ರಾಷ್ಟ್ರೀಯ

ವಿಂಗ್ ಕಮಾಂಡರ್ ಅಭಿನಂದನ್‍ಗೆ ರಜೆಯಲ್ಲಿ ತೆರಳುವಂತೆ ಸಲಹೆ

Pinterest LinkedIn Tumblr


ನವದೆಹಲಿ: ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್ 16 ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಗುರುವಾರ ಡಿ ಬ್ರೀಫಿಂಗ್ ಪ್ರಕ್ರಿಯೆ ನಡೆಸಲಾಗಿದ್ದು, ಆ ಬಳಿಕ ಆನಾರೋಗ್ಯದ ರಜೆ ಮೇಲೆ ಮನೆಗೆ ತೆರಳುವಂತೆ ಸಲಹೆ ನೀಡಲಾಗಿದೆ.

ಸೇನೆಯ ಸಂಶೋಧನೆ ಹಾಗೂ ರೆಫರೆಲ್ ಆಸ್ಪತ್ರೆಯ ವೈದ್ಯರು ಸಲಹೆ ನೀಡಿದ್ದು, ಅನಾರೋಗ್ಯದ ರಜೆಯನ್ನು ಮೂರು ವಾರಗಳವರೆಗೂ ವಿಸ್ತರಿಸಬಹುದಾಗಿದೆ.

ಡಿ ಬ್ರೀಫಿಂಗ್ ವೇಳೆ ಅಭಿನಂದನ್ ಅವರು ಪಾಕ್ ಸೆರೆಯಲ್ಲಿದ್ದ ವೇಳೆ ನಡೆದ ಅನುಭವಗಳ ಬಗ್ಗೆ ವಿವರಿಸಿದ್ದಾರೆ. ಅದರಲ್ಲೂ ಪಾಕಿಸ್ತಾನಿ ಸೇನೆ ನೀಡಿದ ಮಾನಸಿಕ ಹಿಂಸೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಫೆ.27 ರಂದು ಮಿಗ್ 21 ವಿಮಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕ ಬಿದ್ದಿದ್ದ ಅಭಿನಂದನ್ 58 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದರು.

ಫೆ.14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡ ಬಳಿಕ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪರಿಣಾಮ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರ ಬೆನ್ನಲ್ಲೇ ಭಾರತ ನೆಲವನ್ನು ಪ್ರವೇಶಿಸಿದ್ದ ಪಾಕ್ ಯುದ್ಧ ವಿಮಾನಗಳು ದಾಳಿ ನಡೆಸಲು ವಿಫಲವಾಗಿ ಹಿಂದಿರುಗಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನ ಎಫ್ 16 ವಿಮಾನವನ್ನು ಚೇಸ್ ಮಾಡುತ್ತಿದ್ದಾಗ ಮಿಗ್ ವಿಮಾನ ಪತನಗೊಂಡು ಅಭಿನಂದನ್ ಪ್ಯಾರಾಚೂಟ್ ಸಹಾಯದಿಂದ ಧುಮುಕಿದ್ದರು.

ಪಾಕ್ ಅಕ್ರಮಿತ ಪ್ರದೇಶದಲ್ಲಿ ಬಿದ್ದ ವೇಳೆ ಅಭಿನಂದನ್ ಮೇಲೆ ಸ್ಥಳೀಯರು ನಡೆಸಿದ ಪರಿಣಾಮ ಗಾಯಗೊಂಡಿದ್ದರು. ಅದಕ್ಕೂ ಮುನ್ನವೇ ಸೇನೆಗೆ ಸಂಬಂಧಿಸಿದ್ದ ಮುಖ್ಯ ದಾಖಲೆಗಳು ಪಾಕಿಸ್ತಾನದ ಸೇನೆಗೆ ಸಿಗದಂತೆ ಮಾಡಿ ನಾಶ ಪಡಿಸಿದ್ದರು. ಅಲ್ಲದೇ ಕೆಲ ದಾಖಲೆಗಳನ್ನು ತಾವೇ ನುಂಗಿಹಾಕಿದ್ದರು. ಪಾಕಿಸ್ತಾನದಿಂದ ವಾಪಸ್ ಆದ ಬಳಿಕ ಮಾರ್ಚ್ 2 ರಂದು ಅಭಿನಂದನ್ ಅವರನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಆಗಿದ್ದರು. ಆ ಬಳಿಕ ದೆಹಲಿಯ ಸೇನೆಯ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು.

Comments are closed.