ರಾಷ್ಟ್ರೀಯ

ನೀರವ್ ಮೋದಿಯ ಪಾಸ್‌ಪೋರ್ಟ್ ರದ್ದಾಗಿದ್ದರೂ ವಿವಿಧ ದೇಶಕ್ಕೆ ಪ್ರಯಾಣ!

Pinterest LinkedIn Tumblr


ಹೊಸದಿಲ್ಲಿ: ನೀರವ್ ಮೋದಿ ವಿದೇಶಕ್ಕೆ ಪರಾರಿಯಾದ ಮೇಲೆ ಆತನ ಪಾಸ್‌ಪೋರ್ಟ್ ಅನ್ನು ಸರಕಾರ ರದ್ದುಪಡಿಸಿದ್ದರೂ, ವಿವಿಧ ದೇಶಗಳಿಗೆ ಆತ ಯಶಸ್ವಿಯಾಗಿ ಪ್ರಯಾಣಿಸಿದ್ದ ಎನ್ನುವ ಅಂಶ ತನಿಖೆಯ ವೇಳೆ ಪತ್ತೆಯಾಗಿದೆ.

ಪಾಸ್‌ಪೋರ್ಟ್ ರದ್ದುಪಡಿಸಿದ ಬಳಿಕ ಇಂಟರ್‌ಪೋಲ್‌ಗೆ ಫೆ. 24ರಂದು ನೀರವ್ ಪಾಸ್‌ಪೋರ್ಟ್ ರದ್ದು ಮತ್ತು ವಂಚನೆ ಬಗ್ಗೆ ಭಾರತ ಸರಕಾರ ವರದಿ ನೀಡಿತ್ತು. ಜತೆಗೆ ನೀರವ್ ಬಂಧನಕ್ಕೆ ಸಹಕಾರ ಕೋರಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮಿತ್ರರಾಷ್ಟ್ರಗಳು ಮತ್ತು ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳಿಗೆ ಮನವಿ ಸಲ್ಲಿಸಿ, ನೀರವ್ ಪತ್ತೆಗೆ ಯತ್ನಿಸಿತ್ತು. ಆದರೆ ನೀರವ್ ಹಲವು ಪಾಸ್‌ಪೋರ್ಟ್ ಹೊಂದಿದ್ದು, ಅದನ್ನು ಬಳಸಿ ಇಂಗ್ಲೆಂಡ್‌, ಹಾಂಗ್‌ಕಾಂಗ್‌, ನ್ಯೂಯಾರ್ಕ್‌ ಮತ್ತು ಪ್ಯಾರಿಸ್‌ಗೆ ಪ್ರಯಾಣಿಸಿದ್ದ ಎನ್ನುವುದು ಪತ್ತೆಯಾಗಿದೆ.

ಷೇರು ಅಕ್ರಮದ ಮೂಲಕ ತಂಗಿಯ ಖಾತೆಗೆ ಹಣ ವರ್ಗಾಯಿಸಿದ್ದ ನೀರವ್ ಮೋದಿ:

ಪಿಎನ್‌ಬಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಸಿಂಗಾಪುರದಲ್ಲಿ ಶಾಶ್ವತವಾಗಿ ನೆಲೆಸಲು ಅರ್ಜಿ ಸಲ್ಲಿಸಿದ್ದ ಮತ್ತು ಷೇರು ಅಕ್ರಮದ ಮೂಲಕ ಹಣವನ್ನು ಸಹೋದರಿಯ ಖಾತೆಗೆ ವರ್ಗಾಯಿಸಿದ್ದ ಎನ್ನುವ ಅಂಶ ತನಿಖೆಯ ವೇಳೆ ಪತ್ತೆಯಾಗಿದೆ.

ಸಿಂಗಾಪುರದಲ್ಲಿ ನೆಲೆಸಲು ಎಸ್‌ಪಿಆರ್‌ ಪಡೆದುಕೊಳ್ಳುವ ಸಲುವಾಗಿ ನೀರವ್ ಮೋದಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ತಿಂಗಳಿಗೆ ಅಂದಾಜು 75 ಲಕ್ಷ ರೂ. ವೇತನ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದ. ಜಾಗತಿಕ ಹೂಡಿಕೆದಾರರ ಯೋಜನೆ ಅಡಿ ಅರ್ಜಿ ಸಲ್ಲಿಸಿದ್ದ ನೀರವ್ ಮೋದಿ, ಸಿಂಗಾಪುರ ಪಾಸ್‌ಪೋರ್ಟ್ ಪಡೆದುಕೊಳ್ಳುವುದರಲ್ಲಿದ್ದ. ಆದರೆ ಅಷ್ಟರಲ್ಲಿ ಸಿಬಿಐ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದರಿಂದ ನೀರವ್ ಯೋಜನೆ ತಲೆಕೆಳಗಾಗಿತ್ತು.

ಅದಕ್ಕೂ ಮುಂಚೆ ನೀರವ್ ಸಹೋದರಿ ಪೂರ್ವಿ ಮೆಹ್ತಾ ಖಾತೆಗೆ ಅತ್ಯಂತ ಚಾಣಾಕ್ಷತನದಿಂದ ಹಣ ವರ್ಗಾಯಿಸಿದ್ದ. ದುಬೈನಲ್ಲಿದ್ದ ನಕಲಿ ಕಂಪನಿಗಳಿಂದ ಫೈನ್‌ ಕ್ಲಾಸಿಕ್‌ ಎಫ್‌ಝೆಡ್‌ಇ ಖಾತೆಗೆ ಷೇರು ಅಕ್ರಮದ ಮೂಲಕ 65 ಮಿಲಿಯನ್ ಡಾಲರ್ ಹಣವನ್ನು ವರ್ಗಾಯಿಸಿದ್ದ.

ಮತ್ತೊಂದು ಪ್ರಕರಣದಲ್ಲಿ ಫೈರ್‌ಸ್ಟಾರ್‌ ಹೋಲ್ಡಿಂಗ್ ಮೂಲಕ 35 ಮಿಲಿಯನ್ ಡಾಲರ್ ಮೊತ್ತವನ್ನು ವರ್ಗಾಯಿಸಲಾಗಿತ್ತು. ಜತೆಗೆ ದುಬೈನಲ್ಲಿದ್ದ ನಕಲಿ ಕಂಪನಿಯಿಂದ ಪೂರ್ವಿಯ ಪತಿ ಮಯಾಂಕ್ ಮೆಹ್ತಾ ಖಾತೆಗೆ 30 ಮಿಲಿಯನ್ ಡಾಲರ್ ಮೊತ್ತ ವರ್ಗಾಯಿಸಲಾಗಿತ್ತು.

ಇವೆಲ್ಲವನ್ನು ನೀರವ್ ಅತ್ಯಂತ ಚಾಣಾಕ್ಷತೆಯಿಂದ, ಪೂರ್ವನಿರ್ಧರಿತ ಯೋಜನೆ ಮೂಲಕವೇ ಮಾಡಿದ್ದ. ಈ ಮೂಲಕ ಹಣ ವರ್ಗಾವಣೆಯಲ್ಲಿ ಯಾವುದೇ ಸಂಶಯ ಬಾರದಂತೆ ನೋಡಿಕೊಂಡಿದ್ದ.

Comments are closed.