ರಾಷ್ಟ್ರೀಯ

ನೋಟ್ ಬ್ಯಾನ್‌ನಿಂದ ದೇಶದ ಆರ್ಥಿಕತೆಯಲ್ಲಿ ಅಸ್ಥಿರತೆ!: ಆರ್‌ಬಿಐ ಗರ್ವನರ್ ಊರ್ಜಿತ್ ಪಟೇಲ್ ಸ್ಪಷ್ಟನೆ

Pinterest LinkedIn Tumblr


ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದ ದೇಶದ ಆರ್ಥಿಕತೆ ಅಸ್ಥಿರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.

ನೋಟು ನಿಷೇಧ, ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿಗಳ ಕುರಿತು ವಿವರಣೆ ನೀಡಲು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಮಂಗಳವಾರ ಸಂಸದೀಯ ಸಮಿತಿಯ ಮುಂದೆ ಹಾಜರಾಗಿದ್ದರು.

ಕಳೆದ ನಾಲ್ಕು ವರ್ಷಗಳಲ್ಲಿ ತೈಲ ಬೆಲೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಈಗ ಇಳಿಕೆಯಾಗುತ್ತಿದೆ, ಪರಿಣಾಮ ಆರ್ಥಿಕತೆ ವೃದ್ಧಿಸುತ್ತಿದೆ. ಹೀಗಾಗಿ ಆರ್ಥಿಕ ಬೆಳವಣಿಗೆ ಕುರಿತು ಆಶಾವಾದ ಇದೆ ಎಂದು ಪಟೇಲ್ ಸಂಸದೀಯ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ.

ಸಾಲದ ಬೆಳವಣಿಗೆ ದರ ಶೇ.15ರಷ್ಟು ಏರಿಕೆಯಾಗಿತ್ತು. ಹಣದುಬ್ಬರ ಶೇಕಡ 4 ಕ್ಕೆ ಇಳಿದಿದೆ ಮತ್ತು ಜಿಡಿಪಿ ಅನುಪಾತಕ್ಕೆ ಹೋಲಿಸಿದಾಗ ಹಣಕಾಸು ವಹಿವಾಟು ಹೆಚ್ಚಳವಾಗಿದೆ ಎಂದು ಪಟೇಲ್ ವಿವರಣೆ ನೀಡಿದ್ದಾರೆ. ಆದರೆ 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಅಪನಗದೀಕರಣ ಆರ್ಥಿಕತೆಯನ್ನು ಅಸ್ಥಿರವಾಗಿಸಿದೆ ಎಂದು ಪಟೇಲ್ ಸಮಿತಿ ಮುಂದೆ ಹೇಳಿಕೆ ನೀಡಿದ್ದಾರೆ.

ಆದರೆ ಕೇಂದ್ರ ಸರ್ಕಾರ ಆರ್‌ಬಿಐ ಕಾಯ್ದೆಯಲ್ಲಿ ಕಲಂ 7ನ್ನು ಜಾರಿಗೊಳಿಸುವುದು, ಬ್ಯಾಂಕುಗಳಲ್ಲಿನ ಅನುತ್ಪಾದಕ ಆಸ್ತಿ ವಿವರ, ಬ್ಯಾಂಕುಗಳ ವಿಲೀನ ಮೊದಲಾದ ವಿವಾದಾತ್ಮಕ ವಿಚಾರಗಳಿಗೆ ಪಟೇಲ್ ಉತ್ತರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

ಆದರೂ ಅಪನಗದೀಕರಣವನ್ನು ಸಂಪೂರ್ಣವಾಗಿ ತಿರಸ್ಕರಿಸದ ಪಟೇಲ್, ಆರ್ಥಿಕ ಅಸ್ಥಿರತೆ ಹೊರತಾಗಿಯೂ ನೋಟ್ ಬ್ಯಾನ್‌ನಿಂದ ಕೆಲವು ಉತ್ತಮ ಬೆಳವಣಿಗೆ ಕಂಡು ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಸಮಿತಿಯ ಎದುರು ರಿಸರ್ವ್ ಬ್ಯಾಂಕ್ ಗವರ್ನರ್ ವಿಶ್ವ ಆರ್ಥಿಕತೆ ಹಾಗೂ ಭಾರತ ಆರ್ಥಿಕತೆಯ ಸ್ಥಿತಿಗತಿಗಳ ಕುರಿತು ವಿವರಿಸಿದ್ದಾರೆ.

Comments are closed.