ಶಿವಮೊಗ್ಗ: ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಮತದಾನ ಬೆಳಗ್ಗೆಯಿಂದ ನಡೆಯುತ್ತಿದ್ದು, ಶಿವಮೊಗ್ಗದ ಶಿಕಾರಿಪುರದಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬ ಸದಸ್ಯರು ಮತದಾನ ಮಾಡಿದರು.
ಮತದಾನಕ್ಕೂ ಮುನ್ನ ಯಡಿಯೂರಪ್ಪ ಅವರ ಮನೆಯಲ್ಲಿ ಪೂಜೆ ನಡೆಸಲಾಯಿತು. ಪೂಜೆಯಲ್ಲಿ ಯಡಿಯೂರಪ್ಪ ಮತ್ತು ಅಭ್ಯರ್ಥಿ ಬಿ.ವೈ ರಾಘವೇಂದ್ರ, ಬಿ.ವೈ ವಿಜಯೇಂದ್ರ ಭಾಗಿಯಾದರು. ನಂತರ ಕುಟುಂಬ ಸಮೇತ ಮನೆದೇವರಾದ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬಳಿಕ ಈ ದೇವಸ್ಥಾನದ ಹತ್ತಿರದಲ್ಲೇ ಇರುವ ರಾಘವೇಂದ್ರ ಸ್ವಾಮಿ ಗುಡಿಗೂ ತೆರಳಿ ಪೂಜೆ ಸಲ್ಲಿಸಿದರು.
ಪೂಜೆ ಮುಗಿಸಿದ ಬಳಿಕ ಯಡಿಯೂರಪ್ಪ ಮತ್ತು ಮಕ್ಕಳು ಶಿಕಾರಿಪುರದ ಮತಗಟ್ಟೆ ಸಂಖ್ಯೆ 134ಕ್ಕೆ ತೆರಳಿ ಮತದಾನ ಮಾಡಿದರು. ಬಳಿಕ ಮಾತನಾಡಿದ ಬಿಎಸ್ವೈ, ಒಂದೂವರೆ ಲಕ್ಷ ಅಂತರದಲ್ಲಿ ರಾಘವೆಂದ್ರ ಅವರು ಗೆಲ್ಲಲಿದ್ದಾರೆ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲಲಿದ್ದಾರೆ. ನಾವು 22 ಕ್ಷೇತ್ರಗಳಲ್ಲಿ ಗೆಲ್ಲಲಿದ್ದೇವೆ. 23ರ ನಂತರ ರಾಜಕೀಯ ಚಿತ್ರಣ ಬದಲಾಗಲಿದೆ. ಮೈತ್ರಿ ಸರ್ಕಾರ ಪತನವಾಗಲಿದೆ. ಸಿಎಂ ಕನಸು ಮತ್ತೆ ಸಿದ್ದುಗೆ ನನಸಾಗೊಲ್ಲ. ಮೈತ್ರಿ ಸರ್ಕಾರ ಪತನ ಗ್ಯಾರಂಟಿ. ನಾವು ಸರ್ಕಾರವನ್ನು ಅಭದ್ರಗೊಳಿಸಲ್ಲ. ಅದೇ ಪತನವಾಗಲಿದೆ. ಯಾವ ಶಾಸಕರು ನಮ್ಮ ಸಂಪರ್ಕದಲ್ಲಿಲ್ಲ. ಆಂತರಿಕ ಕಚ್ಚಾಟದಿಂದಲೇ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ಅಭ್ಯರ್ಥಿ ರಾಘವೇಂದ್ರ ಮಾತನಾಡಿ, ಶೇಕಡ ನೂರಕ್ಕೆ ನೂರು ಗೆಲುವು ನನ್ನದೆ. ತಂದೆಯ ಅಭಿವೃದ್ಧಿ ಕಾರ್ಯ, ಮೋದಿ ಅವರ ವರ್ಚಸ್ಸು ನನ್ನ ಗೆಲುವಿಗೆ ಸಹಕಾರಿಯಾಗಲಿದೆ. ದೇಶಾದ್ಯಂತ ಮೋದಿ ಅಲೆಯಿದೆ. ಹುಚ್ಚೆದ್ದು ಯುವ ಜನತೆ ಬಿಜೆಪಿ ಪರ ಮತ ಚಲಾಯಿಸಲಿದೆ. ಚುನಾವಣೆ ನಂತರ ಮೈತ್ರಿ ಸರ್ಕಾರ ಪತನ ಗ್ಯಾರಂಟಿ ಎಂದರು.
Comments are closed.