ರಾಷ್ಟ್ರೀಯ

ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಬಾಬಾ ರಾಮ್‍ದೇವ್; ಪತಂಜಲಿಯಿಂದ ‘ಸ್ವದೇಶಿ ಸಮೃದ್ಧಿ’ ಸಿಮ್ ಕಾರ್ಡ್ ಲೋಕಾರ್ಪಣೆ

Pinterest LinkedIn Tumblr

ನವದೆಹಲಿ: ಪತಂಜಲಿ ಸಂಸ್ಥಾಪಕ ಯೋಗ ಗುರು ಬಾಬಾ ರಾಮ್‍ದೇವ್ ಸ್ವದೇಶಿ ಸಮೃದ್ಧಿ ಸಿಮ್ ಕಾರ್ಡ್ ಗಳನ್ನು ಬಿಎಸ್‍ಎನ್‍ಎಲ್ ಸಹಯೋಗದಲ್ಲಿ ಬಿಡುಗಡೆ ಮಾಡಿದ್ದಾರೆ. ವೇಗವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ(ಎಫ್‍ಎಂಸಿಜಿ) ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಪತಂಜಲಿ ಬ್ರಾಂಡ್ ಈ ಮೂಲಕ ಅಧಿಕೃತವಾಗಿ ಟೆಲಿಕಾಂ ಕ್ಷೇತ್ರಕ್ಕೆ ಎಂಟ್ರಿಯಾಗಿದೆ.

ಮೊದಲಿಗೆ ಪತಂಜಲಿ ಸಿಬ್ಬಂದಿ ಹಾಗೂ ಕಾರ್ಮಿಕ ವರ್ಗದವರು ಸಿಮ್ ಕಾರ್ಡ್‍ನ ಉಪಯೋಗವನ್ನು ಪಡೆಯಲಿದ್ದಾರೆ. ನಂತರ ಗ್ರಾಹಕರು ಸಿಮ್ ಕಾರ್ಡ್ ಹೊಂದಿದ್ದಲ್ಲಿ ಪತಂಜಲಿ ಉತ್ಪನ್ನಗಳ ಮೇಲೆ ಶೇ.10ರ ವಿನಾಯಿತಿಯನ್ನು ಪಡೆಯಲಿದ್ದಾರೆ.

144 ರೂ. ಗಳಿಗೆ ರೀಚಾರ್ಜ್ ಮಾಡಿಸಿದರೆ ದೇಶಾದ್ಯಂತ ಅನ್ ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿದೆ. ಜೊತೆಗೆ 2ಜಿಬಿ ಡೇಟಾ, 100 ಎಸ್‍ಎಂಎಸ್‍ಗಳು ಉಚಿತವಾಗಿ ದೊರೆಯಲಿದೆ. ಇಷ್ಟೇ ಅಲ್ಲದೇ ಗ್ರಾಹಕರಿಗೆ ಆರೋಗ್ಯ, ಅಪಘಾತ, ಜೀವ ವಿಮೆಗಳು ಇರಲಿವೆ ಎಂದು ಕಂಪೆನಿ ತಿಳಿಸಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಮ್‍ದೇವ್, ಬಿಎಸ್‍ಎನ್‍ಎಲ್ ಸ್ವದೇಶಿ ಕಂಪೆನಿಯಾಗಿರುವ ಕಾರಣ ದೇಶದ ಒಳಿತಿಗಾಗಿ ಕೈ ಜೋಡಿಸಿದ್ದೇವೆ. ಗ್ರಾಹಕರಿಗೆ ಮೆಡಿಕಲ್ ಹಾಗೂ ಜೀವ ವಿಮೆ ಕೂಡ ದೊರೆಯಲಿದ್ದು 2.5 ಲಕ್ಷ ರೂ. ಮತ್ತು 5 ಲಕ್ಷ ರೂ. ವರೆಗಿನ ಮಿತಿ ಇರಲಿದೆ ಎಂದು ತಿಳಿಸಿದರು.

ಬಿಎಸ್‍ಎನ್‍ಎಲ್ ಜನರಲ್ ಮ್ಯಾನೇಜರ್ ಸುನಿಲ್ ಗಾರ್ಗ್ ಪತಂಜಲಿ ಜೊತೆಗಿನ ಸಹಯೋಗಕ್ಕೆ ಹರ್ಷವನ್ನು ವ್ಯಕ್ತಪಡಿಸಿದರು. ಪತಂಜಲಿ ಕಾರ್ಮಿಕರು ಗುರುತಿನ ಚೀಟಿ ತೋರಿಸಿ ಸಿಮ್ ಆಕ್ಟಿವೇಟ್ ಮಾಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

Comments are closed.