ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರಥಯಾತ್ರೆಯ ಅನುಮತಿಗೆ ಕಲ್ಕತ್ತ ಹೈಕೋರ್ಟ್ ನಿಂದ ನಿರಾಕರಣೆ

Pinterest LinkedIn Tumblr


ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥಯಾತ್ರೆ ನಡೆಸಲು ಕಲ್ಕತ್ತ ಹೈಕೋರ್ಟ್ ಅನುಮತಿ ನಿರಾಕರಿಸಿದೆ. ಶುಕ್ರವಾರ ಪಶ್ಚಿಮ ಬಂಗಾಳದ ಕೂಚ್‌ ಬೆಹಾರ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಪ್ರಜಾಪ್ರಭುತ್ವ ರಕ್ಷಿಸಿ’ ಎಂಬ ಬಿಜೆಪಿ ರ‍್ಯಾಲಿಗೆ ಚಾಲನೆ ನೀಡಬೇಕಿತ್ತು. ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ ಬಿಜೆಪಿ ರಥಯಾತ್ರೆಗೆ ಅನುಮತಿ ನಿರಾಕರಿಸಿದ ಬಳಿಕ ಬಿಜೆಪಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

ಬಿಜೆಪಿಯ ರ‍್ಯಾಲಿಯಿಂದ ಕೋಮು ಸೌಹಾರ್ದತೆಗೆ ಧಕ್ಕೆ ಸಂಭವಿಸಬಹುದೆಂಬ ಕಾರಣಕ್ಕೆ ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹಾಗೂ ಪಶ್ಚಿಮ ಬಂಗಾಳ ಸರಕಾರ ಅಮಿತ್ ಶಾ ನೇತೃತ್ವದ ರಥಯಾತ್ರೆಗೆ ಅನುಮತಿ ನಿರಾಕರಿಸಿತ್ತು. ಇನ್ನು, ಬಿಜೆಪಿ ಮನವಿಯನ್ನು ತಳ್ಳಿಹಾಕಿದ ಕೋರ್ಟ್, ಪಶ್ಚಿಮ ಬಂಗಾಳದ ಎಲ್ಲ ಜಿಲ್ಲೆಗಳಲ್ಲೂ ಬಿಜೆಪಿ ರಥಯಾತ್ರೆ ನಡೆಸುವ ಬಗ್ಗೆ ಡಿಸೆಂಬರ್ 21ರೊಳಗೆ ವರದಿ ನೀಡಬೇಕೆಂದು ಎಲ್ಲಾ ಜಿಲ್ಲೆಗಳ ಎಸ್‌ಪಿಗೆ ಕಲ್ಕತ್ತ ಹೈಕೋರ್ಟ್ ನಿರ್ದೇಶಿಸಿದೆ.

ಅಲ್ಲದೆ, ಜನವರಿ 9 ರಂದು ಮುಂದಿನ ವಿಚಾರಣೆ ನಡೆಯಲಿದ್ದು. ಅಲ್ಲಿಯವರೆಗೆ ಬಿಜೆಪಿ ಯಾವುದೇ ರ‍್ಯಾಲಿ ನಡೆಸುವಂತಿಲ್ಲ ಎಂದು ಕಲ್ಕತ್ತ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದೆ.

ಪಶ್ಚಿಮ ಬಂಗಾಳದ 42 ಲೋಕಸಭೆ ಕ್ಷೇತ್ರಗಳನ್ನು ಒಳಗೊಂಡಂತೆ ಮೂರು ರಥಯಾತ್ರೆಗಳನ್ನು ನಡೆಸಲು ಬಿಜೆಪಿ ಮುಂದಾಗಿತ್ತು. ಡಿಸೆಂಬರ್ 7 ರಂದು ಕೂಚ್‌ ಬೆಹಾರ್‌ನಲ್ಲಿ ಮೊದಲ, ಡಿಸೆಂಬರ್ 9 ರಂದು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಹಾಗೂ ಭಿರ್‌ಭುಮ್‌ ಜಿಲ್ಲೆಯಲ್ಲಿ ಡಿಸೆಂಬರ್ 14 ರಂದು ರ‍್ಯಾಲಿ ನಡೆಸಲು ಬಿಜೆಪಿ ಮುಂದಾಗಿತ್ತು.

ಇನ್ನು, ಕಲ್ಕತ್ತ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ಬಗ್ಗೆ ಮಾತನಾಡಿದ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್‌, ”ಹೈಕೋರ್ಟ್ ತೀರ್ಪಿನ ವಿರುದ್ಧ ದ್ವಿಸದಸ್ಯ ಪೀಠಕ್ಕೆ ನಾಳೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ನಾವು ಪೊಲೀಸರ ಸಲಹೆ ಮೇರೆಗೆ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬೇಕಾಗಿದೆ. ದ್ವಿಸದಸ್ಯ ಪೀಠ ನೀಡುವ ತೀರ್ಪನ್ನು ನಾವು ಪಾಲಿಸುತ್ತೇವೆ” ಎಂದೂ ತಿಳಿಸಿದರು.

Comments are closed.