ದೆಹಲಿ: ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾಗಿ 1980ರ ಬ್ಯಾಚಿನ ರಾಜಸ್ಥಾನ ಕೇಡರ್ ಐಎಎಸ್ ಅಧಿಕಾರಿ ಸುನೀಲ್ ಅರೋರಾ ಭಾನುವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಆಯುಕ್ತರಾಗಿದ್ದ ಓಂಪ್ರಕಾಶ್ ರಾವತ್ ಅವರ ಅಧಿಕಾರ ಶನಿವಾರ ಮುಕ್ತಾಯಗೊಂಡಿದ್ದು, ಅವರ ಸ್ಥಾನಕ್ಕೆ ಅರೋರಾ ನೇಮಕವಾಗಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿಯಾಗಿರುವ ಅರೋರಾ ಅವರು ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಮಾಹಿತಿ ಮತ್ತು ಅಭಿವೃದ್ಧಿ ಕೌಶಲ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಮತ್ತು ಏರ್ಲೈನ್ಸ್ ನಲ್ಲಿ ಐದು ವರ್ಷಗಳ ಕಾಲ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆ, ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ, ಒಡಿಶಾ, ಹರಿಯಾಣ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಗಳು ಸುನೀಲ್ ಅರೋರಾ ಅವರ ನೇತೃತ್ವದಲ್ಲೇ ನಡೆಯಲಿವೆ.
Comments are closed.