ಕರ್ನಾಟಕ

ಒಂದೇ ಕಡೆ 8 ಮನೆಗಳಲ್ಲಿ ಏಕಾಏಕಿ ಬಿರುಕು – ಭೂಕುಸಿತದ ಭೀತಿ!

Pinterest LinkedIn Tumblr


ಬಾಗಲಕೋಟೆ(ನ. 30): ಬೆಳ್ಳಂಬೆಳಗ್ಗೆಯೇ ಒಂದೇ ಪ್ರದೇಶದಲ್ಲಿದ್ದ ಏಳೆಂಟು ಮನೆಗಳು ಬಿರುಕು ಬಿಟ್ಟ ಪರಿಣಾಮ ಇಡೀ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಮನೆಗಳ ಬಿರುಕು ಬಿಟ್ಟಿದ್ದ ಸುದ್ದಿ ಕೇಳಿದ್ದೇ ತಡ ಜನರೆಲ್ಲಾ ಅದನ್ನ ನೋಡೋಕೆ ಆಗಮಿಸಿದ್ರು, ಘಟನೆಗೆ ಕಾರಣ ತಿಳಿಯದೇ ಗ್ರಾಮಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಇಂಥದ್ದೊಂದು ಬೆಳವಣಿಗೆಯಾಗಿರುವುದು ಬಾಗಲಕೋಟೆ ಜಿಲ್ಲೆಯ ಕಿರಸೂರು ಗ್ರಾಮದಲ್ಲಿ.

ಈ ಗ್ರಾಮದ ಒಂದೇ ಪ್ರದೇಶದಲ್ಲಿರೋ 8 ಮನೆಗಳಲ್ಲಿ ಇಂದು ಬೆಳ್ಳಂಬೆಳಿಗ್ಗೆ ಏಕಾಏಕಿ ಬಿರುಕು ಕಾಣಿಸಿಕೊಂಡಿತ್ತು. ಇದ್ರಿಂದ ಮನೆಮಂದಿಯಷ್ಟೇ ಅಲ್ಲದೆ ಇಡೀ ಊರ ಜನ್ರೇ ಆತಂಕಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕಂದ್ರೆ ಮನೆಯಲ್ಲಿ ತಂದೆ-ತಾಯಿ, ಮಕ್ಕಳು ಸೇರಿದಂತೆ ಬಂಧು ಬಳಗದರೆಲ್ಲಾ ವಾಸಿಸುತ್ತಿದ್ರು. ಇವುಗಳ ಮಧ್ಯೆ ಮನೆ ಕುಸಿತಗೊಂಡದ್ದು ಒಂದೆಡೆಯಾದ್ರೆ ಎಲ್ಲೆಂದರಲ್ಲಿ ಗೋಡೆಗಳು ಸಹ ಬಿರುಕುಬಿಟ್ಟಿದ್ದನ್ನು ಕಂಡು ಮನೆ ಮಂದಿ ತೀವ್ರ ಆತಂಕದಲ್ಲಿದ್ರು. ಹೀಗಾಗಿ ಮನೆ ಪರಿಸ್ಥಿತಿ ಕಂಡು ಮನೆಯೊಳಗೆ ಇರಬೇಕೋ ಬೇಡವೋ ಅನ್ನೋ ಗೊಂದಲದ ಪರಿಸ್ಥಿತಿಯಲ್ಲಿದ್ದಾರೆ ಮನೆಮಂದಿ.

ಮನೆ ಬಿರುಕು ಬಿಟ್ಟಿದ್ದನ್ನು ಕಂಡ ಕೆಲವರು ಊರಲ್ಲಿ ಭೂಕುಸಿತವಾಗುತ್ತಿದೆಂಬ ಶಂಕೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಕೆಲವರು ಹಾಳುಮಣ್ಣಿನಿಂದ ಕುಸಿತ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಮನೆಗಳಿರುವ ಪ್ರದೇಶವು ಗಟ್ಟಿ ಮಣ್ಣಿಲ್ಲದೆ, ಹಾಳು ಮಣ್ಣಿನಿಂದ ಕೂಡಿದ್ದರಿಂದ ಈ ರೀತಿಯಾಗಿರಬಹುದು ಎಂದು ಕೆಲ ಗ್ರಾಮಸ್ಥರು ಒಪ್ಪುತ್ತಾರೆ. ಆದರೂ ಭೂಗರ್ಭಶಾಸ್ತ್ರಜ್ಞರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ, ಈ ಬಿರುಕಿಗೆ ಕಾರಣ ಕಂಡು ಹಿಡಿಯುವಂತಾಗಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಒಟ್ಟಿನಲ್ಲಿ, ಹಾಳು ಮಣ್ಣಿನ ಪ್ರಭಾವವೋ ಅಥವಾ ಭೂ ಕುಸಿತವೋ ಏನೆಂದು ಖಚಿತವಾಗಿ ಗೊತ್ತಾಗದೆ ಇಡೀ ಕಿರಸೂರ ಗ್ರಾಮಸ್ಥರೇ ಆತಂಕಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಾರಣ ಕಂಡುಹಿಡಿದು ಗ್ರಾಮಸ್ಥರ ಆತಂಕ ದೂರ ಮಾಡಲಿ ಅನ್ನೋದೆ ಎಲ್ಲರ ಆಶಯ.

Comments are closed.