ಕರಾವಳಿ

ಶ್ರೀ ಕ್ಷೇತ್ರ ಕುದ್ರೋಳಿ : ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ “ಮಂಗಳೂರು ದಸರಾ ಮಹೋತ್ಸವ” ಉದ್ಘಾಟನೆ

Pinterest LinkedIn Tumblr

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರತಿವರ್ಷ ನಡೆಯುವ “ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ ಅ.10ರಿಂದ 19ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು, ವೈಭವದ ಮಂಗಳೂರು ದಸರಾ ಮಹೋತ್ಸವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಎಂದು ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.

ಶ್ರೀಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 10ರಿಂದ 19ರವರೆಗೆ ಮಂಗಳೂರು ದಸರಾ ವಿಜೃಂಭಣೆಯಿಂದ ನಡೆಯಲಿದೆ. ಇದರ ಉದ್ಘಾಟನೆಗೆ ತಾನು ಆಗಮಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಶನಿವಾರ ಅನ್ ಮೂಲಕ ಖಚಿತಪಡಿಸಿದ್ದಾರೆ. ಉದ್ಘಾಟನೆ ದಿನಾಂಕವನ್ನು ಇನ್ನಷ್ಟೇ ನಿಗದಿಗೊಳಿಸಬೇಕಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ( File Photo)

ಮುಖ್ಯಮಂತ್ರಿ ದಸರಾ ಉದ್ಘಾಟನೆಗೆ ಒಪ್ಪಿರುವುದು ಸಂತಸ ನೀಡಿದೆ. ದೇವೇಗೌಡರೂ ದಸರಾ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದರೆ ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕರೆಯುವ ಬಗ್ಗೆ ಯೋಚನೆ ಮಾಡಿಲ್ಲ. ಯಾರೂ ಬಾರದಿದ್ದರೆ ನಾನೇ ದಸರಾ ಉದ್ಘಾಟಿಸುತ್ತೇನೆ ಎಂದು ಪೂಜಾರಿ ಹೇಳಿದ್ದಾರೆ.

ಅ. 10ರಂದು ದೇವಾಲಯದಲ್ಲಿ ನವದುರ್ಗೆಯರು ಮತ್ತು ಶಾರದಾ ಮಾತೆ ಪ್ರತಿಷ್ಠಾಪನೆಯ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಮಂಗಳೂರು ದಸರಾ ಈ ಬಾರಿಯೂ ವೈಭವದಿಂದ ನಡೆಯಲಿದೆ. ಅದಕ್ಕಾಗಿ ಈಗಾಗಲೇ ಸಿದ್ಧತೆ ಆರಂಭವಾಗಿದೆ.

ವಿವಿಧ ತಂಡಗಳು ಕಾರ್ಯಕ್ರಮ ನೀಡಲಿವೆ. ದಸರಾ ಶೋಭಾಯಾತ್ರೆಯಲ್ಲಿ ವಿವಿಧ ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ಕಳೆದ ವರ್ಷ 68 ಟ್ಯಾಬ್ಲೊಗಳು ಭಾಗವಹಿಸಿದ್ದವು. ಈ ಬಾರಿ ಅದಕ್ಕಿಂತ ಹೆಚ್ಚಿನ ಟ್ಯಾಬ್ಲೊಗಳನ್ನು ನಿರೀಕ್ಷಿಸಲಾಗಿದೆ. ಹಲವು ಸಂಘಟನೆಯವರು ಸಂಪರ್ಕಿಸಿದ್ದು, ಹೊಸ ಟ್ಯಾಬ್ಲೊ ಮಾಡುವ ಉತ್ಸಾಹ ತೋರಿಸಿದ್ದಾರೆ. ದೇಶದ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೊಗಳಿಗೆ ಆದ್ಯತೆ ನೀಡಲಾಗುವುದು. ದೇಶ ವಿದೇಶದಿಂದ ಜನರು ಆಗಮಿಸಲಿದ್ದಾರೆ ಎಂದು ಪೂಜಾರಿ ತಿಳಿಸಿದ್ದಾರೆ.

ಅ.19ರಂದು ಸಂಜೆ ವೈಭವದ ಶೋಭಾಯಾತ್ರೆ :

ಅ.19ರಂದು ಸಂಜೆ 4 ಗಂಟೆಗೆ ವೈಭವದ “ಮಂಗಳೂರು ದಸರಾ’ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಸಮಾರಂಭ ನಡೆಯಲಿದೆ. ಮೆರವಣಿಗೆಯಲ್ಲಿ ಶ್ರೀ ಶಾರದಾ ಮಾತೆ, ಮಹಾಗಣಪತಿ, ನವದುರ್ಗೆಯರ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು 75ಕ್ಕಿಂತಲೂ ಅಧಿಕ ಟ್ಯಾಬ್ಲೋಗಳು ಭಾಗವಹಿಸಲಿವೆ.

(ಕಡತ ಚಿತ್ರ)

ಜಿಲ್ಲೆ ಹಾಗೂ ಹೊರಜಿಲ್ಲೆಯ ಜಾನಪದ ತಂಡಗಳು ಮೆರವಣಿಗೆಗೆ ವಿಶೇಷ ಸೊಬಗನ್ನು ನೀಡಲಿವೆ. ಸುಮಾರು 500ಕ್ಕೂ ಹೆಚ್ಚು ಆಲಂಕಾರಿಕ ಕೊಡೆಗಳ ಮೂಲಕ ಮೆರವಣಿಗೆಗೆ ಮೆರುಗು ನೀಡಲಿದೆ.ಈ ಹಿಂದೆಗಿಂತಲೂ ಮತ್ತಷ್ಟು ವಿಜೃಂಭಣೆಯಿಂದ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ ಎಂದು ಪೂಜಾರಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್ ಆರ್. (ಅಡ್ವಕೇಟ್), ಕಾರ್ಯದರ್ಶಿ ಮಾಧವ ಸುವರ್ಣ, ಅಭಿವೃದ್ಧಿ ಸಮಿತಿ ಸದಸ್ಯರಾದ ಡಾ.ಬಿ.ಜಿ. ಸುವರ್ಣ, ರಾಧಾಕೃಷ್ಣ, ಡಾ. ಅನಸೂಯಾ, ದೇವೇಂದ್ರ ಪೂಜಾರಿ, ಶೇಖರ ಪೂಜಾರಿ, ಜಯವಿಕ್ರಮ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.