ರಾಷ್ಟ್ರೀಯ

ರಾಷ್ಟ್ರಪತಿಗೆ ಗರ್ಭಗುಡಿ ಪ್ರವೇಶಕ್ಕೆ ಅನುಮತಿ ನೀಡದ್ದಕ್ಕೆ ದೇವಾಲಯದ ಅರ್ಚಕರ ಮೇಲೆ ಹಲ್ಲೆ !

Pinterest LinkedIn Tumblr

ಜೈಪುರ(ರಾಜಸ್ಥಾನ): ರಾಜಸ್ಥಾನದ ಪುಷ್ಕರದಲ್ಲಿರುವ ಪ್ರಸಿದ್ದ ಬ್ರಹ್ಮ ದೇವಾಲಯ ಗರ್ಭಗೃಹ ಪ್ರವೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಅನುಮತಿ ನೀಡದ್ದಕ್ಕೆ ಭಕ್ತರಂತೆ ವೇಷ ಧರಿಸಿದ ವ್ಯಕ್ತಿಯೊಬ್ಬ ದೇವಾಲಯದ ಅರ್ಚಕರ ಮೇಲೆ ಹಲ್ಲೆ ನಡೆಸಿದ್ದಾನೆ.

ಅಶೋಕ್ ಮೇಘವಾಲ್ ಎನ್ನುವ ವ್ಯಕ್ತಿ ದೇವಾಲಯದ ಸರತಿ ಸಾಲಿನಲ್ಲಿ ನಿಂತಿದ್ದು ತಾನು ದೇವರ ದರ್ಶನಕ್ಕಾಗಿ ಗರ್ಭಗೃಹ ಸಮೀಪಕ್ಕೆ ಬಂದಾಗ ಅಲ್ಲಿದ್ದ ಅರ್ಚಕ ಮಹದೇವಪುರಿ ಅವರಿಗೆ ಥಳಿಸಿದ್ದಾನೆ ಎಂದು ಪೋಲೀಸರು ತಿಳಿಸಿದರು.

ಪುಷ್ಕರ ದೇವಾಲಯದ ಆಡಳಿತಾಧಿಕಾರಿ ಮಹಾವೀರ ಶರ್ಮಾ ಹೇಳುವಂತೆ ಆರೋಪಿ ಅಶೋಕ್ ಮೇಘವಾಲ್ ತಾನೊಬ್ಬ ವೈದ್ಯನೆಂದು ಹೇಳಿಕೊಂಡಿದ್ದರೂ ಆತ ಮಾನಸಿಕ ಅಸ್ವಸ್ಥನಾಗಿದ್ದಾನೆ.

ರಾಷ್ಟ್ರಪತಿಯವರ ಪತ್ನಿಗೆ ಮೊಣಕಾಲು ಸಮಸ್ಯೆ ಇದ್ದ ಕಾರಣ ರಾಷ್ಟ್ರಪತಿ ಕೋವಿಂದ್ ತಮ್ಮ ಇತ್ತೀಚಿನ ಪುಷ್ಕರ ಭೇಟಿ ವೇಳೆ ದೇವಾಲಯದ ಒಳ ಪ್ರವೇಶಿಸದೆ ಹೊರಗಿನಿಂದ ದೇವರಿಗೆ ನಮಿಸಿ ತೆರಳಿದ್ದರು. ಆದರೆ ಇದೇ ನೆಪ ಮಾಡಿಕೊಂಡ ಕೆಲ ಕಿಡಿಗೇಡಿಗಳು ರಾಷ್ಟ್ರಪತಿಗಳಿಗೆ ದೇವಾಲಯ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ವಾಟ್ಸ್ ಅಪ್ ನಲ್ಲಿ ತಪ್ಪು ಸಂದೇಶ ಕಳಿಸಿ ಜನರ ದಾರಿ ತಪ್ಪಿಸುವ ಯತ್ನ ನಡೆಸಿದ್ದಾರೆ.

ಆರೋಪಿ ತನ್ನ ಕೈನಲ್ಲಿದ್ದ ಮಾರಕಾಸ್ತ್ರದಿಂದ ಅರ್ಚಕರ ಮೇಲೆ ಹಲ್ಲೆ ನಡೆಸುವ ಚಿತ್ರಗಳು ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದೀಗ ವೈರಲ್ ಆಗಿದೆ.

ಪುಷ್ಕರದ ಈ ಘಟನೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು ದೇವಾಲಯ ಪ್ರವೇಶಿಸುವ ಪ್ರತಿ ಭಕ್ತನೂ ಲೋಹ ಪತ್ತೆ ಪರೀಕ್ಷೆ (ಮೆಟಲ್ ಡಿಟೆಕ್ಟರ್ ಟೆಸ್ಟ್) ಮೂಲಕವೇ ಸಾಗಬೇಕು ಎನ್ನುವುದು ಗಮನಾರ್ಹ ಅಂಶ.

Comments are closed.