ರಾಷ್ಟ್ರೀಯ

ಮೊಬೈಲ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ ….ಉಚಿತ ಇನ್ ಕಮಿಂಗ್ ಕರೆ ಸೇವೆಗೆ ಬೀಳಲಿದೆ ಕತ್ತರಿ !

Pinterest LinkedIn Tumblr

ನವದೆಹಲಿ: ಟೆಲಿಕಾಮ್ ಸಂಸ್ಥೆಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಗ್ರಾಹಕರ ಇನ್ ಕಮಿಂಗ್ ಕಾಲ್ ಗಳಿಗೂ ದರ ವಿಧಿಸುವ ಕುರಿತು ಚಿಂತನೆ ನಡೆಸುತ್ತಿವೆ.

ಮಾಧ್ಯಮವೊಂದರ ವರದಿಯಂತೆ ಜಿಯೋ ಆಗಮನದೊಂದಿಗೆ ಟೆಲಿಕಾಮ್ ಸಂಸ್ಥೆಗಳು ನಷ್ಟದ ಸುಳಿಯಲ್ಲಿ ಸಿಲುಕಿದ್ದು, ಜಿಯೋಗೆ ಪೈಪೋಟಿ ನೀಡಲು ಹೋಗಿ ವಿವಿಧ ಆಫರ್ ಗಳನ್ನು ಘೋಷಣೆ ಮಾಡುತ್ತಿವೆಯಾದರೂ, ಅವುಗಳಿಗೆ ನಿರೀಕ್ಷಿತ ಮಟ್ಟದ ಲಾಭಾಂಶ ಬರುತ್ತಿಲ್ಲ. ಲಾಭಾಂಶವಿರಲಿ ಕನಿಷ್ಠ ಪಕ್ಷ ಹಾಕಿದ ಬಂಡವಾಳ ಕೂಡ ವಾಪಸ್ ಬರುತ್ತಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಐಡಿಯಾ ಮತ್ತು ವೊಡಾಫೋನ್ ಸಂಸ್ಥೆಗಳು ವಿಲೀನವಾಗಿದ್ದು, ಈ ಹಿಂದೆ ಇದ್ದ ಸ್ಪೈಸ್ ಸಂಸ್ಥೆ ಇದೇ ಕಾರಣಕ್ಕೆ ಐಡಿಯಾದೊಂದಿಗೆ ವಿಲೀನವಾಗಿತ್ತು.

ಆದರೆ ಸ್ಪೈಸ್ ಖರೀದಿ ಮಾಡಿದ್ದ ಐಡಿಯಾ ಕೂಡ ಪೈಪೋಟಿ ನೀಡಲಾಗಿದೆ ವೊಡಾಫೋನ್ ನೊಂದಿಗೆ ವಿಲೀನವಾಗಿದೆ. ಪ್ರಮುಖವಾಗಿ ಟೆಲಿಕಾಂ ಸಂಸ್ಥೆ ತಮ್ಮ ನಷ್ಟಕ್ಕೆ ಕಾರಣ ಹುಡುಕಿದ್ದು, ನಷ್ಟಕ್ಕೆ ಕಾರಣವೆಂದರೆ ಉಚಿತ ಇನ್ ಕಮಿಂಗ್ ಕರೆಗಳ ಸೇವೆ ಎಂದು ಸಂಸ್ಥೆಗಳು ಮನದಟ್ಟು ಮಾಡಿಕೊಂಡಿವೆ. ಪ್ರಮುಖವಾಗಿ ಭಾರತದಲ್ಲಿ ಲಕ್ಷಾಂತರ ಹಳ್ಳಿಗಳಲ್ಲಿ ಗ್ರಾಹಕರು ಉಚಿತ ಇನ್ ಕಮಿಂಗ್ ಸೇವಗಳಿಗಾಗಿಯೇ ಮೊಬೈಲ್ ಗಳನ್ನು ಖರೀದಿ ಮಾಡುತ್ತಿದ್ದಾರೆ. ಗ್ರಾಮೀಣ ಭಾರತದಲ್ಲಿ ಮೊಬೈಲ್ ಸೇವೆ ಕೇವಲ ಇನ್ ಕಮಿಂಗ್ ಕಾಲ್ ಗಳಿಗೆ ಮಾತ್ರ ಸೀಮಿತವಾಗಿದೆ. ಸೇವೆ ಮುಂದುವರಿಕೆಗೆ ರಿಚಾರ್ಜ್ ಅವಶ್ಯಕತೆ ಇದ್ದರೂ ರಿಚಾರ್ಜ್ ಮಾಡದೇ ಸಿಮ್ ಕಾರ್ಡ್ ಗಳನ್ನೇ ಬದಲಿಸುತ್ತಿದ್ದಾರೆ.

ರಿಚಾರ್ಜ್ ಗಿಂತಲೂ ಸುಲಭವಾಗಿ ಸಿಮ್ ಕಾರ್ಡ್ ಗಳು ದೊರೆಯುತ್ತಿರುವುದರಿಂದ ಅಂದರೆ ಕೇವಲ 10 ರೂಗಳಿಗೆ ಜಿಯೋ ಸಿಮ್ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಇನ್ ಕಮಿಂಗ್ ಕರೆಗಳೂ ಮತ್ತು ಮೂರು ತಿಂಗಳ ಹೊರ ಹೋಗುವ ಕರೆಗಳೂ ಕೂಡ ಉಚಿತವಾಗಿ ದೊರೆಯುತ್ತಿವೆ. ಇದೇ ಕಾರಣಕ್ಕೆ ಗ್ರಾಹಕರು ರಿಚಾರ್ಜ್ ಗಿಂತ ಹೊಸ ಸಿಮ್ ಕಾರ್ಡ್ ಗಳನ್ನೇ ಖರೀದಿ ಮಾಡಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ಟೆಲಿಕಾಮ್ ಸಂಸ್ಥೆಗಳ Average Revenue Per User (ARPU) (ಗ್ರಾಹಕನಿಂದ ಸರಾಸರಿ ಆದಾಯ) ಗಣನೀಯ ಪ್ರಮಾಣದಲ್ಲಿ ಕೆಳಗಿಳಿದಿದ್ದು, ಸಂಸ್ಥೆಗಳು ನಷ್ಟದ ಹಾದಿ ಹಿಡಿದಿವೆ.

ಇದೇ ಕಾರಣಕ್ಕೆ ಟೆಲಿಕಾಮ್ ಸಂಸ್ಥೆಗಳು ಮಾಸ್ಟರ್ ಪ್ಲಾನ್ ರೂಪಿಸುತ್ತಿದ್ದು, ಉಚಿತ ಇನ್ ಕಮಿಂಗ್ ಕಾಲ್ ಗಳ ಸೇವೆ ಸ್ಥಗಿತಗೊಳಿಸಿ ಇನ್ ಕಮಿಂಗ್ ಕಾಲ್ ಗಳಿಗೂ ನಿಗದಿತ ದರ ವಿಧಿಸಲು ಮುಂದಾಗಿವೆ. ಇದಕ್ಕೆ ದೇಶದ ಅತೀ ದೊಡ್ಡ ಟೆಲಿಕಾಮ್ ಸೇವಾ ಸಂಸ್ಥೆ ಭಾರ್ತಿ ಏರ್ ಟೆಲ್ ಮುಂದಡಿ ಇಟ್ಟಿದ್ದು, ಈಗಾಗಲೇ ತನ್ನ ಗ್ರಾಹಕರಿಂದ ಇನ್ ಕಮಿಂಗ್ ಕಾಲ್ ಗಳಿಗೆ ನಿರ್ಧಿಷ್ಟ ದರ ಸ್ವೀಕರಿಸುತ್ತಿದೆ. ಈ ಕುರಿತು ಏರ್ ಟೆಲ್ ಪ್ರಮುಖ ಮೂರು ಪ್ಲಾನ್ ಗಳನ್ನು ಪರಿಚಯಿಸಿದ್ದು, ರೂ 35, ರೂ 65 ಮತ್ತು ರೂ 9ಗಳ ಪ್ಲಾನ್ ಗಳಲ್ಲಿ 35 ರೂಗಳ ಪ್ಲಾನ್ ನಲ್ಲಿ 28 ದಿನಗಳಿಗೆ 26 ರೂಗಳ ಟಾಕ್ ಟೈಮ್ ನೀಡಿ 100 ಎಂಬಿ ಡಾಟಾ ನೀಡುತ್ತಿದೆ. ಈ 28 ದಿನಗಳು ಮುಕ್ತಾಯದ ಬಳಿಕ ಗ್ರಾಹಕನು ರಿಚಾರ್ಜ್ ಮಾಡಿಸಿದರೆ ಮಾತ್ರ ಮೊಬೈಲ್ ಸಂಖ್ಯೆ ಚಾಲನೆಯಲ್ಲಿರುತ್ತದೆ.

ಒಟ್ಟಾರೆ ನಷ್ಟದ ಭೀತಿಯಲ್ಲಿರುವ ಟೆಲಿಕಾಮ್ ಸಂಸ್ಥೆಗಳು ಇದೀಗ ಲಾಭಾಂಶವಿರಲಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Comments are closed.