ಮುಂಬೈ

ವಿವಾಹಿತ ಮಹಿಳೆ ಮದುವೆ ಆಮಿಷ ನಂಬಿ ದೈಹಿಕ ಸಂಬಂಧ ಬೆಳೆಸಿದರೆ ಅದು ಅತ್ಯಾಚಾರವಲ್ಲ: ಮುಂಬೈ ಹೈಕೋರ್ಟ್

Pinterest LinkedIn Tumblr


ಮುಂಬೈ: ಅದಾಗಲೇ ವಿವಾಹವಾಗಿರುವ ಮಹಿಳೆಯೊಬ್ಬರು ಬೇರೊಬ್ಬ ವ್ಯಕ್ತಿಯ ಮದುವೆ ಆಮಿಷವನ್ನು ನಂಬಿ ಆತನೊಂದಿಗೆ ದೈಹಿಕ ಸಂಬಂಧ ಬೆಳೆಸಿದ ನಂತರ ಆತನ ಮೇಲೆ ಅತ್ಯಾಚಾರದ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ಮುಂಬೈ ಹೈಕೋರ್ಟ್​ ಸೋಮವಾರ ಮಹತ್ವದ ತೀರ್ಪು ನೀಡಿದೆ.

ಮುಂಬೈ ಹೈಕೋರ್ಟ್​ನ ನ್ಯಾ. ಆರ್.​ ಕೆ. ದೇಶಪಾಂಡೆ ಮತ್ತು ಅರುಣ್​ ಉಪಾಧ್ಯೆ ಅವರಿದ್ದ ಪೀಠ ಈ ತೀರ್ಪು ನೀಡಿದ್ದು, ಮಹಾರಾಷ್ಟ್ರದ ವಾದ್ರಾ ಮೂಲದ ಮಹಿಳೆಯೊಬ್ಬರು ಸಚಿನ್​ ಪೊಟುಡೆ ಎಂಬುವವರ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿದೆ.
ಈ ಹಿಂದಿನ ವಿವಾಹ ಊರ್ಜಿತವಾಗಿರುವಾಗಲೇ ಮತ್ತೊಬ್ಬ ವ್ಯಕ್ತಿಯ ಮದುವೆ ಭರವಸೆಯ ಆಧಾರದಲ್ಲಿ ಆತನೊಂದಿಗೆ ದೈಹಿಕ ಸಂಬಂಧ ಬೆಳೆಸಿದರೆ ಅದನ್ನು ಅತ್ಯಾಚಾರವೆಂದು ಕರೆಯಲು ಸಾಧ್ಯವಿಲ್ಲ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.

ಏನಿದು ಪ್ರಕರಣ?
2013ರ ಜೂನ್​ನಲ್ಲಿ ವಾದ್ರಾ ಮೂಲದ 26 ವರ್ಷದ ಮಹಿಳೆಯೊಬ್ಬರು ಸಚಿನ್​ ಪೊಟುಡೆ ಎಂಬುವವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ವಿವಾಹಿತ ಮಹಿಳೆ ಒಂದು ಮಗುವಿನ ತಾಯಿಯಾಗಿದ್ದು, ಸಹೋದ್ಯೋಗಿ, ವಿವಾಹಿತ ಸಚಿನ್​ ಪೊಟುಡೆ ಪರಿಚಯವಾದ ನಂತರ ಪತಿಯಿಂದ ಪರಿತ್ಯಕ್ತರಾಗಿ ಪ್ರತ್ಯೇಕವಾಗಿ ನೆಲೆಸಿದ್ದರು. ಇಬ್ಬರ ನಡುವೆ ದೈಹಿಕ ಸಂಬಂಧವೂ ಏರ್ಪಟ್ಟಿತ್ತು. ಈ ವಿಚಾರ ಸಚಿನ್​ ಪೊಟುಡೆ ಪತ್ನಿಗೆ ತಿಳಿದು ಆಕೆ ಪ್ರಕರಣವನ್ನೂ ದಾಖಲಿಸಿದ್ದರು. ಹೀಗಿರುವಾಗಲೇ, ಸಚಿನ್​ ಜತೆ ಸಂಬಂಧ ಹೊಂದಿದ್ದ ಮಹಿಳೆಯೂ ಆತನ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ಪಟೌಡ್​ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾಗಿ ಮಹಿಳೆ ಆರೋಪಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪೊಟುಡೆವಿರುದ್ಧ ಚಾರ್ಜ್​ಶೀಟ್​ ಅನ್ನೂ ಸಲ್ಲಿಸಿತ್ತು. ತನ್ನ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಪೊಟುಡೆ ಮುಂಬೈ ಹೈಕೋರ್ಟ್​ ಮೊರೆ ಹೋಗಿದ್ದರು

Comments are closed.