ರಾಷ್ಟ್ರೀಯ

ಬಿಜೆಪಿ ತೊರೆದ ಸಂಸದೆ ಸಾವಿತ್ರಿಬಾಯಿ ಫುಲೆ

Pinterest LinkedIn Tumblr


ಲಕ್ನೋ: ಆಂಜನೇಯ ಒಬ್ಬ ದಲಿತ ಎಂದು ಯೋಗಿ ಆದಿತ್ಯನಾಥ್ ನೀಡಿದ್ದ ಹೇಳಿಕೆ ವಿರುದ್ಧ ನಿನ್ನೆ ತಿರುಗೇಟು ನೀಡಿದ್ದ ಬಿಜೆಪಿ ಸಂಸದೆ ಸಾವಿತ್ರಿಬಾಯಿ ಫುಲೆ ಅವರು ಇಂದು ಪಕ್ಷದಿಂದಲೇ ಹೊರಬಂದಿದ್ದಾರೆ. ದಲಿತರನ್ನು ದಮನ ಮಾಡಲು ಬಿಜೆಪಿಯಿಂದ ದೊಡ್ಡ ಸಂಚು ನಡೆದಿದೆ ಎಂದು ಆರೋಪಿಸಿರುವ ಸಾವಿತ್ರಿಬಾಯಿ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಬಹ್ರಾಚ್ ಕ್ಷೇತ್ರದ ಸಂಸದೆಯಾಗಿರುವ ಹಾಗೂ ದಲಿತ ಸಮುದಾಯಕ್ಕೆ ಸೇರಿರುವ ಫುಲೆ ಅವರು ಅಂಬೇಡ್ಕರ್ ಪುಣ್ಯತಿಥಿಯ ದಿನದಂದೇ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

“ಇವತ್ತಿನಿಂದ ನನಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನಾನು ದಲಿತೆ ಎಂಬ ಕಾರಣಕ್ಕೆ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಯಿತು. ದಲಿತರು ಹಾಗೂ ಅವರ ಹಕ್ಕುಗಳ ದಮನಕ್ಕಾಗಿ ದೊಡ್ಡಮಟ್ಟದ ಸಂಚು ನಡೆದಿದೆ. ದಲಿತರು ಮತ್ತು ಹಿಂದುಳಿದವರಿಗೆ ನೀಡಿರುವ ಮೀಸಲಾಯಿತಿಯನ್ನು ನಿಧಾನವಾಗಿ ಕಿತ್ತುಕೊಳ್ಳಲಾಗುತ್ತಿದೆ. ಸಂವಿಧಾನಕ್ಕಾಗಿ ನನ್ನ ಹೋರಾಟ ಮುಂದುವರಿಸುತ್ತೇನೆ. ಜನವರಿ 23ರಂದು ಲಕ್ನೋದಲ್ಲಿ ದೊಡ್ಡ ಸಮಾವೇಶ ನಡೆಸುತ್ತೇನೆ,” ಎಂದು ಸಾವಿತ್ರಿ ಫುಲೆ ಹೇಳಿದ್ದಾರೆ.

37 ವರ್ಷದ ಸಾವಿತ್ರಿ ಬಾಯಿ ಅವರು ದಲಿತ ಬೌದ್ಧ ಧರ್ಮೀಯರಾಗಿದ್ದು, ಇತ್ತೀಚೆಗೆ ಬಿಜೆಪಿಯ ಕೆಲ ನೀತಿಗಳನ್ನು ಬಹಿರಂಗವಾಗಿಯೇ ವಿರೋಧಿಸುತ್ತಾ ಬಂದಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೊನ್ನೆ ಹನುಮಂತ ದೇವರನ್ನು ಅರಣ್ಯವಾಸಿ, ದಲಿತ ಎಂದು ಬಣ್ಣಿಸಿದ್ದರು. ಬಜರಂಗಬಲಿಯು ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮದವರೆಗೆ ಎಲ್ಲಾ ಭಾರತೀಯ ಸಮುದಾಯಗಳನ್ನ ಬೆಸೆಯುವ ಕೆಲಸ ಮಾಡಿದ್ದರು ಎಂದೂ ಯೋಗಿ ಅಭಿಪ್ರಾಯಪಟ್ಟಿದ್ದರು.

ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆಯನ್ನು ಸಾವಿತ್ರಿ ಬಾಯಿ ಫುಲೆ ತೀವ್ರವಾಗಿ ಟೀಕಿಸಿದ್ದರು. ಹನುಮಂತ ದಲಿತನೇ ಆಗಿದ್ದರೆ ದೇಶಾದ್ಯಂತ ಇರುವ ಹನುಮಂತನ ದೇವಸ್ಥಾನಗಳಲ್ಲಿ ದಲಿತ ಪೂಜಾರಿಗಳನ್ನೇ ನೇಮಿಸುವಂತಾಗಲಿ ಎಂದು ಫುಲೆ ಸವಾಲು ಹಾಕಿದ್ದರು.

“ಯೋಗಿ ಅವರಿಗೆ ದಲಿತರ ಮೇಲೆ ನಿಜಕ್ಕೂ ಪ್ರೀತಿ ಇದ್ದದ್ದೇ ಆದಲ್ಲಿ, ಹನುಮಂತನ ಮೇಲಿರುವುದಕ್ಕಿಂತ ಹೆಚ್ಚಿನ ಪ್ರೀತಿಯನ್ನು ಅವರು ದಲಿತರಿಗೆ ತೋರಿಸುತ್ತಿದ್ದರು. ಅವರು ಯಾವತ್ತಾದರೂ ಯಾವುದೇ ದಲಿತರನ್ನು ಆಲಂಗಿಸಿದ್ದಾರಾ? ಅವರು ದಲಿತರ ಮನೆಗಳಲ್ಲಿ ಊಟ ಮಾಡಿರಬಹುದು. ಆದರೆ, ಆ ಅಡುಗೆ ಮಾಡುತ್ತಿದ್ದವರು ದಲಿತರಲ್ಲ. ಈಗ ವಿಧಾನಸಭಾ ಚುನಾವಣೆಗಳು ಇರುವುದರಿಂದ ಜನರಲ್ಲಿ ಮತ ಯಾಚಿಸಲು ಅವರಿಗೆ ಬೇರೆ ವಿಷಯಗಳಿಲ್ಲ. ಹೀಗಾಗಿ, ಹನುಮಾನ್​ಜಿಯನ್ನು ದಲಿತರೆಂದು ಕರೆಯುತ್ತಿದ್ದಾರೆ. ಅವರಿಗೆ ದಲಿತರಿಂದ ಮತಗಳಷ್ಟೇ ಬೇಕಾಗಿರುವುದು. ಇವರ ಢೋಂಗಿತನವನ್ನು ಈ ದೇಶದ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳು ಅರ್ಥ ಮಾಡಿಕೊಂಡಿದ್ದಾರೆ,” ಎಂದು ಸಾವಿತ್ರಿ ಫುಲೆ ವಾಗ್ದಾಳಿ ನಡೆಸಿದ್ದಾರೆ.

ಮನುವಾದಿ ಜನರಿಗೆ ಹನುಮಂತ ಗುಲಾಮನಂತಿದ್ದ. ದಲಿತನೆಂಬ ಕಾರಣಕ್ಕೆ ಹನುಮಂತನಿಗೂ ತುಚ್ಛ ಸ್ಥಾನ ಕೊಡಲಾಗಿತ್ತು ಎಂದು ಫುಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶ್ರೀರಾಮನಿಗೆ ತನ್ನಿಡೀ ಮನಸ್ಸನ್ನು ಅರ್ಪಿಸಿ ಭಕ್ತಿಯಿಂದ ಆರಾಧಿಸಿದ್ದ ಹನುಮಂತನನ್ನು ಮಂಗದ ಬದಲು ಮನುಷ್ಯನನ್ನಾಗಿ ಮಾಡಬಹುದಿತ್ತು. ದಲಿತನೆಂಬ ಕಾರಣಕ್ಕೆ ಹನುಮಂತನೂ ಅವಮಾನ ಎದುರಿಸದ. ದಲಿತರನ್ನು ಮನುಷ್ಯರಂತೆ ಇವರು ಕಾಣಲು ಸಾಧ್ಯವಿಲ್ಲವಾ?” ಎಂದು ಫುಲೆ ಪ್ರಶ್ನಿಸಿದ್ದಾರೆ.

Comments are closed.