ರಾಷ್ಟ್ರೀಯ

ಭಯೋತ್ಪಾದಕರನ್ನು ಹತ್ಯೆ ಮಾಡಿದಿರೋ, ಮರಗಳನ್ನು ಕಿತ್ತಿರೋ? ಕೇಂದ್ರಕ್ಕೆ ಸಿಧು ಪ್ರಶ್ನೆ

Pinterest LinkedIn Tumblr


ಚಂಡೀಗಡ: ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಭಾರತದ ವಾಯುಸೇನೆಯ ಯುದ್ಧವಿಮಾನಗಳು ದಾಳಿ ಮಾಡಿದ ಬಳಿಕ ಎರಡೂ ದೇಶಗಳ ನಡುವೆ ಯುದ್ಧೋನ್ಮಾದ ಸಂಘರ್ಷಗಳು ನಡೆದವು. ಬಾಲಾಕೋಟ್​ನಲ್ಲಿ ಜೈಷ್ ಉಗ್ರರ ಕ್ಯಾಂಪ್ ಅನ್ನು ಧ್ವಂಸ ಮಾಡಿದ್ದೇವೆಂದು ಭಾರತ ಹೇಳಿಕೊಂಡರೆ, ಪಾಕಿಸ್ತಾನವು ಏನೂ ಆಗಿಲ್ಲ, ಕೆಲವು ಗಿಡಮರಗಳು ಧ್ವಂಸಗೊಂಡಿವೆ ಎಂದು ಸ್ಪಷ್ಟಪಡಿಸಿತು. ಟೆರರಿಸ್ಟ್​ಗಳ ಬದಲು ಟ್ರೀ(ಮರ)ಗಳನ್ನು ಭಾರತದ ವಿಮಾನಗಳು ಕಿತ್ತುಹಾಕಿ ಹೋಗಿವೆ ಎಂದು ಪಾಕಿಸ್ತಾನದ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೋಲ್ ಆಗಿತ್ತು. ಈಗ ಪಂಜಾಬ್​ನ ಸಚಿವ ಹಾಗು ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಂಗ್ ಸಿಧು ಕೂಡ ಈ ಟ್ರೋಲ್​ಗೆ ಧ್ವನಿಗೂಡಿಸಿದ್ದಾರೆ.

ಭಾರತದ ವಾಯುದಾಳಿಯ ಉದ್ದೇಶವಾದರೂ ಏನು? ಭಯೋತ್ಪಾದಕರನ್ನಿ ನಿರ್ಮೂಲನೆ ಮಾಡುವುದೋ ಅಥವಾ ಮರಗಳನ್ನು ನಿರ್ಮೂಲನೆ ಮಾಡುವುದೋ? ಅಥವಾ ಇದು ಚುನಾವಣೆ ಗಿಮಿಕ್ಕಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಂದ್ರಕ್ಕೆ ಸಿಧು ಹಾಕಿದ್ದಾರೆ.

“300 ಭಯೋತ್ಪಾದಕರು ಸತ್ತಿದ್ದು ಹೌದೋ ಅಲ್ಲವೋ? ಅಲ್ಲವಾದರೆ ದಾಳಿಯ ಉದ್ದೇಶವೇನಿತ್ತು? ನೀವು ನಿರ್ಮೂಲನೆ ಮಾಡಬೇಕೆಂದಿದ್ದು ಉಗ್ರರನ್ನೋ ಅಥವಾ ಮರಗಳನ್ನೋ? ಇದೇನು ಎಲೆಕ್ಷನ್ ಗಿಮಿಕ್ ಆಗಿತ್ತಾ? ವಿದೇಶೀ ವೈರಿಯೊಂದಿಗೆ ಹೋರಾಡುವ ನೆವದಲ್ಲಿ ನಮ್ಮ ದೇಶದಲ್ಲಿ ವಂಚನೆಯಾಗುತ್ತಿದೆ. ಸೇನೆಯನ್ನು ರಾಜಕೀಯಗೊಳಿಸುವುದನ್ನು ಬಿಟ್ಟುಬಿಡಿ. ಸೇನೆಯು ಒಂದು ಸರಕಾರದಷ್ಟೇ ಪವಿತ್ರವಾದುದಾಗಿದೆ” ಎಂದು ಮಾಜಿ ಬಿಜೆಪಿ ನಾಯಕರೂ ಆದ ನವಜ್ಯೋತ್ ಸಿಧು ಟ್ವೀಟ್ ಮಾಡಿದ್ದಾರೆ.

ಕುತೂಹಲದ ವಿಚಾರವೆಂದರೆ, ಬಾಲಾಕೋಟ್​ನಲ್ಲಿ ಭಾರತದ ಯುದ್ಧವಿಮಾನಗಳು ದಾಳಿ ಮಾಡಿದ್ದು ಹೌದು ಎಂಬುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಆದರೆ, ಅಲ್ಲಿ ಯಾವುದೇ ಉಗ್ರರ ಕ್ಯಾಂಪ್ ಇರಲಿಲ್ಲ. ಕಾಡುಗುಡ್ಡದ ಮೇಲೆ ದಾಳಿ ಮಾಡಿ ಅಲ್ಲಿನ ಹಲವು ಮರ ಗಿಡಗಳನ್ನು ಧ್ವಂಸ ಮಾಡಲಾಗಿದೆ ಅಷ್ಟೇ ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನವು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ದಾಳಿಯ ಸ್ಥಳಕ್ಕೆ ಕರೆದುಕೊಂಡು ಹೋಗಿ ದರ್ಶನ ಮಾಡಿಸಿದೆ. ದಾಳಿ ಸ್ಥಳದ ಸಮೀಪದ ಹಳ್ಳಿಯ ಒಬ್ಬ ವ್ಯಕ್ತಿಗೆ ಗಾಯವಾಗಿದ್ದು ಬಿಟ್ಟರೆ ಬೇರೆ ಯಾವ ವ್ಯಕ್ತಿಗೂ ಹಾನಿಯಾಗಿಲ್ಲ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಹಾಗೆಯೇ, ಭಾರತ ದೇಶವು ತನ್ನ ಕಾಡಿನಲ್ಲಿರುವ ಪೈನ್ ಮರಗಳನ್ನು ಧ್ವಂಸ ಮಾಡಿದ್ದು, ತನ್ನ ವಿರುದ್ಧ ಪರಿಸರ ಭಯೋತ್ಪಾದನೆ ಮಾಡುತ್ತಿದೆ ಎಂದು ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರೋಪ ಮಾಡುತ್ತಿದೆ.

ಭಾರತದ ವಾಯುಸೇನೆ ಕೂಡ ಈ ದಾಳಿಯಲ್ಲಿ ಎಷ್ಟು ಮಂದಿ ಸತ್ತರೆಂಬ ಅಂಕಿಅಂಶವನ್ನು ಹೇಳಲು ನಿರಾಕರಿಸಿದೆ. ಗುರಿಯ ಮೇಲೆ ಹೊಡೆಯುವುದಷ್ಟೇ ತನ್ನ ಕಾರ್ಯ. ದಾಳಿಯಲ್ಲಿ ಸತ್ತವರ ಸಂಖ್ಯೆಯನ್ನು ತಾವು ಎಣಿಸುವುದಿಲ್ಲ. ಇದನ್ನು ತಿಳಿಸುವುದು ಸರಕಾರದ ಕೆಲಸ ಎಂದು ಭಾರತೀಯ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಇದೇ ವೇಳೆ, ಭಾರತದ ವಿಪಕ್ಷಗಳು ಭಾರತೀಯ ಸೇನಾ ಕಾರ್ಯಾಚರಣೆಯ ವಿಚಾರದಲ್ಲಿ ಭಾರತ ರಾಜಕೀಯಗೊಳಿಸುತ್ತಿದೆ ಎಂಬ ತಮ್ಮ ಆಕ್ಷೇಪವನ್ನು ಮುಂದುವರಿಸಿವೆ. “ಕಾರ್ಯಾಚರಣೆಯಲ್ಲಿ 300-350 ಜನರು ಸತ್ತಿದ್ಧಾರೆಂದು ಭಾರತದ ಮಾಧ್ಯಮಗಳು ಹೇಳುತ್ತಿವೆ. ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಒಂದು ಸಾವು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಎಷ್ಟು ಜನರು ಸತ್ತಿದ್ದಾರೆಂಬುದು ನಮಗೆ ತಿಳಿಯಬೇಕಿದೆ” ಎಂದು ಮಮತಾ ಬ್ಯಾನರ್ಜಿ ಇವತ್ತು ಆಗ್ರಹಿಸಿದ್ದಾರೆ. ಬಹುತೇಕ ವಿಪಕ್ಷ ಮುಖಂಡರು ಇದೇ ಪ್ರಶ್ನೆ ಕೇಳುತ್ತಿದ್ದಾರೆ.

ಇತ್ತ, ಪಾಕಿಸ್ತಾನದ ‘ಸುಳ್ಳು’ ಆರೋಪಗಳಿಗೆ ಭಾರತದ ವಿಪಕ್ಷಗಳೂ ಆಹಾರ ಒದಗಿಸುತ್ತಿವೆ ಎಂದು ಕೇಂದ್ರ ಸರಕಾರವು ಆಕ್ಷೇಪಿಸುತ್ತಿದೆ.

Comments are closed.