ಪಟನಾ: ವಿಚ್ಛೇದನ ನಿರ್ಧಾರದ ಬಗ್ಗೆ ಚರ್ಚಿಸಲು ಕಳೆದ ಶನಿವಾರ ತನ್ನ ತಂದೆ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿಯಾಗಲು ಹೋಗಿದ್ದ ತೇಜ್ ಪ್ರತಾಪ್ ಪಟನಾಕ್ಕೆ ಮರಳಿಲ್ಲ ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ, ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ರಾಂಚಿಯ ರಾಜೇಂದ್ರ ವೈದ್ಯಕೀಯ ಸಂಸ್ಥೆಯಲ್ಲಿ ತನ್ನ ತಂದೆಯನ್ನು ಭೇಟಿಯಾಗಿ ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ ತೇಜ್ ಪ್ರತಾಪ್ ಬಳಿಕ ಬೋಧ ಗಯಾ ವಸತಿ ನಿಲಯಕ್ಕೆ ಹೋಗಿ ಶನಿವಾರ ಮತ್ತು ಭಾನುವಾರ ರಾತ್ರಿಯನ್ನು ಅಲ್ಲೇ ಕಳೆದಿದ್ದರು. ಸೋಮವಾರ ಮಧ್ಯಾಹ್ನ ಪಟಾನಾಕ್ಕೆ ತೆರಳುವುದಾಗಿ ಹೇಳಿ ಹೊರಟಿದ್ದರು ಎಂದು ಸ್ಥಳೀಯ ಶಾಸಕ ಕುಮಾರ್ ಸರ್ವಜಿತ್ ಹೇಳಿದ್ದಾರೆ.
ಇತರ ನಾಯಕರೊಂದಿಗೆ ನಾನು ಭಾನುವಾರ ರಾತ್ರಿ ತೇಜ್ ಪ್ರತಾಪ್ ಅವರೊಂದಿಗೆ ರಾತ್ರಿ ಊಟ ಮಾಡಿದೆ. ಅವರು ಅತಿಯಾಗಿ ದಣಿದಂತೆ ಕಾಣುತ್ತಿದ್ದರು. ಸೋಮವಾರ ಮಧ್ಯಾಹ್ನ ಮನೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ರಾಯಲ್ ರೆಸಿಡೆನ್ಸಿ ಹೋಟೆಲ್‌ನಿಂದ ಹೊರಟ ಬಳಿಕ ಅವರೆಲ್ಲಿಗೆ ಹೋದರು ಎಂದು ನನಗೆ ತಿಳಿದಿಲ್ಲ ಎಂದವರು ತಿಳಿಸಿದ್ದಾರೆ.
ಮನೆಗೆ ಮರಳುತ್ತಿದ್ದ ಲಾಲು ಮತ್ತು ರಾಬ್ರಿ ದೇವಿ (ಬಿಹಾರದ ಮಾಜಿ ಮುಖ್ಯಮಂತ್ರಿಗಳು) ಪುತ್ರ ಅರ್ಧ ಹಾದಿಯಲ್ಲಿಯೇ ಮತ್ತೆಲ್ಲಿಗೋ ಹೋಗಿದ್ದಾರೆ. ಮನೆಗೆ ಮರಳಿಲ್ಲ ಎಂದು ಅವರ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.
ತನ್ನ ತಂದೆಯನ್ನು ಭೇಟಿಯಾದ ಬಳಿಕ ವರದಿಗಾರರೊಂದಿಗೆ ಮಾತನಾಡಿದ್ದ ತೇಜ್ ಪ್ರತಾಪ್, ತಮ್ಮ ವಿಚ್ಛೇದನ ನಿರ್ಧಾರಕ್ಕೆ ಬದ್ಧ, ತಂದೆಯ ವಿರೋಧವನ್ನು ಲೆಕ್ಕಿಸಲಾರೆ ಎಂದಿದ್ದರು.
Comments are closed.