ರಾಷ್ಟ್ರೀಯ

5,000 ಕೋಟಿ ಸಾಲ ವಂಚನೆ: ಆರೋಪಿ ನಿತಿನ್ ಸಂದೇಸರ ಕುಟುಂಬ ಸಮೇತ ನೈಜೀರಿಯಾಕ್ಕೆ ಪರಾರಿ ?

Pinterest LinkedIn Tumblr

ಹೊಸದಿಲ್ಲಿ: 5,000 ಕೋಟಿ ಸಾಲ ವಂಚನೆ ಪ್ರಕರಣದ ಪ್ರಮುಖ ಆರೋಪಿ ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹದ ಒಡೆಯ ನಿತಿನ ಸಂದೇಸರ ಮತ್ತವರ ಕುಟುಂಬ ನೈಜೀರಿಯಾಕ್ಕೆ ಪಲಾಯನ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಉನ್ನತ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಮೋಸ್ಟ್ ವಾಟೆಂಡ್ ಆಗಿರುವ ನಿತಿನ್ ಸಂದೇಸರ , ಸಹೋದರ ಚೇತನ್ ಸಂದೇಸರ , ಅತ್ತಿಗೆ ದೀಪ್ತಿಬೆನ್ ಸಂದೇಸರ ಸದ್ಯ ಯುಎಇಯಲ್ಲಿ ಇಲ್ಲ, ನೈಜೀರಿಯಾದಲ್ಲಿ ತಲೆಮರೆಸಿಕೊಂಡಿರಬಹುದು.

ಭಾರತ ಮತ್ತು ನೈಜೀರಿಯಾ ನಡುವೆ ಹಸ್ತಾಂತರ ಒಪ್ಪಂದ ಅಥವಾ ದ್ವಿಪಕ್ಷೀಯ ಕಾನೂನು ಸಹಕಾರ ಒಪ್ಪಂದ ಇಲ್ಲ. ಹೀಗಾಗಿ ಆಫ್ರಿಕಾದ ದೇಶದಿಂದ ಸಂದೇಸರ ಕುಟುಂಬವನ್ನು ಮರಳಿ ಕರೆತರುವುದು ಕಷ್ಟಸಾಧ್ಯ ಎಂದು ಮೂಲಗಳು ತಿಳಿಸಿವೆ.

ನಿತಿನ್ ಸಂದೇಸರ ಅವರನ್ನು ಆಗಸ್ಟ್ 2 ನೇ ವಾರದಲ್ಲಿ ಯುಎಇ ಪೊಲೀಸರು ಬಂಧಿಸಿದ್ದರು ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಇದು ಸುಳ್ಳು ಮಾಹಿತಿ. ಅವರನ್ನು ದುಬೈನಲ್ಲಿ ಎಂದಿಗೂ ಬಂಧಿಸಲಾಗಿಲ್ಲ. ಅದಕ್ಕಿಂತ ಮೊದಲೇ ನಿತಿನ್ ಮತ್ತವರ ಕುಟುಂಬ ನೈಜೀರಿಯಾಕ್ಕೆ ಪಲಾಯನ ಮಾಡಿರಬಹುದೆಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರು ಭಾರತೀಯ ಪಾಸ್ಪೋರ್ಟ್‌ನಲ್ಲಿ ಓಡಿ ಹೋದರೇ ಅಥವಾ ಬೇರೆ ದೇಶದ ದಾಖಲೆಯನ್ನು ಬಳಸಿಕೊಂಡು ಹೋದರೇ ಎಂಬುದು ತಿಳಿದುಬಂದಿಲ್ಲ.

ಏತನ್ಮಧ್ಯೆ ತನಿಖಾ ಸಂಸ್ಥೆಗಳು ಅವರೇನಾದರೂ ದುಬೈನಲ್ಲಿ ಕಂಡುಬಂದರೆ “ತಾತ್ಕಾಲಿಕವಾಗಿ ಬಂಧನ”ಕ್ಕೊಳಪಡಿಸಿ ಎಂದು ಅಲ್ಲಿನ ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.ಇಂಟರ್ಪೋಲ್ ಮೂಲಕ ರೆಡ್ ಕಾರ್ನರ್ ನೋಟೀಸ್ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿವೆ.

ಸಾಲ ವಂಚನೆ ಹಗರಣದ ಆರೋಪದ ಮೇಲೆ ಸ್ಟರ್ಲಿಂಗ್ ಬಯೋಟೆಕ್ ಉದ್ಯಮ ಸಮೂಹಕ್ಕೆ ಸೇರಿದ ಸುಮಾರು 4700 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಕಳೆದ ಜೂನ್ ತಿಂಗಳಲ್ಲಿ ಮುಟ್ಟುಗೋಲು ಹಾಕಿತ್ತು. ಸಂದೇಸರ ಕುಟುಂಬ ಭಾರತ ಮತ್ತು ವಿದೇಶಗಳಲ್ಲಿ 300ಕ್ಕೂ ಹೆಚ್ಚು ಬೇನಾಮಿ ಮತ್ತು ನಕಲಿ ಕಂಪನಿ ಹೊಂದಿದೆ ಎಂಬ ಆರೋಪವಿದೆ.

Comments are closed.