ನವದೆಹಲಿ: ಫನಿ ಚಂಡಮಾರುತ ಭಾರತದ ಕರಾವಳಿ ಪ್ರದೇಶಕ್ಕೆ ಅಪ್ಪಳಿಸುವ ಮುನ್ನ ಇದರ ಮುನ್ಸೂಚನೆ ಆಮೆಗಳಿಗೆ ತಿಳಿದಿತ್ತೇ? ಹೀಗೊಂದು ಕುತೂಹಲಕಾರಿ ಅಂಶ ಇದೀಗ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
ಭಾರತದ ಪೂರ್ವ ಕರಾವಳಿ ಭಾಗವನ್ನು ಭಯಾನಕ ಫನಿ ಚಂಡಮಾರುತ ಅಪ್ಪಳಿಸಿದೆ. ಆಂಧ್ರದಲ್ಲಿ ಸ್ವಲ್ಪಮಟ್ಟಿಗೆ ಹಾನಿ ಮಾಡಿ ಈಗ ಒಡಿಶಾ ಮತ್ತು ಬಂಗಾಳದ ಕರಾವಳಿ ಭಾಗದಲ್ಲಿ ರೌದ್ರಾವತಾರ ತಾಳಿದೆ. ಒಡಿಶಾದಲ್ಲಿ 6ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡು ಬಂಗಾಳದಲ್ಲಿ ಇನ್ನೂ ಭೀಕರವಾಗಿ ಬೀಸುತ್ತಾ ಹೋಗಿದೆ. ತಿತ್ಲಿ ಚಂಡಮಾರುತಕ್ಕಿಂತಲೂ ಫಲಿ ಹೆಚ್ಚು ಭಯಾನಕ ಮತ್ತು ಅಪಾಯಕಾರಿಯಾಗಿದೆ. ಇಷ್ಟೆಲ್ಲಾ ತಂತ್ರಜ್ಞಾನ ಇದ್ದರೂ ಈ ಡೆಡ್ಲಿ ಸೈಕ್ಲೋನ್ ಅಪ್ಪಳಿಸುವ ಸುಳಿವು ನಮಗೆ ಸಿಕ್ಕಿದ್ದು ಕೆಲವೇ ದಿನಗಳ ಹಿಂದೆ. ಇದೇ ವೇಳೆ, ಒಡಿಶಾದ ಗಂಜಾಮ್ ಜಿಲ್ಲೆಯ ಋಷಿಕುಲ್ಯಾದಲ್ಲಿ ವಿಚಿತ್ರ ಸಂಗತಿಯೊಂದು ನಡೆದಿರುವುದು ಗಮನಕ್ಕೆ ಬಂದಿದೆ. ನೈಸರ್ಗಿಕ ವಿಕೋಪ ದುರಂತಗಳನ್ನು ಪ್ರಾಣಿಗಳಿಗೆ ಮೊದಲೇ ಗ್ರಹಿಕೆಯಾಗುತ್ತವೆ ಎಂಬ ಮಾತಿಗೆ ಇದು ಪುಷ್ಟಿಕೊಡುವಂತಿದೆ.
ರುಷಿಕುಲ್ಯಾ ಕಡಲತೀರದಲ್ಲಿ ಓಲಿವ್ ರಿಡ್ಲೀ ಜಾತಿಯ ಆಮೆಗಳು ಪ್ರತೀ ವರ್ಷ 5 ಲಕ್ಷದಷ್ಟು ಸಂಖ್ಯೆಯಲ್ಲಿ ಸಂತಾನಕ್ಕಾಗಿ ಗೂಡು ಕಟ್ಟುತ್ತವೆ. ಆದರೆ, ಈ ವರ್ಷ ಇಂಥ ಗೂಡುಗಳು ಪ್ರಮಾಣ ಕೇವಲ 3 ಸಾವಿರ ಮಾತ್ರ ಇದೆ. ಇದು ವನ್ಯಜೀವಿ ತಜ್ಞರು ಮತ್ತು ಅಧಿಕಾರಿಗಳನ್ನು ದಂಗುಬಡಿಸಿದೆ. ಗೂಡುಗಳ ಸಂಖ್ಯೆಯಲ್ಲಿ ಏಕಾಏಕಿ ಕಡಿಮೆ ಆಗಲು ಬೇರಾವ ಕಾರಣವೂ ಕಾಣುತ್ತಿಲ್ಲ. ಭಾರೀ ನೈಸರ್ಗಿಕ ಗಂಡಾಂತರ ಸಂಭವಿಸುವುದನ್ನು ಮೊದಲೇ ಗ್ರಹಿಸಿ ಈ ಪ್ರಾಣಿಗಳು ಮುನ್ನೆಚ್ಚರಿಕೆಯಾಗಿ ಇಲ್ಲಿಗೆ ಬಂದು ಗೂಡು ಕಟ್ಟಿಲ್ಲ ಎಂಬ ಮಾತು ಕೇಳಿಬರುತ್ತಿವೆ.
ಈ ಓಲಿವ್ ರಿಡ್ಲೀ ಆಮೆಗಳು ನವೆಂಬರ್ನಿಂದ ಜನವರಿ ತಿಂಗಳವರೆಗೂ ರಿಷಿಕುಲ್ಯಾ ಬೀಚ್ ಬಳಿ ಬಂದು ಗೂಡು ಕಟ್ಟಿ ಸಂತಾನೋತ್ಪತ್ತಿ ಕಾರ್ಯ ಮಾಡುತ್ತವೆ. ಆ ನಂತರ ಆ ಗೂಡಿನಲ್ಲಿ ಮೊಟ್ಟೆಗಳನ್ನ ಇಡುತ್ತವೆ. ಕಳೆದ ವರ್ಷ 4.75 ಲಕ್ಷ ಆಮೆಗಳು ಈ ಬೀಚ್ನಲ್ಲಿ ಗೂಡು ಕಟ್ಟಿ ಮೊಟ್ಟೆ ಹಾಕಿದ್ದವು. ಈ ಬಾರಿ 3 ಸಾವಿರ ಆಮೆಗಳು ಮಾತ್ರ ಬೀಚ್ಗೆ ಬಂದಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಚಂಡಮಾರುತದ ಪೂರ್ವಗ್ರಹಣೆಯಿಂದ ಈ ಆಮೆಗಳು ಗೂಡು ಕಟ್ಟುತ್ತಿಲ್ಲ ಎಂಬ ವಾದವನ್ನು ಈಗಲೇ ಒಪ್ಪಲು ಅಧಿಕಾರಿಗಳು ತಯಾರಿಲ್ಲ. ಬೇರೆ ಬೇರೆ ಕಾರಣದಿಂದ ಅವುಗಳ ವರ್ತನೆಯಲ್ಲಿ ಬದಲಾವಣೆಯಾಗಿರಬಹುದು. ಹಿಂದೆ ಕೆಲ ಬಾರಿ ಇಂಥ ಸಂಗತಿಗಳು ನಡೆದಿದ್ದವು ಎಂದು ಕೆಲ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ಧಾರೆ.
Comments are closed.