ರಾಷ್ಟ್ರೀಯ

ಓವೈಸಿಯ ಮುಸ್ಲಿಮ್ ಸ್ಪೀಕರ್ ಉಪಸ್ಥಿತಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವುದಿಲ್ಲ: ಬಿಜೆಪಿ ಶಾಸಕ

Pinterest LinkedIn Tumblr


ಹೈದರಾಬಾದ್: ದೇಶವಿರೋಧಿ ಮತ್ತು ಹಿಂದು ವಿರೋಧಿ ಎಐಎಂಐಎಂ ಪಕ್ಷದ ಹಂಗಾಮಿ ಸ್ಪೀಕರ್ ಅವರ ಉಪಸ್ಥಿತಿಯಲ್ಲಿ ತಾನು ಪ್ರಮಾಣ ವಚನ ತೆಗೆದುಕೊಳ್ಳುವುದಿಲ್ಲ ಎಂದು ತೆಲಂಗಾಣ ಬಿಜೆಪಿ ಶಾಸಕ ರಾಜ ಸಿಂಗ್ ಶಪಥ ಮಾಡಿದ್ದಾರೆ. ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸೇ ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷವು ಹಿಂದೂಗಳನ್ನು ನಾಶ ಮಾಡುವ ಉದ್ದೇಶ ಹೊಂದಿದೆ. ಅವರು ವಂದೇ ಮಾತರಂ ಹಾಡುವುದಿಲ್ಲ; ಭಾರತ್ ಮಾತಾ ಕೀ ಜೈ ಎಂದು ಹೇಳುವುದಿಲ್ಲ. ಇಂಥ ಪಕ್ಷದ ಸ್ಪೀಕರ್ ಅಡಿಯಲ್ಲಿ ತಾನು ಶಾಸಕನಾಗಿ ಪ್ರಮಾಣ ಮಾಡುವುದಿಲ್ಲ ಎಂದು ರಾಜ ಸಿಂಗ್ ತಿಳಿಸಿದ್ದಾರೆ.

ಗೋಶಾಮಹಲ್ ಕ್ಷೇತ್ರದ ಶಾಸಕರೂ ಆಗಿರುವ ರಾಜ ಸಿಂಗ್ ಅವರು ವಿವಾದಿತ ಹೇಳಿಕೆಗಳ ಮೂಲಕವೇ ಹೆಸರುವಾಸಿಯಾಗಿದ್ದಾರೆ. ಇವರ ವಿರುದ್ಧ 43 ವಿವಿಧ ಪ್ರಕರಣಗಳು ದಾಖಲಾಗಿವೆ.

ಹಂಗಾಮಿ ಸ್ಪೀಕರ್ ಆಗಿ ಎಐಎಂಐಎಂ ಶಾಸಕರನ್ನು ಆಯ್ಕೆ ಮಾಡಿದ ಕ್ರಮವನ್ನು ಬಿಜೆಪಿ ಶಾಸಕ ರಾಜಾ ಸಿಂಗ್ ಬಲವಾಗಿ ವಿರೋಧಿಸಿದ್ದಾರೆ. ತೆಲಂಗಾಣದಲ್ಲಿ ಸತತ ಎರಡನೇ ಅವಧಿಗೆ ಸಿಎಂ ಆಗಿರುವ ಕೆ. ಚಂದ್ರಶೇಖರ್ ರಾವ್ ಅವರನ್ನು ನಿಜಾಮರ ಅನುಯಾಯಿ ಎಂದೂ ಸಿಂಗ್ ಟೀಕಿಸಿದ್ಧಾರೆ.

“ಎಂಐಎಂ ಪಕ್ಷದ ಸ್ಪೀಕರ್ ಉಪಸ್ಥಿತಿಯಲ್ಲಿ ನಾನು ವಿಧಾನಸಭೆಗೆ ಹೋಗಿ ಪ್ರಮಾಣವಚನ ಸ್ವೀಕರಿಸುವುದಿಲ್ಲ. ಬೇರೆ ಪಕ್ಷದ ನಾಯಕರು ಆ ವಿಧಾನಸಭೆಗೆ ಹೋದರೂ ತಾನು ಮಾತ್ರ ಅಲ್ಲಿ ಕಾಲಿಡುವುದಿಲ್ಲ” ಎಂದು ರಾಜಾ ಸಿಂಗ್ ಖಂಡತುಂಡವಾಗಿ ಹೇಳಿದ್ದಾರೆ.

ತೆಲಂಗಾಣದ ನೂತನ ವಿಧಾನಸಭೆಯ ಸರ್ವ ಸದಸ್ಯರು ಜನವರಿ 17ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದಕ್ಕೂ ಮುನ್ನ, ಜನವರಿ 16ರಂದು ಎಐಎಂಐಎಂ ಪಕ್ಷದ ಶಾಸಕ ಮುಮ್ತಾಜ್ ಅಹ್ಮದ್ ಖಾನ್ ಅವರು ಹಂಗಾಮಿ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜನವರಿ 17ರಿಂದ 20ವರೆಗೆ ನೂತನ ವಿಧಾನಸಭೆಯ ಮೊದಲ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲೇ ಪೂರ್ಣಪ್ರಮಾಣದ ಸ್ಪೀಕರ್ ಸ್ಥಾನಕ್ಕೆ ಚುನಾವಣೆಯೂ ನಡೆಯಲಿದೆ. ಜನವರಿ 18ರಂದು ರಾಜ್ಯಪಾಲ ಇಎಸ್​ಎಲ್ ನರಸಿಂಹನ್ ಅವರು ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಇತ್ತೀಚೆಗೆ ನಡೆದ ತೆಲಂಗಾಣ ಚುನಾವಣೆಯಲ್ಲಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವು ಅಭೂತಪೂರ್ವ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಅಧಿಕಾರ ಹಿಡಿದಿದೆ.

Comments are closed.