ರಾಷ್ಟ್ರೀಯ

ದೆಹಲಿಯಲ್ಲಿ 200 ರೈತಸಂಘಟನೆಗಳ ಮೂರು ಲಕ್ಷಕ್ಕೂ ಹೆಚ್ಚು ರೈತರಿಂದ ಪ್ರತಿಭಟನೆ

Pinterest LinkedIn Tumblr


ನವದೆಹಲಿ(ನ. 30): ರೈತರ ಆದಾಯವನ್ನು ದ್ವಿಗುಣಗೊಳಿಸುವೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೇಶದ ಅನ್ನದಾತರು ರಣ ಕಹಳೆ ಮೊಳಗಿಸಿದ್ದಾರೆ. ‘ದಿಲ್ಲಿ ಚಲೋ’ ಎಂಬ ಬೃಹತ್ ಪ್ರತಿಭಟನೆ ನಡೆಸಿದ ರೈತರು ಆಳುವ ಸರ್ಕಾರ ಅಳುಕುವ ರೀತಿ ಮಾಡಿದ್ದಾರೆ. ಇಂದು ಶುಕ್ರವಾರ, ಅಖಿಲ ಭಾರತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ದೇಶದ 200ಕ್ಕೂ ‌ಹೆಚ್ಚು ರೈತ ಸಂಘಟನೆಗಳು ಒಂದುಗೂಡಿ ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸಿವೆ.

ಕಳೆದ 15 ವರ್ಷಗಳಿಂದ 3 ಲಕ್ಷಕ್ಕೂ ಹೆಚ್ಚು ಮಂದಿ ರೈತರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2016ರಿಂದ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ವಿವರಗಳನ್ನೇ ಬಯಲು ಮಾಡದೆ ಮತ್ತೊಂದು ಘನಘೋರ ಷೋಷಣೆಗೆ ಮುನ್ನುಡಿ ಬರೆದಿದೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕೆಂದು ಒತ್ತಾಯಿಸಿ ಇಬ್ಬರು ಸಂಸದರು ಖಾಸಗಿ ವಿಧೇಯಕ ಮಂಡಿಸಿದ್ದಾರೆ. ಚರ್ಚೆ ಮಾಡಲು ಕೇಂದ್ರ ಸರ್ಕಾರಕ್ಕೆ ಪುರುಸೊತ್ತು ಸಿಕ್ಕಿಲ್ಲ.‌ ಇದೆಲ್ಲದರ ಪರಿಣಾಮ ರೈತರೇ ರೊಚ್ಚಿಗಿದ್ದಿದ್ದಾರೆ. ಬೀದಿಗಿಳಿದಿದ್ದಾರೆ. ದಿಲ್ಲಿ ತಲುಪಿ ಹೋರಾಟದ ಕತ್ತಿ ಝಳಪಿಸಿದ್ದಾರೆ.

ಅನ್ನದಾತರ ಮಹಾ ಮೆರವಣಿಗೆ:

ದೇಶದ ವಿವಿಧ ಭಾಗಗಳಿಂದ ನಿನ್ನೆಯೇ ದಿಲ್ಲಿಗೆ ಬಂದು ರಾಮಲೀಲಾ ಮೈದಾನದಲ್ಲಿ ಜಮಾವಣೆಗೊಂಡಿದ್ದ ಲಕ್ಷಾಂತರ ರೈತರು ಇಂದು ರಾಮಲೀಲಾ ಮೈದಾನದಿಂದ ಸಂಸತ್ ಮಾರ್ಗದವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗಯುದ್ದಕ್ಕೂ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ರು. ಅಯೋಧ್ಯೆಯ ರಾಮಮಂದಿರ ಬೇಡ ಸಾಲ ಮನ್ನಾ ಬೇಕು ಎಂದು ಆಗ್ರಹಿಸಿದ್ರು.

ರಾಜ್ಯ ರೈತರಿಂದಲೂ ಬೆಂಬಲ:
ಹಸಿರು ಸೇನೆಯ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಜನಶಕ್ತ ಸಂಘಟನೆಯ ಡಾ. ‌ವಾಸು ನೇತೃತ್ವದಲ್ಲಿ ಕರ್ನಾಟಕದಿಂದಲೂ ಸಾವಿರಾರು ರೈತರು ಇಂದಿನ‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸರ್ಕಾರಕ್ಕೆ ಬಿಸಿಮುಟ್ಟಿಸಲು ಬೆತ್ತಲೆ ಪ್ರತಿಭಟನೆ:
ದಪ್ಪ ಚರ್ಮದ ಕೇಂದ್ರ ಸರ್ಕಾರಕ್ಕೆ ಬಿಸಿಮುಟ್ಟಿಸಲೇಬೇಕೆಂದು ತಮಿಳುನಾಡು ರೈತರು ಜಾಥಾದ ಉದ್ದಕ್ಕೂ ಅರಬೆತ್ತಲೆ ಮೆರವಣಿಗೆ ನಡೆಸಿದರು. ಸಂಸತ್ ಮಾರ್ಗದ ಮುಂಭಾಗ ಸಂಪೂರ್ಣ ಬೆತ್ತಲಾಗಿ ಪ್ರತಿಭಟಿಸಿದರು.

ರೈತರ ಬೇಡಿಕೆಗಳೇನು.?
1) ಕೃಷಿ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು 21ದಿನಗಳ ವಿಶೇಷ ಸಂಸತ್ ಅಧಿವೇಶನ ಕರೆಯಬೇಕು
2) ನವೆಂಬರ್ 2017ರಲ್ಲಿ ನಡೆದ ಕಿಸಾನ್ ಸಂಸದ್ ನಲ್ಲಿ ಸಿದ್ದಪಡಿಸಲಾದ ರೈತರ ಋಣಭಾರ ಮುಕ್ತ ಸ್ವಾತಂತ್ರ್ಯ ಮಸೂದೆ-2018, ರೈತರ ಕೃಷಿ ಸರಕುಗಳಿಗೆ ಕನಿಷ್ಠ ಬೆಂಬಲ ಬೆಲೆ ಸ್ವಾತಂತ್ರ್ಯ ಮಸೂದೆ-2018 ಜಾರಿಯಾಗಬೇಕು.
3) ಮಸೂದೆ ಮೂಲಕ, ಸಾಲ, ನ್ಯಾಯಯುತ ಬೆಲೆ, ವೇತನ, ಉದ್ಯೋಗ, ಒಳ್ಳೆಯ ಶಿಕ್ಷಣ, ಆರೋಗ್ಯ ರಕ್ಷಣೆ, ಪೋಷಣೆಯ ಭದ್ರತೆ ನೀಡುವಂತಾಗಬೇಕು.
4) ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರಬೇಕು.

ರೈತರನ್ನು ಮರೆತ ಕೇಂದ್ರ ಸರ್ಕಾರ:
ರೈತರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರವನ್ನು ತಮ್ಮದೇ ಶೈಲಿಯಲ್ಲಿ ಕುಟುಕಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರು ಮತ್ತು ಯುವಕರನ್ನು ಮರೆತಿದೆ. ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂದು ರಾಹುಲ್ ಟೀಕಿಸಿದರು. 15 ದೊಡ್ಡ ಉದ್ಯಮಿಗಳ 3.5 ಲಕ್ಷ ಕೋಟಿ ರೂ. ಸಾಲವನ್ನು ಮಾಫಿ ಮಾಡುವ ಸರಕಾರಕ್ಕೆ ದೇಶದ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲವಾ? ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರಶ್ನಿಸಿದರು.

ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೆ ತರುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಈಗ ಉಲ್ಟಾ ಹೊಡೆದಿದ್ದಾರೆ. ಸ್ವಾಮಿನಾಥನ್ ಆಯೋಗದ ವರದಿ ಸಾಧ್ಯ ಇಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಮಾಣಪತ್ರ ಸಲ್ಲಿಸಿದೆ ಎಂದು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು.

ಸ್ವಾಮಿನಾಥನ್ ಆಯೋಗದ ವರದಿಯ ಅನುಷ್ಠಾನದ ವಿಚಾರದಲ್ಲಿ ರಾಹುಲ್ ಗಾಂಧಿಯವರ ಒತ್ತಾಯಕ್ಕೆ ದೆಹಲಿ ಸಿಎಂ ಕೇಜ್ರಿವಾಲ್ ಕೂಡ ಧ್ವನಿಗೂಡಿಸಿದರು. ಐದು ತಿಂಗಳು ಮಾತ್ರ ಉಳಿದಿದ್ದು, ಅಷ್ಟರೊಳಗೆ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರದಿದ್ದರೆ 2019ರ ಚುನಾವಣೆಯಲ್ಲಿ ಕೇಂದ್ರಕ್ಕೆ ರೈತರೇ ಪಾಠ ಕಲಿಸಲಿದ್ದಾರೆ ಎಂದು ಕೇಜ್ರಿವಾಲ್ ಎಚ್ಚರಿಕೆ ನೀಡಿದರು.

ಹಾಗೆಯೇ, ಉದ್ಯಮಿಗಳಿಗೆ ತೋರುತ್ತಿರುವುದರಲ್ಲಿ ಶೇ. 10ರಷ್ಟು ಕಾಳಜಿಯನ್ನು ರೈತರಿಗೆ ನೀಡಿದಿದ್ದರೆ ಈ ಅನ್ನದಾತರು ಬೀದಿಗೆ ಬಂದು ಹೋರಾಡುವ ಅಗತ್ಯವಿರಲಿಲ್ಲ ಎಂದು ಆಪ್ ಮುಖ್ಯಸ್ಥರು ಗುಡುಗಿದರು.

ಪ್ರತಿಭಟನೆಗೆ ಭಾರೀ ಬೆಂಬಲ:
ಸ್ವರಾಜ್ ಅಭಿಯಾನದ ಮುಖ್ಯಸ್ಥ ಯೋಗೇಂದ್ರ ಯಾದವ್ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಗೆ ಭಾರೀ ಬೆಂಬ‌ಲ ವ್ಯಕ್ತವಾಯಿತು. ಖ್ಯಾತ ಕೃಷಿ ಪತ್ರಕರ್ತ ಪಿ. ‌ಸಾಯಿನಾಥ್, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಸೇರಿದಂತೆ ಇವತ್ತಿನ‌ ಪ್ರತಿಭಟನೆಯಲ್ಲಿ ವಕೀಲರು, ವೈದ್ಯರು, ವಿದ್ಯಾರ್ಥಿಗಳು, ಪತ್ರಕರ್ತರು, ಕಲಾವಿದರು, ಸಾಮಾಜಿಕ ಹೋರಾಟಗಾರರು ಭಾಗವಹಿಸಿ ಬೆಂಬಲ ಸೂಚಿಸಿದರು.

ಇದೇ ವೇಳೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಟ್ವೀಟ್ ಮೂಲಕ ಕೇಂದ್ರದ ಮೇಲೆ ದಾಳಿ ಮಾಡಿದ್ದಾರೆ. ವ್ಯವಹಾರ ಸ್ನೇಹಿ ವಾತಾವರಣ (ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್) ಸೂಚ್ಯಂಕದ ಪ್ರಗತಿಯ ಬಗ್ಗೆ ಕೊಚ್ಚಿಕೊಳ್ಳುವ ಕೇಂದ್ರದ ಧೋರಣೆಯನ್ನು ಖಂಡಿಸಿದ್ದಾರೆ. ಈ ಸೂಚ್ಯಂಕದಲ್ಲಿ ಭಾರತದ ಸ್ಥಾನ ಮೇಲೇರುತ್ತಿದೆ ಎಂದು ಮೋದಿ ಜಂಬದಿಂದ ಹೇಳಿಕೊಳ್ಳುತ್ತಾರೆ. ಆದರೆ, ಕೃಷಿ ಸ್ನೇಹಿ ವಾತಾವರಣ (ಈಸ್ ಆಫ್ ಡೂಯಿಂಗ್ ಎಗ್ರಿಕಲ್ಚರ್) ಕೂಡ ಅಷ್ಟೇ ಮುಖ್ಯ ಎಂಬುದು ಅವರಿಗೆ ತಿಳಿದಿರಲಿ ಎಂದು ಗೌಡರು ಕುಟುಕಿದ್ದಾರೆ.

Comments are closed.