ರಾಷ್ಟ್ರೀಯ

6 ತಿಂಗಳ ಹಿಂದೆ ವಿವಾಹವಾಗಿದ್ದ ಪತಿಯನ್ನು ಕೊಲ್ಲಲು ಪತ್ನಿ ಮಾಡಿದ ಖತರ್ನಾಕ್ ಪ್ಲಾನ್!

Pinterest LinkedIn Tumblr


ಬಿಜಯ್, ಬಂಗಾಳದ ಬರ್ನ್​ಪುರ್ ನಿವಾಸಿ. ತನನ್ನು ಯಾರಾದರೂ ಹತ್ಯೆ ಮಾಡುತ್ತಾರೆ ಎಂಬ ಕಲ್ಪನೆ ಸಾವು ಎದುರಿಗೆ ಬಂದು ನಿಲ್ಲುವವರೆಗೆ ಬಿಜಯ್​ಗೆ ತಿಳಿದಿರಲಿಲ್ಲ. ಬಿಹಾರದ ಸುಲ್ತಂಗಂಜ್ ಬಳಿ ಗಂಗಾ ನದಿಯಲ್ಲಿ ತನ್ನ ಪೂಜೆ ಪುನಸ್ಕಾರವನ್ನು ಮುಗಿಸಿ ಅದೇ ಭಕ್ತಿಯಿಂದ ದೇವಗರ್ ಕಡೆಗೆ ಪ್ರಯಾಣ ಬೆಳೆಸಿದ್ದರು. ದಾರಿಯುದ್ದಕ್ಕೂ ಕಂಡು ಬರುತ್ತಿದ್ದ ಬೆಟ್ಟ-ಗುಡ್ಡಗಳ ಪ್ರಕೃತಿ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಯಾತ್ರೆ ಮುಂದುವರೆಸಿದ್ದರು. ಆದರೆ ಅನಿರೀಕ್ಷಿತವಾಗಿ ಇಬ್ಬರು ಏಕಾಏಕಿ ಬಿಜಯ್​ ಅವರ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದರು…!

ಜುಲೈ 27..ಅಂದು ರಕ್ತದ ಮಡುವಿನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಿಜಯ್​ಗೆ ತನ್ನ ಸಾವಿಗೆ ಯಾರೂ ಕಾರಣ ಎಂಬುದು ತಿಳಿದಿರಲಿಲ್ಲ. ಜೀವನ್ಮರಣದ ಹೋರಾಟದ ನಡುವೆ ಕೊನೆಯ ಬಾರಿ ತನ್ನ ಮುದ್ದಿನ ಮಡದಿಯೊಂದಿಗೆ ಮಾತನಾಡಬೇಕೆಂಬ ಆಸೆಯನ್ನು ಬಿಜಯ್ ವ್ಯಕ್ತಪಡಿಸಿದ್ದರು. ಫೋನ್ ಕರೆ ಮಾಡುವಷ್ಟರಲ್ಲಿ​ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಹೀಗಾಗಿ ಬಿಜಯ್ ಅವರ ಕೊನೆಯ ಆಸೆ ಕೊನೆಗೂ ಆಸೆಯಾಗಿಯೇ ಉಳಿಯಿತು.

ಹತ್ಯಾ ಸ್ಥಳಕ್ಕೆ ಧಾವಿಸಿದ ಬಿಹಾರದ ಭಂಕಾ ಜಿಲ್ಲೆಯ ಪೊಲೀಸರು ಬಿಜಯ್ ಅವರ ವಿಳಾಸವನ್ನು ಪರಿಶೀಲಿಸಿದ್ದರು. ಘಟನಾ ಸ್ಥಳದಲ್ಲಿ ಸಿಕ್ಕಿರುವ ಕೆಲ ಗುರುತಿನ ಚೀಟಿಯಿಂದ ಬಿಜಯ್​ ಗುರುತನ್ನು ಪತ್ತೆ ಹಚ್ಚಿದ್ದರು. ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿದ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡರು. ಈ ವೇಳೆ ಬಿಜಯ್​ ಅವರ ಸಂಬಂಧಿಗಳಾದ ಆಕಾಶ್ ಮತ್ತು ವಿಪಿನ್ ನಡುವೆ ಕೆಲ ವಿವಾದಗಳಿಂದ ವೈಮನಸ್ಸು ಉಂಟಾಗಿರುವುದು ಬೆಳಕಿಗೆ ಬಂತು. ಇದೇ ವಿಚಾರವಾಗಿ ಆಕಾಶ್ ಮತ್ತು ವಿಪಿನ್​ರನ್ನು ಬಂಧಿಸಿ ವಿಚಾರಣೆ ನಡೆಸಿದರು. ಒಂದೊಂದು ಮಾಹಿತಿ ಸಿಗುತ್ತಿದ್ದಂತೆ ಕೊಲೆಯ ಪುರಾವೆಗಾಗಿ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದರು.

ನವ ವಿವಾಹಿತ ಬಿಜಯ್

ಈ ವೇಳೆ ಬಿಜಯ್​​ಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ನವ ವಿವಾಹಿತೆ ಆಗಿದ್ದ ರಾಜನಂದಿನಿಯಿಂದ ಪೊಲೀಸರು ಹೇಳಿಕೆಯನ್ನು ಪಡೆದುಕೊಂಡರು. ಆದರೆ ತನ್ನ ಪತಿಯ ಅಕಾಲಿಕ ನಿಧನದಿಂದ ಅಂತಹ ಯಾವುದೇ ದುಃಖಪ್ತ ಭಾವನೆ ಅವಳಲ್ಲಿ ಕಾಣಿಸಿರಲಿಲ್ಲ. ಗಂಡನ ಸಾವಿನ ನಂತರ ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದ ರಾಜನಂದಿನಿ ಅಲ್ಲೇ ತನ್ನ ವಿಧವಾ ಕಾರ್ಯವನ್ನು ನೆರವೇರಿಸಿದ್ದರು.

ಮತ್ತೊಂದೆಡೆ ತೀವ್ರ ವಿಚಾರಣೆ ವೇಳೆ ಆಕಾಶ್ ಮತ್ತು ವಿಪಿನ್ ತಮ್ಮ ಹೇಳಿಕೆಯಲ್ಲಿ ರಾಜನಂದಿನಿಯ ಹೆಸರನ್ನು ಪ್ರಸ್ತಾಪಿಸಿದ್ದರು. ಹೀಗಾಗಿ ಪ್ರಕರಣ ಮತ್ತೊಮ್ಮೆ ಬಿಜಯ್ ಮನೆ ಮಂದಿ ಸುತ್ತಲೂ ಸುತ್ತಿಕೊಂಡಿತು. ಹೀಗಾಗಿ ರಾಜನಂದಿನಿಯನ್ನು ಪೊಲೀಸರು ವಿಚಾರಣೆಗೆ ಕರೆಸಿಕೊಂಡರು. ಮೊದಲೇ ಪೊಲೀಸರಿಗೆ ಪತ್ನಿಯ ಮೇಲೆ ಸಂಶಯ ಮೂಡಿದ್ದರೂ, ಅದರ ತನಿಖೆಯನ್ನು ಒಮ್ಮೆ ಪ್ರಾರಂಭಿಸುವ ಮನಸ್ಸು ಮಾಡಿರಲಿಲ್ಲ. ಹೀಗಾಗಿಯೇ ಬಿಜಯ್ ಪತ್ನಿಯನ್ನು ಈ ಬಾರಿ ತೀವ್ರ ವಿಚಾರಣೆಗೆ ಒಳಪಡಿಸಿದರು. ಕಠಿಣ ಪ್ರಯೋಗಗಳನ್ನು ಪ್ರಯೋಗಿಸಿದಾಗ ರಾಜನಂದಿನಿ ಒಂದೊಂದೇ ಅಸಲಿ ಸತ್ಯವನ್ನು ತೆರೆದಿಟ್ಟಳು.

ಲವ್-ಸೆಕ್ಸ್​-ದೋಖಾ

ಫೆಬ್ರವರಿ 10, ಬಿಜಯ್ ಮತ್ತು ರಾಜನಂದಿನಿಯ ವಿವಾಹ ಅದ್ಧೂರಿಯಾಗಿ ನಡೆದಿತ್ತು. ಆದರೆ ಈ ಮದುವೆ ರಾಜನಂದಿನಿಗೆ ಇಷ್ಟವಿರಲಿಲ್ಲ. ಇದಕ್ಕೆ ಕಾರಣ ಹಳೆಯ ಪ್ರೇಮಕಥೆ. ನಂದಿನಿಯ ಸಹೋದರ ಅರುಣ್​ಗೆ ಗುಲ್ಶನ್ ಎಂಬ ಗೆಳೆಯನಿದ್ದನು. ಟ್ರಾನ್ಸ್​ಪೋರ್ಟ್​ವೊಂದನ್ನು ನಡೆಸುತ್ತಿದ್ದ ಗುಲ್ಶನ್ ಆಗಾಗ್ಗೆ ಅರುಣ್ ಜೊತೆ ಮನೆಗೆ ಬರುತ್ತಿದ್ದನು. ಮನೆಯಲ್ಲಿ ಎಲ್ಲರಿಗೂ ಗುಲ್ಶನ್ ತುಂಬಾ ಆಪ್ತನಾಗಿದ್ದ. ರಾಜನಂದಿನಿ ಜೊತೆಗೂ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ. ಇದುವೇ ಇವರಿಬ್ಬರ ಪ್ರೀತಿ ಚಿಗುರೊಡೆಯಲು ಕಾರಣವಾಯಿತು. ಪ್ರೀತಿ ಎಂಬುದು ಗಾಢ ಪ್ರೇಮವಾಗಿ ಬದಲಾಯಿತು. ಆದರೆ ಇಬ್ಬರ ಜಾತಿ ಬೇರೆಯಾಗಿರುವುದು ದೊಡ್ಡ ಸಮಸ್ಯೆಯಾಗಿತ್ತು.

ಮತ್ತೊಂದೆಡೆ ಅರುಣ್ ತನ್ನ ತಂಗಿಯನ್ನು ಮದುವೆ ಮಾಡಿ ಕಳುಹಿಸುವ ತಯಾರಿಯಲ್ಲಿದ್ದನು. ರಾಜನಂದಿನಿ ತಾನು ಗುಲ್ಶನ್​ನನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದಳು. ಅವನನ್ನೆ ಬಾಳಸಂಗತಿಯಾಗಿ ವರಿಸಲು ಇಚ್ಛಿಸುವುದಾಗಿ ಮನೆಯವರಲ್ಲಿ ಕೇಳಿಕೊಂಡಳು. ಆದರೆ ಜಾತಿ ಬೇರೆಯಾಗಿದ್ದ ಕಾರಣ ಮನೆಯವರು ಈ ಸಂಬಂಧ ಬೆಳೆಸಲು ಸುತಾರಂ ಒಪ್ಪಲಿಲ್ಲ. ಅಲ್ಲದೆ ರಾಜನಂದಿನಿಯನ್ನು ಒತ್ತಾಯ ಪೂರ್ವಕ ಮದುವೆ ಮಾಡಿಸಿದ್ದರು. ಇದರ ನಡುವೆ ಗುಲ್ಶನ್ ಕೊನೆವರೆಗೂ ತನ್ನ ಪ್ರಯತ್ನ ಮುಂದುವರೆಸಿದ್ದನು. ಹೀಗಾಗಿಯೇ ಇಬ್ಬರ ನಡುವೆ ಮದುವೆಯ ಬಳಿಕ ಕೂಡ ಸಂಪರ್ಕ ಬೆಳೆದಿತ್ತು. ರಾಜನಂದಿನಿಯನ್ನು ಮತ್ತೆ ಪಡೆಯಬೇಕೆಂದು ನಿರ್ಧರಿಸಿದ್ದ ಗುಲ್ಶನ್, ತನ್ನ ದಾರಿಯಾಗಿ ಅಡ್ಡಲಾಗಿದ್ದ ಬಿಜಯ್​ಗಾಗಿ ಪ್ಲಾನ್​ವೊಂದನ್ನು ಸಿದ್ಧಪಡಿಸಿದನು.

ಬಿಜಯ್​ನ ಚಲನವಲನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಜವಾಬ್ದಾರಿಯನ್ನು ಸ್ವತಃ ಪತ್ನಿ ವಹಿಸಿಕೊಂಡಿದ್ದಳು. ಅದರಂತೆ ಜುಲೈ 27 ರಂದು ಬಿಜಯ್ ದೂರದ ಊರಿಗೆ ತೆರಳುವ ಮಾಹಿತಿ ನೀಡಿದ್ದಳು. ತನ್ನ ಪತಿಯೊಂದಿಗೆ ಸಲುಗೆಯ ನಾಟಕವಾಡುತ್ತಿದ್ದ ರಾಜನಂದಿನಿ, ಪ್ರಯಾಣದುದ್ದಕ್ಕೂ ಕರೆ ಮಾಡುವಂತೆ ತಿಳಿಸಿದ್ದಳು. ಪತ್ನಿಯನ್ನು ಸಾಂತ್ವನ ಪಡಿಸಿ ತೆರೆಳಿದ ಬಿಜಯ್ ಕುರಿತಾದ ಮಾಹಿತಿ ಅದಾಗಲೇ ಗುಲ್ಶನ್​ಗೆ ನೀಡಲಾಗಿತ್ತು. ಅಂತಹದೊಂದು ಅವಕಾಶಕ್ಕಾಗಿ ಬಕ ಪಕ್ಷಿಯಂತೆ ಗುಲ್ಶನ್ ಕೂಡ ಕಾಯುತ್ತಿದ್ದನು.

ನಿರಂತರವಾಗಿ ಕರೆ ಮಾಡುತ್ತಿದ್ದ ರಾಜನಂದಿನಿ ಪತಿ ಇರುವ ಸ್ಥಳವನ್ನು ಗುಲ್ಶನ್​ಗೆ ತಿಳಿಸುತ್ತಿದ್ದಳು. ಅದಾಗಲೇ ಸ್ಕೆಚ್ ತಯಾರಿಸಿ ಕಾಯುತ್ತಿದ್ದ ಗುಲ್ಶನ್​ಗೆ ತನ್ನ ಕೃತ್ಯ ನಡೆಸುವುದು ಮತ್ತಷ್ಟು ಸುಲಭವಾಯಿತು. ಅಲ್ಲದೆ ಏಕಾಂತ ಸ್ಥಳವೊಂದರಲ್ಲಿ ಬಿಜಯ್​ಗಾಗಿ ಹೊಂಚು ಹಾಕಿ ಕಾಯುತ್ತಿದ್ದನು.

ಪ್ರಕೃತಿ ರಮಣೀಯ ದೃಶ್ಯಗಳನ್ನು ಅಸ್ವಾದಿಸುತ್ತಾ ಪ್ರಯಾಣ ಮುಂದುವರೆಸಿದ್ದ ಬಿಜಯ್​ಗೆ ಎದುರಿಗೆ ಏಕಾಏಕಿ ಇಬ್ಬರು ಬಂದು ನಿಂತಿದ್ದರು. ಗುಲ್ಶನ್​ಗೆ ಅವನ ಗೆಳೆಯ ಮನೀಶ್ ಅಕಾ ಮಾಂಟಿ ಸಾಥ್ ನೀಡಿದ್ದನು. ಇವರಿಬ್ಬರು ಯಾರೆಂಬ ಬಗ್ಗೆ ಅರಿವಿರದ ಬಿಜಯ್ ವಿಚಲಿತನಾದನು. ಯಾರು ಎಂಬ ಪ್ರಶ್ನೆಯನ್ನು ಕೇಳುವ ಮೊದಲೇ ಬಿಜಯ್ ಮೇಲೆ ಕತ್ತಿ ಬೀಸಿದ್ದರು. ಬೀಸಿದ ಏಟಿಗೆ ಯಾವುದೇ ತಪ್ಪು ಮಾಡದ ಬಿಜಯ್ ರಕ್ತ ಮಡುವಿನಲ್ಲಿ ಬಿದ್ದಿದ್ದರು. ಈ ನಡುವೆ ಪತ್ನಿಯ ಇಚ್ಛೆಯಂತೆ ಕರೆ ಮಾಡಿ ಮಾತನಾಡಲು ಬಿಜಯ್ ಬಯಸಿದ್ದರು. ಅಷ್ಟರಲ್ಲೇ ಮಾಡದ ತಪ್ಪಿಗೆ ಪ್ರಾಣಪಕ್ಷಿಯೊಂದು ಹಾರಿ ಹೋಗಿತ್ತು. ಕೊನೆಗೂ ತನ್ನ ಸಾವಿಗೆ ಮುದ್ದಿನ ಮಡದಿಯೇ ಸ್ಕೆಚ್ ಹಾಕಿದ್ದಳು ಎಂಬುದು ಬಿಜಯ್​ಗೆ ತಿಳಿಯಲಿಲ್ಲ.

ಇದೀಗ ಬಿಹಾರ ಪೊಲೀಸರು ರಾಜನಂದಿನಿ ಹಾಗೂ ಗುಲ್ಶನ್​ನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಕೊಲೆಗೆ ಸಹಕಾರ ನೀಡಿದ ಮಾಂಟಿಗಾಗಿ ಬಲೆ ಬೀಸಿದ್ದಾರೆ.

Comments are closed.