ರಾಷ್ಟ್ರೀಯ

ರಾಜಸ್ಥಾನದ ಮುಖ್ಯಮಂತ್ರಿ ರೇಸ್ ನಲ್ಲಿ ಅಶೋಕ್ ಗೆಹ್ಲೋಟ್

Pinterest LinkedIn Tumblr


ಜೈಪುರ: ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ (Rajasthan elections 2018) ಕಾಂಗ್ರೆಸ್ ಒಟ್ಟು 199 ಕ್ಷೇತ್ರಗಳ ಪೈಕಿ 99 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 73 ಸ್ಥಾನಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಆರು ಸ್ಥಾನಗಳನ್ನು ಪಡೆದರೆ, ಇತರರು 21 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವಿಗೆ ಪಕ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಪಾತ್ರ ಮುಖ್ಯವಾಗಿದೆ ಎಂದು ಪರಿಗಣಿಸಲಾಗಿದೆ. 2013 ರ ರಾಜಸ್ಥಾನ ವಿಧಾನಸಭಾ ಚುನಾವಣೆ ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ಈ ಚುನಾವಣೆಯಲ್ಲಿ ಮತ್ತೆ ಪಕ್ಷದಲ್ಲಿ ಗೆಲುವಿನ ಪತಾಕೆ ಹಾರಿಸಲಾಗಿದೆ. ಇದೀಗ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಬಗ್ಗೆ ಇಂದು ಜೈಪುರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ರಾಜಸ್ಥಾನದ ‘ರಾಜಕೀಯದ ಜಾದೂಗಾರ’ ಎಂದೇ ಖ್ಯಾತಿ ಪಡೆದಿರುವ ಅಶೋಕ್ ಗೆಹ್ಲೋಟ್, 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬಹುಮತದ ಸನಿಹಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಾಗಾಗಿ ಗೆಹ್ಲೋಟ್ ಅವರಿಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ವಹಿಸಬಹುದೆಂದು ಊಹಿಸಲಾಗಿದೆ.

ಸಿಎಂ ರೇಸ್‌ನಲ್ಲಿ ಗೆಹ್ಲೋಟ್ ಹೆಸರು ಮುಂಚೂಣಿಯಲ್ಲಿರಲು ಪ್ರಮುಖ ಕಾರಣಗಳು:
1. ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಬಂಡಾಯ ಎದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿರುವ ಓರ್ವ ವ್ಯಕ್ತಿ ಅಶೋಕ್ ಗೆಹ್ಲೋಟ್ಗೆ ಆಪ್ತ ಎಂದು ಹೇಳಲಾಗುತ್ತಿದೆ. ಅದೇ ರೀತಿ ಸ್ವತಂತ್ರ ಶಾಸಕರಾಗಿ ಆಯ್ಕೆಯಾಗಿರುವ ಬಾಬೂಲಾಲ್ ನಗರ್, ಮಹಾದೇವ್ ಸಿಂಗ್ ಖಂಡೇಲಾ, ರಾಮಕೆಶ್ ಮೀನಾ ಸಹ ಗೆಹ್ಲೋಟ್ ಅವರಿಗೆ ಬೆಂಬಲ ನೀಡುತ್ತಾರೆ ಎನ್ನಲಾಗಿದೆ.

2. ರಾಜಸ್ಥಾನದಲ್ಲಿ ಕಾಂಗ್ರೆಸ್ ಬಹುಮತ ಗಳಿಸಿರುವುದರಿಂದ ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸುವ ಸಂಭವನೀಯತೆ ಹೆಚ್ಚು. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಮಾತ್ರ ಉಳಿದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಶೋಕ್ ಗೆಹ್ಲೋಟ್ ಅವರಿಗೆ ಮಣೆ ಹಾಕುವ ಸಾಧ್ಯತೆ ಇದೆ.

3. ಅಶೋಕ್ ಗೆಹ್ಲೋಟ್ ಸರ್ದಾರ್ಪುರ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮಾಲಿ ಸಮುದಾಯದ ಗೆಹ್ಲೋಟ್ ಪ್ರಭಾವಿ ರಾಜಕಾರಣಿ. ರಾಜಸ್ಥಾನದ ಜನರ ನಾಡಿ ಮಿಡಿತವನ್ನು ಚೆನ್ನಾಗಿ ಬಲ್ಲ ವ್ಯಕ್ತಿ.

4. ಕೆಲವು ತಿಂಗಳುಗಳ ಹಿಂದೆ, ಗುಜರಾತ್ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆಹ್ಲೋಟ್ ಕಾಂಗ್ರೆಸ್ ಪ್ರಬಲ ಸ್ಪರ್ಧೆ ಒಡ್ಡಲು ಬಹಳ ಶ್ರಮಿಸಿದ್ದರು.

5. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಸ್ಥೆಯ) ನೇತೃತ್ವ ವಹಿಸಿದ್ದ ಗೆಹ್ಲೋಟ್ ಅವರನ್ನು ಪ್ರಬಲ ನಾಯಕ ಮತ್ತು ಉತ್ತಮ ಸಂಘಟಕ ಎಂದು ಪರಿಗಣಿಸಲಾಗಿದೆ.

ಪ್ರಭಾವಿತರಾಗಿದ್ದ ಇಂದಿರಾ​:
‘ಮರ್ವಾಡ್ ಗಾಂಧಿ’ ಎಂದು ಪರಿಗಣಿಸಲ್ಪಡುವ ಗೆಹ್ಲೋಟ್ ಅವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿ ರಾಜಕೀಯಕ್ಕೆ ಕರೆತಂದರು ಎಂದು ತಜ್ಞರು ಹೇಳುತ್ತಾರೆ. ಈಶಾನ್ಯದಲ್ಲಿನ ನಿರಾಶ್ರಿತರಿಗಾಗಿ ಗೆಹ್ಲೋಟ್ ಅವರು ಮಾಡುತ್ತಿದ್ದ ಉತ್ತಮ ಕೆಲಸಗಳನ್ನು ನೋಡಿ ಪ್ರಭಾವಿತರಾಗಿದ್ದ ಇಂದಿರಾ ಅವರನ್ನು ಪಕ್ಷಕ್ಕೆ ಕರೆತಂದರು.

1974 ರಲ್ಲಿ ರಾಜಕೀಯಕ್ಕೆ ಬಂದ ಗೆಹ್ಲೋಟ್:
ಮೂಲತಃ ಜೋಧಪುರದವರಾದ ಗೆಹ್ಲೋಟ್ ಮೇ 3, 1951 ರಂದು ಜನಿಸಿದರು, ಗೆಹ್ಲೋಟ್ 1974 ರಲ್ಲಿ ಎನ್ಎಸ್ಯುಐ ಅಧ್ಯಕ್ಷರಾಗಿ ಅವರ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 1979 ರವರೆಗೂ ಈ ಹುದ್ದೆಯಲ್ಲಿದ್ದರು. 1998 ರಿಂದ 2003 ರವರೆಗೂ ಮತ್ತು 2008 ರಿಂದ 2013 ರವರೆಗೆ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದರು.

5 ಬಾರಿ ಲೋಕಸಭೆಗೆ ಆಯ್ಕೆ:
ಗೆಹ್ಲೋಟ್ 1979 ರಿಂದ 1982 ರವರೆಗೆ ಜೋಧಪುರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು ಮತ್ತು 1982 ರಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅದೇ ಸಮಯದಲ್ಲಿ ಗೆಹ್ಲೋಟ್ 1980 ರಲ್ಲಿ ಎಂಪಿ ಆಗಿ ಆಯ್ಕೆಯಾದರು. 7, 8, 10, 11 ಮತ್ತು 12ನೇ ಲೋಕಸಭೆಯಲ್ಲಿ ಅವರು ಆಯ್ಕೆಯಾದರು. ಗೆಹ್ಲೋಟ್ 1999 ರಿಂದ ಜೋಧ್ಪುರದ ಸರ್ದಾರ್ಪುರಾ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು 11 ನೇ, 12, 13 ಮತ್ತು 14 ನೇ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಐದು ಬಾರಿ ಸಂಸದರಾಗಿದ್ದ ಗೆಹ್ಲೋಟ್ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಸಚಿವ ಸ್ಥಾನ:
1983-84ರಲ್ಲಿ ಪ್ರವಾಸೋದ್ಯಮದ ಉಪ ಮಂತ್ರಿಯಾಗಿದ್ದ ಅವರು 1983-84ರಲ್ಲಿ ಸಿವಿಲ್ ಏವಿಯೇಷನ್, 1984 ರಲ್ಲಿ ಕ್ರೀಡಾ ಉಪ ಮಂತ್ರಿಯಾಗಿ, 1984-85ರಲ್ಲಿ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವರಾಗಿ 1991-93 ರವರೆಗೆ ಟೆಕ್ಸ್ಟೈಲ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

3 ಬಾರಿ ಕಾಂಗ್ರೆಸ್ ರಾಜ್ಯಾಧ್ಯಕ್ಷ:
ಗೆಹ್ಲೋಟ್ 2004-2009ರವರೆಗೂ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ದೆಹಲಿ ಮತ್ತು ಸೆವೆಡಾಲ್ ಇನ್ ಚಾರ್ಜ್) ಜನರಲ್ ಸೆಕ್ರೆಟರಿ ಆಗಿದ್ದರು. 2004 ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ಹಿಮಾಚಲ ಪ್ರದೇಶ ಮತ್ತು ಛತ್ತೀಸ್ಗಢದ ಉಸ್ತುವಾರಿ ವಹಿಸಿದ್ದರು. ರಾಜಸ್ಥಾನ್ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಹಲವಾರು ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದ ಗೆಹ್ಲೋಟ್ ಮೂರು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.

ನಿರಾಶ್ರಿತರ ಶಿಬಿರಗಳಲ್ಲಿ ಕೆಲಸ:
ರಾಜಕೀಯವನ್ನು ಹೊರತು ಪಡಿಸಿ ಹಲವಾರು ದೇಶಗಳನ್ನು ಸುತ್ತಿರುವ ಗೆಹ್ಲೋಟ್ 1971 ರಲ್ಲಿ ಬಾಂಗ್ಲಾದೇಶದ ವಿಮೋಚನೆ ಯುದ್ಧದ ಸಮಯದಲ್ಲಿ ಪಶ್ಚಿಮ ಬಂಗಾಳದ ಬಾಂಗ್ಲಾದೇಶಿ ನಿರಾಶ್ರಿತರ ಶಿಬಿರಗಳಲ್ಲಿ ಕೆಲಸ ಮಾಡಿದರು. ಆಲ್ಲದೇ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

Comments are closed.