಕರು ಸ್ಥಳೀಯರೊಂದಿಗೆ ತೆರಳಿ ಜೀವಬೆದರಿಕೆ ಹಾಕಿದ್ದರಂತೆ. ಕಳೆದ ಮೂರು ದಿನಗಳಿಂದ ಈ ಪ್ರೇಮಿಗಳಿಗೆ ಆತಂಕ ಶುರುವಾಗಿದೆ. ಈ ಇಬ್ಬರು ಪ್ರೇಮಿಗಳು ವಯಸ್ಕರಾಗಿದ್ದರಿಂದ ನಮಗೆ ಬದುಕಲು ಬಿಡಿ ಎಂದು ಯುವತಿಯ ಪೋಷಕರ ಬಳಿ ಕೇಳಿಕೊಳ್ಳುತ್ತಿದ್ದಾರೆ. ಆದ್ರೆ ಯುವತಿಯ ಪೋಷಕರು ರಾಜಕೀಯವಾಗಿ ಪ್ರಬಲವಾಗಿದ್ದರಿಂದ ಮುಂದೆ ಏನಾದ್ರೂ ಆಗಬಹುದು ಎನ್ನುವ ಭಯ ಪ್ರೇಮಿಗಳನ್ನು ಕಾಡುತ್ತಿದೆ. ಈ ಕಾರಣಕ್ಕಾಗಿಯೇ ಬಳ್ಳಾರಿ ಎಸ್​ಪಿ ಅವರನ್ನು ಭೇಟಿ ಮಾಡಿ ರಕ್ಷಣೆ ಕೇಳುತ್ತಿದ್ದಾರೆ.

ಜಾತಿ ಬೇರೆ-ಬೇರೆಯಾಗಿದ್ದಕ್ಕೆ ಪ್ರೇಮಿಗಳು ಮದುವೆಯಾಗಿ ಸಂಸಾರ ಮಾಡಲು ಕಷ್ಟಪಡುತ್ತಿದ್ದು, ಇದೀಗ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾರೆ. ಈಗ ಪೊಲೀಸರು ಕೂಡ ಈ ಇಬ್ಬರು ಪ್ರೇಮಿಗಳಿಗೆ ರಕ್ಷಣೆ ನೀಡಲು ಮುಂದಾಗಿದ್ದಾರೆ. ಪೊಲೀಸರು ರಕ್ಷಣೆಗೆ ಬಂದಿದ್ದರಿಂದ ಸದ್ಯಕ್ಕೆ ಪ್ರೇಮಿಗಳು ಈಗ ನಿರಾಳರಾಗಿದ್ದರೂ, ಯುವಕನ ಪೋಷಕರಿಗೆ ಭಯ, ಆತಂಕ ಮಾತ್ರ ಮುಂದುವರೆದಿದೆ.

Comments are closed.