ಮುಂಬೈ

ಆರ್​ಬಿಐ ಬಿಕ್ಕಟ್ಟು: ಇತಿಹಾಸಜ್ಞನ ನೇಮಕಕ್ಕೆ ಟ್ವೀಟಿಗರ ಲೇವಡಿ

Pinterest LinkedIn Tumblr


ಬೆಂಗಳೂರು: ಹಣಕಾಸು ಆಯೋಗದ ಸದಸ್ಯ ಹಾಗೂ ಮಾಜಿ ವಿತ್ತ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ನೂತನ ಆರ್​ಬಿಐ ಗವರ್ನರ್ ಆಗಿ ನೇಮಕವಾಗಿರುವುದು ಈಗ ವಿಪಕ್ಷಗಳಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ವಿಪಕ್ಷಗಳಿಂದ ವಾಗ್ದಾಳಿ ಪ್ರಾರಂಭವಾಗುವ ಮುಂಚೆ ಸೋಷಿಯಲ್ ಮೀಡಿಯಾದಲ್ಲಿ ನರೇಂದ್ರ ಮೋದಿ ಮತ್ತು ಶಕ್ತಿಕಾಂತ್ ದಾಸ್ ಇಬ್ಬರೂ ಟ್ರೋಲ್ ಆಗುತ್ತಿದ್ದಾರೆ. ಟ್ವಿಟ್ಟಿಗರಂತೂ ಶಕ್ತಿಕಾಂತ್ ದಾಸ್ ಮೇಲೆ ದಾಳಿ ನಡೆಸಿ ಹುರಿದುಮುಕ್ಕುತ್ತಿದ್ದಾರೆ.

ಆರ್​ಬಿಐಗೆ ಕಳೆದ 4 ಬಾರಿ ಗವರ್ನರ್ ಆಗಿದ್ದ ವೈ.ವಿ. ರೆಡ್ಡಿ, ಡಿ. ಸುಬ್ಬಾರಾವ್, ರಘುರಾಮ್ ರಾಜನ್, ಉರ್ಜಿತ್ ಪಟೇಲ್ ಅವರೆಲ್ಲರೂ ಎಕನಾಮಿಕ್ಸ್​ನಲ್ಲಿ ಪಿಹೆಚ್​ಡಿ ಮಾಡಿದವರಾಗಿ, ನುರಿತ ಅರ್ಥಶಾಸ್ತ್ರಜ್ಞರೆನಿಸಿದ್ದರು. ಆದರೆ, ಶಕ್ತಿಕಾಂತ್ ದಾಸ್ ಅವರು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದವರು. ಗೋಕುಲಾಷ್ಟಮಿಗೂ ಇಮಾಮ್ ಸಾಬ್​ಗೂ ಸಂಬಂಧವಿದ್ದಂತೆ ಆಗಿದೆ ಇತಿಹಾಸಕ್ಕೂ ಅರ್ಥಶಾಸ್ತ್ರಕ್ಕೂ ಇರುವ ಸಂಬಂಧ ಎಂದು ಸೋಷಿಯಲ್ ಮೀಡಿಯಾದಲ್ಲಿ ತಮಾಷೆ ಮಾಡುತ್ತಿರುವವರಿದ್ದಾರೆ.

ಕೇಂದ್ರದ ಮಹತ್ವದ ನಿರ್ಧಾರಗಳಾದ ನೋಟ್​ಬ್ಯಾನ್, ಜಿಎಸ್​ಟಿ ಮೊದಲಾದವನ್ನ ಜಾರಿಗೆ ತರಲು ಶ್ರಮ ವಹಿಸಿದವರಲ್ಲಿ ಶಕ್ತಿಕಾಂತ್ ದಾಸ್ ಕೂಡ ಒಬ್ಬರು. ಆರ್ಥಿಕ ವ್ಯವಹಾರ ಇಲಾಖೆಯ ಕಾರ್ಯದರ್ಶಿಯಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಅವರ ಶ್ರಮಕ್ಕೆ ಫಲವಾಗಿ ಆರ್​ಬಿಐ ಗವರ್ನರ್ ಸ್ಥಾನ ಲಭಿಸಿದೆ. ಆದರೆ, ಆರ್​ಬಿಐನಂಥ ಅತ್ಯಂತ ಮಹತ್ವದ ಸಂಸ್ಥೆಯ ಮುಖ್ಯಸ್ಥ ಹುದ್ದೆಗೆ ಅದರ ಒಳಸುಳಿ ಗೊತ್ತಿಲ್ಲದ ವ್ಯಕ್ತಿಯನ್ನು ತಂದು ಕೂರಿಸುವುದು ಎಷ್ಟು ಸರಿ ಎಂಬುದು ಟ್ವೀಟ್ಟಿಗರ ಪ್ರಶ್ನೆ. ಶಕ್ತಿಕಾಂತ್ ದಾಸ್ ಈ ಹಿಂದೆ ನೀಡಿದ್ದ ಕೆಲ ಹೇಳಿಕೆಗಳನ್ನ ಉದಾಹರಿಸುತ್ತಾ ಅವರನ್ನು ಕುಹಕ ಮಾಡುತ್ತಿದ್ದಾರೆ.

ನೋಟ್ ಬ್ಯಾನ್ ವೇಳೆ ಎಟಿಎಂಗಳಲ್ಲಿ ಉದ್ದುದ್ದ ಸಾಲುಗಳಿಗೆ ಶಕ್ತಿಕಾಂತ್ ತಮ್ಮದೇ ವ್ಯಾಖ್ಯಾನ ನೀಡಿದ್ದರು. ಅದೇ ಜನರು ಬೇರೆ ಬೇರೆ ಸ್ಥಳಗಳಿಗೆ ಪದೇ ಪದೇ ಹೋಗುತ್ತಿರುವುದರಿಂದ ಎಟಿಎಂಗಳಲ್ಲಿ ದೊಡ್ಡ ಕ್ಯೂ ನಿರ್ಮಾಣವಾಗುತ್ತಿದೆ ಎಂದು ಶಕ್ತಿಕಾಂತ್ ಹೇಳಿಕೆ ನೀಡಿದ್ದನ್ನು ಟ್ವೀಟಿಗರೊಬ್ಬರು ಉದಾಹರಣೆಯಾಗಿ ನೀಡಿದ್ದಾರೆ.

ನೂತನ ಆರ್​ಬಿಐ ಗವರ್ನರ್ ಅವರು ತಮ್ಮ ಕಾಲೇಜು ಸೀನಿಯರ್ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು, ಹಿಸ್ಟರಿ ಓದಿದ ತಮ್ಮಂಥವರೂ ಕೂಡ ಆರ್​ಬಿಐ ಗವರ್ನರ್ ಹುದ್ದೆಯ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದು ಹಾಸ್ಯ ಮಾಡಿದ್ದಾರೆ.

ಆದರೆ, ಶಕ್ತಿಕಾಂತ್ ದಾಸ್ ಅವರು ಎಂಎ ಎಕನಾಮಿಕ್ಸ್ ಮಾಡಿದ್ದಾರಾದರೂ, ಬೆಂಗಳೂರಿನ ಐಐಎಂನಲ್ಲಿ ಅಡ್ವಾನ್​ಸ್ಡ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ ಕೋರ್ಸ್ ಮಾಡಿದ್ದಾರೆ. ಎನ್​ಐಬಿಎಂ ಶಿಕ್ಷಣ ಸಂಸ್ಥೆಯಲ್ಲಿ ಡೆವಲಪ್ಮೆಂಟ್ ಬ್ಯಾಂಕಿಂಗ್ ಮತ್ತು ಇನ್ಸ್​ಟಿಟ್ಯೂಷನಲ್ ಕ್ರೆಡಿಟ್ ವಿಷಯದಲ್ಲಿ ಕೋರ್ಸ್ ಮಾಡಿದ್ದಾರೆ. ಇದೇ ಆಧಾರದ ಮೇಲೆ ಹಣಕಾಸು ಇಲಾಖೆ, ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಶಕ್ತಿಕಾಂತ್ ದಾಸ್ ಅವರಿಗೆ ಪ್ರಮುಖ ಹುದ್ದೆ ಕೊಡಲಾಗಿತ್ತು.

ಇದೇ ವೇಳೆ, ಅರ್ಥಶಾಸ್ತ್ರ ವಿಚಾರದಲ್ಲಿ ನೇರ ಮಾತಿಗೆ ಹೆಸರುವಾಸಿಯಾದ ಸುಬ್ರಮಣಿಯನ್ ಸ್ವಾಮಿ ಅವರು ನೂತನ ಆರ್​ಬಿಐ ಗವರ್ನರ್ ನೇಮಕಾತಿ ಬಗ್ಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ಕೊಡದೇ ಇರುವುದು ಕುತೂಹಲ ಮೂಡಿಸಿದೆ.

Comments are closed.