ನವದೆಹಲಿ: ದೇಶದೆಲ್ಲೆಡೆ ಇಂದು ಮೂರನೇ ಹಂತದ ಮತದಾನ ನಡೆಯುತ್ತಿರುವ ವೇಳೆ ಬಾಲಿವುಡ್ ನಟ ಸನ್ನಿ ಡಿಯೋಲ್ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಶುಕ್ರವಾರ ಪುಣೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಿದ್ದ ಸನ್ನಿ ಇಂದು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಪಿಯೂಶ್ ಗೋಯೆಲ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಗೊಂಡಿದ್ದಾರೆ. ಅವರು ಪಂಜಾಬಿನ ಗುರುದಾಸ್ಪುರದಿಂದ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಮಲ ಪಾಳಯ ಸೇರಿದ ಬಳಿಕ ಮಾತನಾಡಿದ ಅವರು, “ನನ್ನ ತಂದೆ (ಧರ್ಮೆಂದ್ರ) ರೀತಿಯಲ್ಲಿಯೇ ನಾನು ಬಿಜೆಪಿ ಸೇರಿದ್ದೇನೆ. ಅವರು ಅಟಲ್ ಬಿಹಾರಿ ವಾಜಪೇಯಿ ಜೊತೆ ಕಾರ್ಯ ನಿರ್ವಹಿಸಿದ್ದರು. ಈಗ ನಾನು ನರೇಂದ್ರ ಮೋದಿ ಅವರೊಂದಿಗೆ ಹೆಜ್ಜೆ ಹಾಕಲು ಬಯಸಿದ್ದೇನೆ” ಎಂದರು.
“ಪ್ರಧಾನಿ ಮೋದಿ ದೇಶದಕ್ಕಾಗಿ ಬಹಳಷ್ಟು ಮಾಡಿದ್ದಾರೆ. ಮುಂದಿ ಐದು ವರ್ಷ ಕೂಡ ಮೋದಿ ಅವರನ್ನು ಮತ್ತೆ ಪ್ರಧಾನಿಯಾಗಿ ನೋಡಬೇಕು ಎಂಬುದು ನನ್ನ ಇಚ್ಛೆ. ನಮ್ಮ ಯುವ ಜನತೆಗೆ ಮೋದಿ ಬೇಕು. ಮೋದಿ ಪರವಾಗಿ ಕೆಲಸ ಮಾಡಿ ಅವರನ್ನು ಬೆಂಬಲಿಸುವ ಸಲುವಾಗಿ ನಾನು ಈ ನಿರ್ಧಾರ ಕೈ ಗೊಂಡಿದ್ದೇನೆ. ನನ್ನ ಕೆಲಸಗಳು ಮುಂದೆ ಮಾತಾನಾಡಲಿವೆ” ಎಂದರು.
ಸನ್ನಿ ಡಿಯೋಲ್ ಪ್ರತಿನಿಧಿಸಲಿರುವ ಗುರುದಾಸ್ಪುರವನ್ನು ವಿನೋದ್ ಖನ್ನಾ ಪ್ರತಿನಿಧಿಸುತ್ತಿದ್ದರು. ಆದರೆ, ಅವರು 2017ರಲ್ಲಿ ಸಾವನ್ನಪ್ಪಿದರು. ಇದಾದ ಬಳಿಕ ಈ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು. ಇನ್ನು ಸನ್ನಿ ಅವರ ಮಲತಾಯಿ ಹೇಮಾಮಾಲಿನಿ ಉತ್ತರ ಪ್ರದೇಶದ ಮಥುರಾದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಪಂಜಾಬ್ನಲ್ಲಿ ಶಿರೋಮಣಿ ಅಕಾಲಿ ದಳದ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.