ಹೈದರಾಬಾದ್: ಸಿವಿಲ್ ಸರ್ವಿಸ್ ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯೊಬ್ಬರ ಮಗುವನ್ನು ಪರೀಕ್ಷಾ ಕೇಂದ್ರದಲ್ಲಿದ್ದ ಪೊಲೀಸ್ ಸಿಬ್ಬಂದಿ ಆರೈಕೆ ಮಾಡಿ ಮಾನವೀಯತೆ ಮೆರೆದ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.
ರಾಜ್ಯ ಸರ್ಕಾರ ನಡೆಸಿದ್ದ ಪರೀಕ್ಷೆಗೆ ಬರೆಯಲು ಹೈದರಾಬಾದ್‍ನ ಮಹಾಂಕಾಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಪರೀಕ್ಷಾ ಕೇಂದ್ರಕ್ಕೆ ಮಹಿಳೆ ಆಗಮಿಸಿದ್ದರು. ಅಲ್ಲದೇ ತಮ್ಮೊಂದಿಗೆ ಸಹೋದರಿಯನ್ನು ಕರೆತಂದಿದ್ದ ಅವರು ಮಗುವನ್ನು ಆಕೆಯ ಕೈಗೆ ನೀಡಿ ಪರೀಕ್ಷೆ ಬರೆಯಲು ತೆರಳಿದ್ದರು. ಆದರೆ ಈ ವೇಳೆ ಒಂದೇ ಸಮನೆ ಮಗು ಅಳಲು ಆರಂಭಿಸಿದನ್ನು ಕಂಡ ಪೊಲೀಸರು ತಕ್ಷಣ ಮಗುವಿಗೆ ಬಾಟಲ್ ನಲ್ಲಿ ಹಾಲು ನೀಡಿ ಆರೈಕೆ ಮಾಡಿದ್ದಾರೆ.
ಪೊಲೀಸರ ಈ ಮಾನವೀಯ ನಡೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇಂತಹದ್ದೇ ಘಟನೆ ಕೆಲ ದಿನಗಳ ಹಿಂದೆ ತೆಲಂಗಾಣದ ಮೆಹಬೂಬ್ ನಗರ ವ್ಯಾಪ್ತಿಯಲ್ಲಿ ನಡೆದಿತ್ತು. ಈ ವೇಳೆಯೂ ತಾಯಿಯಿಂದ ಮಗುವನ್ನು ಪಡೆದ ಪೊಲೀಸ್ ಪೇದೆಯೊಬ್ಬರು ಪರೀಕ್ಷೆ ಮುಕ್ತಾಯ ಆಗುವವರೆಗೂ ಆರೈಕೆ ಮಾಡಿದ್ದರು.
ಆಧುನಿಕ ಸಮಾಜದಲ್ಲಿ ಯುವತಿಯರು ಉನ್ನತ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿತ್ತಿದ್ದಾರೆ. ಆದರೆ ಕಾಲ ಬದಲಾದಂತೆ ಮದುವೆಯಾದ ಬಳಿಕವೂ ತಮ್ಮ ಈ ಸಾಧನೆಯನ್ನು ಮುಂದುವರಿಸಿದ್ದಾರೆ. ಇಂತಹ ಮಹಿಳೆಯರ ಆತ್ಮಸ್ಥೈರ್ಯ ಹೆಚ್ಚಿಸುತ್ತಿರುವ ಪೊಲೀಸರ ಕಾರ್ಯ ಮೆಚ್ಚುವಂತಹದ್ದು ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Comments are closed.