ರಾಷ್ಟ್ರೀಯ

ದೆಹಲಿಯಲ್ಲಿ 2 ದಿನ ಸುಮಾರು 200ಕ್ಕೂ ಹೆಚ್ಚು ರೈತ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

Pinterest LinkedIn Tumblr


ನವದೆಹಲಿ: ಅಖಿಲ ಭಾರತ ಕಿಸಾನ್ ಮುಕ್ತಿ ಮೋರ್ಚಾ ನೇತೃತ್ವದಲ್ಲಿ ನಾಳೆಯಿಂದ ಎರಡು ದಿನ ದೆಹಲಿಯಲ್ಲಿ ರೈತರಿಂದ ಬೃಹತ್ ಪ್ರತಿಭಟನೆಗಳು ನಡೆಯಲಿವೆ. ಮೋರ್ಚಾ ಕರೆ ಕೊಟ್ಟಿರುವ ದಿಲ್ಲಿ ಚಲೋಗೆ 200ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ನೀಡಿವೆ. ದಿಲ್ಲಿ ಚಲೋ ಭಾಗವಾಗಿ ಈಗಾಗಲೇ ರಾಷ್ಟ್ರ ರಾಜಧಾನಿಯೆಡೆಗೆ ಆಗಮಿಸುತ್ತಿರುವ ರೈತರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲಿದ್ದಾರೆ. ದಿಲ್ಲಿ ಚಲೋ ಪ್ರತಿಭಟನೆಯಲ್ಲಿ ಪ್ರಮುಖವಾಗಿ ರೈತರು ಸಾಲದಿಂದ ಮುಕ್ತಿ ಹಾಗೂ ಕನಿಷ್ಠ ಬೆಂಬಲ ಬೆಲೆ ನೀಡುವ ವಿಚಾರವಾಗಿ ಸೂಕ್ತ ಕಾನೂನು ಹೋರಾಟದ ಮೂಲಕ ಅದನ್ನು ಜಾರಿಗೆ ತರಬೇಕು ಎಂದು ಆಗ್ರಹಪಡಿಸಲಿವೆ.

ಅನ್ನದಾತರ ವಿಷಯವೇ ಮುಂದಿನ‌ ಚುನಾವಣಾ ಅಜೆಂಡಾ:
ಮುಂಬರುವ ಲೋಕಸಭಾ ಚುನಾವಣೆ ಕೃಷಿ ಬಿಕ್ಕಟ್ಟಿನ ಆಧಾರದ ಮೇಲೆ ನಡೆಯಲಿದೆ. ಕಳೆದ ನಾಲ್ಕೂವರೆ ವರ್ಷದಲ್ಲಿ ದೇಶಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 79 ಮಂದಿ ಜಾನುವಾರು ಮಾರಾಟಗಾರರನ್ನು ಕೊಲ್ಲಲಾಗಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮೊಲ್ಲಾ ತಿಳಿಸಿದ್ದಾರೆ.

ರೈತ ವಿರೋಧಿ ಕೇಂದ್ರ ಸರ್ಕಾರ:
ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಕೇಂದ್ರ ಸರ್ಕಾರವನ್ನು ರೈತ ವಿರೋಧಿ ಎಂದು ಟೀಕಿಸಿದ್ದಾರೆ. ನೋಟು ನಿಷೇಧ ಕಾಯ್ದೆ ಮತ್ತು ಬರವನ್ನು ನಿರ್ವಹಣೆ ಮಾಡಿರುವ ರೀತಿ ನೋಡಿದರೆ ಮೋದಿ ಸರ್ಕಾರದ ದುರುದ್ದೇಶ ತಿಳಿಯುತ್ತದೆ ಎಂದು ಕುಟುಕಿದ್ದಾರೆ.

ಇದು ಮಧ್ಯಮ ಮತ್ತು ಶ್ರಮಿಕ ವರ್ಗಗಳನ್ನು ಒಗ್ಗೂಡಿಸುವ ಹೋರಾಟ:
ಇಂದಿನ ದಿಲ್ಲಿ ಚಲೋ ಹೋರಾಟ ಪ್ರಮುಖವಾಗಿ ಮಧ್ಯಮವರ್ಗ ಮತ್ತು ಶ್ರಮಿಕ ವರ್ಗವನ್ನು ಒಗ್ಗೂಡಿಸುವ ಕೆಲಸ ಮಾಡಲಿದೆ. ಹಿಂದೆ ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳಲ್ಲಿ ಇವರು ಒಗ್ಗೂಡಿರಲಿಲ್ಲ. ಈಗ ಒಂದಾಗಲಿದ್ದಾರೆ ಎಂದು ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಿಂದಲೂ ಬರುತ್ತಿರುವ ರೈತರು:
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರ ನೇತೃತ್ವದಲ್ಲಿ ಕರ್ನಾಟಕದಿಂದಲೂ ರೈತರು ಆಗಮಿಸುತ್ತಿದ್ದಾರೆ. ಕರ್ನಾಟಕದ ಮಾದರಿಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಆಗ್ರಹಿಸಲಿದ್ದಾರೆ. ಹಿಂದೆ ಕಿಸಾನ್ ಮೋರ್ಚಾವನ್ನು ದೆಹಲಿಯ ಹೊರವಲಯದಲ್ಲೇ ತಡೆದು, ಅನ್ನದಾತರಿಗೆ ಲಾಠಿ ರುಚಿ ತೋರಿಸಿತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಈ ಬಾರಿಯಾದರೂ ಅನ್ನದಾತರ ಅಳಲೇನು ಎಂದು ಕೇಂದ್ರ ಕೇಳುವುದೇ ಎನ್ನುವುದನ್ನು ಕಾದುನೋಡಬೇಕು.

Comments are closed.