ರಾಷ್ಟ್ರೀಯ

ಗುಜರಾತ್‌ನಲ್ಲಿ ಶನಿವಾರ ನಸುಕಿನ ಜಾವ ಸಂಭವಿಸಿದ ಅಪಘಾತಕ್ಕೆ 19 ಮಂದಿ ಬಲಿ

Pinterest LinkedIn Tumblr


ರಾಜ್‌ಕೋಟ್: ಗುಜರಾತ್‌ನಲ್ಲಿ ಅಪಘಾತಕ್ಕೆ 19 ಮಂದಿ ಬಲಿಯಾಗಿದ್ದಾರೆ. ಭಾವನಗರ – ಅಹಮದಾಬಾದ್ ಹೆದ್ದಾರಿಯ ಬವಲಿಯಾರಿ ಗ್ರಾಮದಲ್ಲಿ ಟ್ರಕ್ ಪಲ್ಟಿಯಾಗಿ 12 ಮಹಿಳೆಯರು, ಮೂವರು ಮಕ್ಕಳು ಸೇರಿ 19 ಮಂದಿ ಮೃತಪಟ್ಟಿದ್ದು, ಶನಿವಾರ ನಸುಕಿನ ಜಾವ ಅವಘಡ ನಡೆದಿದೆ.

ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಅವರೆಲ್ಲರನ್ನು ಭಾವನಗರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪರಿಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಅಪಘಾತ ನಡೆದ ಸ್ಥಳದಲ್ಲೇ 18 ಮಂದಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಮತ್ತೊಬ್ಬರು ಸಾವಿಗೀಡಾಗಿದ್ದಾರೆ. ಅಪಘಾತಕ್ಕೊಳಗಾದವರು ಎಲ್ಲ ಕೃಷಿ ಕಾರ್ಮಿಕರು ಎಂದು ಗುಜರಾತ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಪಲ್ಟಿ ಆದ ಟ್ರಕ್‌ನಲ್ಲಿ ಸಿಮೆಂಟ್ ಚೀಲಗಳನ್ನು ಹೊತ್ತೊಯ್ಯಲಾಗುತ್ತಿತ್ತು. ಇದೇ ವಾಹನದಲ್ಲಿ ಭಾವನಗರ ಜಿಲ್ಲೆಯ ತಲಜಾ ತಾಲೂಕಿನ ಸರ್ತಾನ್‌ಪರ ಗ್ರಾಮದ ಕೃಷಿ ಕಾರ್ಮಿಕರು ಪ್ರಯಾಣ ಮಾಡುತ್ತಿದ್ರು ಎಂದು ತಿಳಿದುಬಂದಿದೆ. ಶುಕ್ರವಾರ ರಾತ್ರಿ ಮಹುವಾ ಕ್ರಾಸ್ ರಸ್ತೆಯಲ್ಲಿ ಕಾರ್ಮಿಕರೆಲ್ಲರೂ ವಾಹನ ಹತ್ತಿದ್ದಾರೆ. ಅಲ್ಲಿಂದ ಸನಂದ್‌ನಲ್ಲಿ ಜಮೀನಿನಲ್ಲಿ ಕೆಲಸ ಮಾಡಲು ಹೋಗುತ್ತಿದ್ದರು ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, ರಸ್ತೆ ಕಿರಿದಾದ ಕಾರಣ ಟ್ರಕ್ ಪಲ್ಟಿ ಹೊಡೆದಿರಬಹುದು ಅಥವಾ, ಕಿರಿದಾದ ಸೇತುವೆಯ ಕಾಮಗಾರಿ ನಡೆಯುತ್ತಿತ್ತು. ಜತೆಗೆ, ಟ್ರಕ್ ಓವರ್‌ಲೋಡ್ ಅದ ಕಾರಣವೂ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ.

ಸರ್ತಾನ್‌ಪರ ಗ್ರಾಮದಿಂದ ಸನಂದ್‌ಗೆ ತೆರಳಲು ಟ್ರಕ್‌ ಡ್ರೈವರ್‌ಗೆ 1200 ರೂಪಾಯಿ ನೀಡಿದ್ರು. ಆದರೆ, ಅಪಘಾತದ ಬಳಿಕ ಆತ ನಾಪತ್ತೆಯಾಗಿದ್ದಾನೆ. ಅಲ್ಲದೆ, ಅಪಘಾತಕ್ಕೊಳಗಾದ ಟ್ರಕ್‌ ಅನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Comments are closed.