ಕರಾವಳಿ

ದ.ಕ.ಜಿಲ್ಲಾದ್ಯಂತ ಭಾರೀ ವರ್ಷಧಾರೆ : ಕುದ್ರೋಳಿಯಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿದು ರಸ್ತೆ ಸಂಪೂರ್ಣ ಜಲಾವೃತ

Pinterest LinkedIn Tumblr

ಮಂಗಳೂರು ಮೇ 29 : ಜಿಲ್ಲೆಯಾದ್ಯಂತ ಭಾರೀ ವರ್ಷಧಾರೆಯಾಗುತ್ತಿದ್ದು, ಧಾರಾಕಾರ ಮಳೆಗೆ ಕರಾವಳಿಯ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಇದೇ ವೇಳೆ ಭಾರೀ ಮಳೆಗೆ ಮಂಗಳೂರಿನ ಅಳಕೆ- ಕುದ್ರೋಳಿ ಪ್ರದೇಶದ ರಸ್ತೆ ಹೊಳೆಯಂತಾಗಿದ್ದು, ಸುತ್ತಮುತ್ತಲಿನ ಮನೆಗಳಿಗೂ ನೀರು ನುಗ್ಗಿದೆ.

ವಾಯುಭಾರ ಕುಸಿತದಿಂದ ಕರಾವಳಿಯಾದ್ಯಂತ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ನಗರದ ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಕಂಡುಬಂದಿದೆ .ಕುದ್ರೋಳಿಯಿಂದ ಪ್ರಗತಿ ಸರ್ವಿಸ್ ಸ್ಟೇಷನಗೆ ಹೋಗುವ ರಸ್ತೆಯಲ್ಲಿ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಪಾದಚಾರಿಗಳು, ವಾಹನ ಸವಾರರು ಸಂಕಷ್ಟಕ್ಕೊಳಗಾದರು. ಪ್ರಗತಿ ಸರ್ವೀಸ್ ಸ್ಟೇಷನ್ ಎದುರಿನ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಸರ್ವೀಸ್ ಸ್ಟೇಷನ್‌ಗೂ ನೀರು ನುಗ್ಗಿದೆ.

ನಗರದ ಹಲವು ಕಡೆ ಒಳಚರಂಡಿಯಲ್ಲಿ ಹೂಳು ತುಂಬಿರುವ ಕಾರಣ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ಪಾದಚಾರಿಗಳು, ವಾಹನ ಸವಾರರ ಸಹಿತ ಸಾರ್ವಜನಿಕರು ತೀವ್ರ ತೊಂದರೆಗೊಳಗಾಗಿದ್ದಾರೆ.

ನಗರದ ಲಾಲ್‌ಬಾಗ್‌ನಲ್ಲಿರುವ ಮಹಾನಗರ ಪಾಲಿಕೆ ಕಚೇರಿ ಎದುರಿನ ರಸ್ತೆ, ಕಾಪಿಕಾಡ್, ನಂತೂರು, ಅತ್ತಾವರ, ಬಲ್ಮಠ, ಪಡೀಲ್‌ನ ರೈಲ್ವೆ ಮೇಲ್ಸೆತುವೆಯಡಿ ಇತ್ಯಾದಿ ಪ್ರದೇಶಗಳಲ್ಲಿ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೀವ್ರ ತೊಡಕುಂಟಾಗಿದೆ. ಕೆ.ಎಸ್.ರಾವ್ ರಸ್ತೆಯಲ್ಲೂ ಚರಂಡಿ ನೀರು ರಸ್ತೆ ಹರಿಯುತ್ತಿದ್ದು ವಾಹನ ಸವಾರರ ಸಂಕಷ್ಟ ಎದುರಿಸುತ್ತಿದ್ದಾರೆ.

Comments are closed.