ರಾಷ್ಟ್ರೀಯ

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಬಿಲ್ಕಿಸ್​ ಬನೊಗೆ 50 ಲಕ್ಷ ರು. ಪರಿಹಾರ, ಸರ್ಕಾರಿ ಹುದ್ದೆ ನೀಡುವಂತೆ ಗುಜರಾತ್ ಸರ್ಕಾರಕ್ಕೆ ‘ಸುಪ್ರೀಂ’ ತಾಕೀತು

Pinterest LinkedIn Tumblr

ನವದೆಹಲಿ: 2002ರ ಗುಜರಾತ್​ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಿಲ್ಕಿಸ್​ ಬನೊ ಅವರಿಗೆ 50 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್​ ಮಂಗಳವಾರ ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೇ, ಆಕೆಗೆ ಸರ್ಕಾರಿ ಉದ್ಯೋಗ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸುವಂತೆ ನಿರ್ದೇಶನ ನೀಡಿದೆ. 17 ವರ್ಷಗಳ ನಿರಂತರ ಹೋರಾಟದ ಬಳಿಕ ಬಿಲ್ಕಿಸ್ ಬಾನು ಅವರಿಗೆ ನ್ಯಾಯಾಲಯ ಈ ಪರಿಹಾರ ಕಲ್ಪಿಸಿದೆ.

ಅಹಮದಾಬಾದ್​ ಸಮೀಪವಿರುವ ರಂದೀಕ್​ಪುರ್​ ಹಳ್ಳಿಯಲ್ಲಿ ಬನೊ 21 ವರ್ಷದವರಿದ್ದಾಗ 2002ರ ಮಾರ್ಚ್​ 3ರಂದು ಗುಂಪೊಂದು ಅವರ ಕುಟುಂಬದ ಮೇಲೆ ದಾಳಿ ನಡೆಸಿ, ಕುಟುಂಬದ 14 ಮಂದಿಯನ್ನು ಹತ್ಯೆ ಮಾಡಿತ್ತು. ಬಿಲ್ಕಿಸ್​ ಬನೊ ಅವರ ಮೂರು ವರ್ಷದ ಮಗಳಾದ ಶಾಲಿಹಾನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ವೇಳೆ ಗರ್ಭಿಣಿಯಾಗಿದ್ದ ಬಿಲ್ಕಿಸ್​ ಅವರ ಮೇಲೆ ಸಾಮೂಹಿಕ ಅತ್ಯಾಚಾರವನ್ನೂ ಎಸಗಲಾಯಿತು. ಪ್ರಜ್ಞೆ ತಪ್ಪಿದ್ದ ಬಿಲ್ಕಿಸ್​ ಬನೊ ಸತ್ತಿದ್ದಾಳೆ ಎಂದು ಭಾವಿಸಿ ದಾಳಿಕೋರರು ಜಾಗ ಖಾಲಿ ಮಾಡಿದ್ದರು.

ಘಟನೆ ನಂತರ ಗುಜರಾತ್ ಸರ್ಕಾರ ಬಿಲ್ಕಿಸ್ ಬನೊ ಅವರಿಗೆ 5 ಲಕ್ಷ ಪರಿಹಾರ ನೀಡಿತ್ತು. ಆದರೆ, ಇದನ್ನು ನಿರಾಕರಿಸಿದ ಅವರು, ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿ ಹಾಗೂ ತನಿಖೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

2002ರ ಮಾರ್ಚ್ ನಲ್ಲಿ ಗೋಧ್ರಾ ಗಲಭೆಯ ಬಳಿಕ ನಡೆದ ಹಿಂಸಾಚಾರದ ಸಂದರ್ಭ ಗರ್ಭೀಣಿಯಾಗಿದ್ದ ಬಿಲ್ಕಿಸ್ ಬಾನೊ ಮೇಲೆ ರಾಧಿಕ್ ಪುರ ಗ್ರಾಮದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆಕೆಯ 14 ಮಂದಿ ಕುಟುಂಬ ಸದಸ್ಯರನ್ನು ಹತ್ಯೆ ಮಾಡಲಾಗಿತ್ತು.

ಐವರು ಪೊಲೀಸ್ ಅಧಿಕಾರಿಗಳು, ಇಬ್ಬರು ವೈದ್ಯರು, ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ದೋಷಿಗಳೆಂದು ತೀರ್ಮಾನಿಸಿ ಪ್ರಕರಣದಲ್ಲಿ ಒಟ್ಟು 12 ಮಂದಿಗೆ ಬಾಂಬೆ ಹೈಕೋರ್ಟ್ ಮೇ 4, 2017ರಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

2008ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ, 11 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ, ಐವರು ಪೊಲೀಸ್ ಅಧಿಕಾರಿಗಳು ಹಾಗೂ ಇಬ್ಬರು ಸರ್ಕಾರಿ ವೈದ್ಯರನ್ನು ಬಿಡುಗಡೆಗೊಳಿಸಿತ್ತು.

ಬಾಂಬೆ ಹೈಕೋರ್ಟ್ ತಪಿತಸ್ಥರು ಘೋಷಿಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗುಜರಾತ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಕಳೆದ ತಿಂಗಳು ಸೂಚನೆ ನೀಡಿತ್ತು. ಗುಜರಾತ್ ಸರ್ಕಾರದಿಂದ 5 ಲಕ್ಷ ಪರಿಹಾರ ಪಡೆಯಲು ಈ ಹಿಂದೆ ಬಿಲ್ಕಿಸ್ ಬಾನೊ ನಿರಾಕರಿಸಿದ್ದರು.

Comments are closed.