ಕರ್ನಾಟಕ

ಹಿಂದು ಕಾರ್ಯಕರ್ತ ರಿಗೆ ನೀಡುತ್ತಿರುವ ಹಿಂಸೆ ಸರಿಯಲ್ಲ: ಪ್ರಮೋದ್ ಮುತಾಲಿಕ್

Pinterest LinkedIn Tumblr


ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಯಾವುದೇ ಹಿಂದೂ ಸಂಘಟನೆಗಳು ಭಾಗಿಯಾಗಿಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ. ರಾಜಾಜಿನಗರದ ರಾಮಮಂದಿರದಲ್ಲಿ ಭಾನುವಾರ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ “ಎಡಪಂಥೀಯರ ಹಿಂದೂ ವಿರೋಧಿ ಷಡ್ಯಂತ್ರ ಬಹಿರಂಗಗೊಳಿಸಲು ಜನಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ಹಿಂದೂ ಸಂಘಟನೆಗಳು ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸುತ್ತಿವೆ. ನಾಡಿನ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿವೆ. ಗೌರಿ ಲಂಕೇಶ್‌ ಅವರೊಂದಿಗೆ ಸೈದ್ಧಾಂತಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿರಬಹುದು. ಆದರೆ. ಹತ್ಯೆ ಮಾಡುವಷ್ಟು ನೀಚ ಮನಸ್ಥಿತಿ ಯಾರಿಗೂ ಇಲ್ಲ. ಗೌರಿ ಹತ್ಯೆ ಪ್ರಕರಣದಲ್ಲಿ ಹಿಂದೂ ಸಂಘಟನೆಗಳು ಭಾಗಿಯಾಗಿಲ್ಲ ಎಂದರು.

ಏಕೆ ಬಂಧಿಸಿಲ್ಲ?: ಪ್ರಕರಣದಲ್ಲಿ ವಿನಾಕಾರಣ ಹಿಂದೂಪರ ಕಾರ್ಯಕರ್ತ ನವೀನ್‌ ಕುಮಾರ್‌ನನ್ನು ಬಂಧಿಸಿ ಚಿತ್ರ ಹಿಂಸೆ ನೀಡಲಾಗುತ್ತಿದೆ. ಹಾಗಾದರೆ ಗೌರಿ ಹತ್ಯೆಗೆ ಗುಂಡು ಕೊಟ್ಟವರನ್ನು ಹಾಗೂ ಮನೆ ಬಾಡಿಗೆ ನೀಡಿದವರನ್ನು ಇದುವರೆಗೂ ಏಕೆ ಬಂಧಿಸಿಲ್ಲ? ತನಿಖೆಯ ಆರಂಭದಲ್ಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ಪೊಲೀಸ್‌ ಇಲಾಖೆಯನ್ನು ದಿಕ್ಕುತಪ್ಪಿಸಿದ ಹಿಂದಿನ ಕಾಂಗ್ರೆಸ್‌ ಸರ್ಕಾರ, ಹಿಂದೂ ಕಾರ್ಯಕರ್ತರೇ ಹತ್ಯೆ ಮಾಡಿದ್ದು ಎಂದು ಬಿಂಬಿಸಿತ್ತು. ಕಾಂಗ್ರೆಸ್‌ ಕುತಂತ್ರಕ್ಕೆ ಅಮಾಯಕ ಹಿಂದೂಗಳು ಗುರಿಯಾಗುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಯಾವುದೇ ಹತ್ಯೆ ನಡೆದರೂ ಪ್ರಧಾನಿ ನರೇಂದ್ರ ಮೋದಿಯವರನ್ನು ಕಾಂಗ್ರೆಸ್‌ ಪ್ರಶ್ನಿಸಲು ಆರಂಭಿಸುತ್ತದೆ. ರಾಜ್ಯದಲ್ಲಿ ನಾಯಿ ಸತ್ತರೂ ಮೋದಿ ಉತ್ತರ ಕೊಡಬೇಕೆ ಎಂದು ಕಿಡಿಕಾರಿದರು.

ಹಿಂದೂ ಜನಜಾಗೃತಿ ಸಮಿತಿ ಸಂಸ್ಥಾಪಕ ಮೋಹನ್‌ ಗೌಡ ಮಾತನಾಡಿ, ಗೌರಿ ಲಂಕೇಶ್‌ ಕೊಲೆ ಪ್ರಕರಣದಲ್ಲಿ ನಕ್ಸಲರ ಕೈವಾಡವಿದೆ ಎಂದು ಇಂದ್ರಜಿತ್‌ ಲಂಕೇಶ್‌ ತಿಳಿಸಿದರೂ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬಂಧಿಸಲಾಗುತ್ತಿದೆ. ನವೀನ್‌ ಕುಮಾರ್‌ನನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ.

ಅಲ್ಲದೆ, ಅಭಿ, ಗಿರಿ ಹಾಗೂ ಅನಿಲ್‌ ಅವರಿಗೂ ಚಿತ್ರಹಿಂಸೆ ನೀಡಿ ಕೊಲೆ ಪ್ರಕರಣ ಒಪ್ಪಿಕೊಳ್ಳಿ ಎಂದು ಎಸ್‌ಐಟಿ ಬೆದರಿಕೆಯೊಡ್ಡಿದೆ ಎಂದು ನೇರ ಆರೋಪ ಮಾಡಿದರು. ಅಲ್ಲದೆ ಸುಪ್ರೀಂ ಕೋರ್ಟ್‌ ಆದೇಶಗಳನ್ನು ಉಲ್ಲಂ ಸಿ ಅಮಾಯಕ ಹಿಂದೂ ಕಾರ್ಯ ಕರ್ತರನ್ನ ಬಂಧಿಸಿ ಹಿಂಸೆ ನೀಡುತ್ತಿರುವುದು ಸರಿಯಲ್ಲ ಎಂದರು.

ಹಿಂದೂ ವಿಧಿಜ್ಞ ಪರಿಷತ್‌ನ ಎನ್‌.ಪಿ ಅಮೃತೇಶ್‌ ಮಾತನಾಡಿ, ಗೌರಿ ಹತ್ಯೆ ಪ್ರಕರಣದಲ್ಲಿ ತನಿಖಾ ತಂಡಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಅಮಾಯಕ ಹಿಂದೂಗಳ ಮೇಲೆ ಅಪವಾದ ಹೊರಿಸಿ ಬಂಧಿಸಲಾಗುತ್ತಿದೆ ಎಂದು ಆರೋಪಿಸಿದರು.

ಸಿಎಂ ಇಬ್ರಾಹಿಂ ಐಎಸ್‌ಐ ಏಜೆಂಟ್‌ ಅಂದರೆ ಸುಮ್ಮನಿರುತ್ತಾರ?: ಗೌರಿ ಲಂಕೇಶ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ವಿಚಾರಣೆ ನಡೆಸಬೇಕು ಎನ್ನುವ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ವಿರುದ್ಧ ಕಿಡಿ ಕಾರಿದ ಪ್ರಮೋದ್‌ ಮುತಾಲಿಕ್‌, ಇಂತಹ ಹೇಳಿಕೆ ಇಬ್ರಾಹಿಂ ಅವರಂಥ ಜನಪ್ರತಿನಿಧಿಗಳ ಘನತೆಗೆ ತಕ್ಕುದಲ್ಲ.

ಯಾವ ದಾಖಲೆಗಳ ಆಧಾರಗಳಲ್ಲಿ ಅವರು ಮಾತನಾಡುತ್ತಾರೆ?. ಅಲ್ಲದೆ, ಇಬ್ರಾಹಿಂ ಐಎಸ್‌ಐ ಏಜೆಂಟ್‌, ಉಗ್ರಗಾಮಿ ಎಂದು ನಾನು ಹೇಳುತ್ತೇನೆ. ಅವರನ್ನು ಬಂಧಿಸಲಾಗುತ್ತದೆಯೇ? ಅವರು ಸುಮ್ಮನಿರುತ್ತಾರೆಯೇ ಎಂದು ಪ್ರಶ್ನಿಸಿದ ಅವರು, ಇಬ್ರಾಹಿಂ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

Comments are closed.