
ವಿಜಯಪುರ: ಸರ್ಜಿಕಲ್ ಸ್ಟ್ರೈಕ್ ಕುರಿತು ಸಾಕ್ಷಿ ಕೇಳುವವರನ್ನು ಹೆಲಿಕಾಪ್ಟರ್ನಲ್ಲಿ ಒಯ್ದು ಪಾಕಿಸ್ತಾನದಲ್ಲಿ ಎಸೆಯಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸವನಗೌಡ ರಾ. ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳುವವರನ್ನು ಒಯ್ದು ಪಾಕಿಸ್ತಾನದಲ್ಲಿ ಎಸೆಯಲಿ. ಅವರು ಅಲ್ಲಿಯೇ ಭಾರತೀಯ ಸೇನೆ ನಡೆಸಿದ ಪರಾಕ್ರಮ ವೀಕ್ಷಿಸಲಿ. ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಮಾಯಾವತಿ ಅವರಿಗೆ ಬೇರೆ ಕೆಲಸವಿಲ್ಲ. ಅವರೆಲ್ಲಾ ಭ್ರಷ್ಟಾಚಾರಿಗಳು. ಅವರದು ಮಹಾ ಒಕ್ಕೂಟವಲ್ಲ. ಅದೊಂದು ಮಹಾಕಳ್ಳರ ಕೂಟ ಎಂದು ಯತ್ನಾಳ ಕಟುವಾಗಿ ಟೀಕಿಸಿದರು.
ಇದೇ ವಿಷಯದಲ್ಲಿ ರಾಜ್ಯ ಗೃಹ ಸಚಿವ ಎಂ. ಬಿ. ಪಾಟೀಲ ಭಾರತೀಯ ಸೇನೆಯನ್ನು ಹೊಗಳಿರುವುದು ಸ್ವಾಗತಾರ್ಹ. ಇಂಥ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.
ಸರ್ಜಿಕಲ್ ಸ್ಟ್ರೈಕ್ ಸಂಭ್ರಮಾಚರಣೆ ಕುರಿತು ಸಿಎಂ ಎಚ್. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಯ ಕುರಿತು ಕಿಡಿ ಕಾರಿದ ಯತ್ನಾಳ, ಭಾರತ ಕ್ರಿಕೆಟ್ನಲ್ಲಿ ಗೆದ್ದಾಗ, ಯೋಧರು ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಸಂಭ್ರಮಿಸಬಾರದು ಎಂದಾದರೆ, ನಾವೇನು ಸೀತಾರಾಮ ಕಲ್ಯಾಣ ಸಿನೇಮಾ ನೋಡಿ ಸಂಭ್ರಮಿಸಬೇಕೇ? ಎಂದು ಪ್ರಶ್ನಿಸಿದರು.
ಮುಂದಿನ ಬಾರಿ ಸಿಎಂ ಮನೆ ಎದುರೇ ಹೋಗಿ ಪಟಾಕಿ ಸಿಡಿಸುವುದಾಗಿ ಯತ್ನಾಳ ಎಚ್ಚರಿಕೆ ನೀಡಿದರು.ಈಗ ಉಮೇಶ್ ಜಾಧವ್ ರಾಜೀನಾಮೆ ನೀಡಿದ್ದು, ಕಲಬುರಗಿಯಲ್ಲಿ ಪ್ರಧಾನಿ ಸಮ್ಮುಖದಲ್ಲಿ ಅವರು ಬಿಜೆಪಿ ಸೇರಿ ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಲಿದ್ದಾರೆ. ಇನ್ನು ಮುಂದೆ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಮನೆಗಳು ಖಾಲಿಯಾಗಲಿವೆ ಎಂದು ಹೇಳುವ ಮೂಲಕ ಮತ್ತಷ್ಟು ಜನ ಶಾಸಕರು ಬಿಜೆಪಿ ಸೇರುವ ಸುಳಿವು ನೀಡಿದರು.
ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರಿಗೆ ಈ ಬಾರಿ ಟಿಕೆಟ್ ಬೇಡ. ಈ ನಿಟ್ಟಿನಲ್ಲಿ ತಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ. ರಮೇಶ ಜಿಗಜಿಣಗಿ ಬದಲು ಯುವ, ಕ್ರಿಯಾಶೀಲ ದಲಿತ ಅಭ್ಯರ್ಥಿಗೆ ಈ ಬಾರಿ ವಿಜಯಪುರ(ಮೀ) ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಬೇಕು. ಹಾಗೆ ಮಾಡಿದರೆ, ಮೋದಿ ಹೆಸರಿನಲ್ಲಿಯೇ ಹೊಸ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
Comments are closed.