
ಹ್ಯೂಸ್ಟನ್: ಅಮೆರಿಕದ ಟೆಕ್ಸಾಸ್ ರಾಜ್ಯದ ಸ್ಯಾಂಟಾ ಫೇ ನಗರದಲ್ಲಿರುವ ಸ್ಯಾಂಟಾ ಫೇ ಪ್ರೌಢಶಾಲೆಯಲ್ಲಿ ಸ್ಥಳೀಯ ಕಾಲಮಾನ ಶುಕ್ರವಾರ ಬೆಳಗಿನ ಜಾವ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಗೆ 8 ಮಂದಿ ಬಲಿಯಾಗಿದ್ದಾರೆ. ದಾಳಿಯಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಎಂದಿನಂತೆ ಪೋಷಕರು ಮಕ್ಕಳನ್ನು ಶಾಲೆಗೆ ಕರೆತಂದು ಬಿಡುತ್ತಿದ್ದರು. ಬೆಳಗ್ಗೆ 7.40ರ ಸುಮಾರಿಗೆ ಶಾಲಾ ಆವರಣ ಪ್ರವೇಶಿಸಿದ ದುಷ್ಕರ್ಮಿಯೊಬ್ಬ ಕೊಠಡಿಯೊಂದರ ಬಳಿ ಹೋಗಿ ಮನಬಂದಂತೆ ಗುಂಡಿನ ದಾಳಿ ನಡೆಸಿದ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ನೋಡನೋಡುತ್ತಿದ್ದಂತೆಯೇ ರಕ್ತದೋಕುಳಿ ಹರಿಯಿತು. 8 ಮಂದಿ ಪ್ರಾಣ ಕಳೆದುಕೊಂಡರು. ಒಂದಷ್ಟು ಜನ ದಿಕ್ಕಾಪಾಲಾಗಿ ಓಡತೊಡಗಿದರು.
ಗಾಯಾಳುಗಳ ಆಕ್ರಂದನ ಮುಗಿಲು ಮುಟ್ಟಿತ್ತು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ಗುಂಡಿನ ದಾಳಿಯ ಬೆನ್ನಲ್ಲೇ ಪೊಲೀಸ್ ಪಡೆ ಕಾರ್ಯಾಚರಣೆ ನಡೆಸಿ ದಾಳಿಕೋರನನ್ನು ಬಂಧಿಸಿದೆ ಎಂದು ಮೂಲಗಳು ಹೇಳಿವೆ. ಸೆರೆಸಿಕ್ಕಿರುವ ವ್ಯಕ್ತಿ ಉಗ್ರ ಸಂಘಟನೆಗೆ ಸೇರಿದವನೇ ಎಂಬುದು ತನಿಖೆಯಿಂದಷ್ಟೇ ಬೆಳಕಿಗೆ ಬರಬೇಕಿದೆ.
ಟ್ರಂಪ್ ಸಂತಾಪ: ಇದೊಂದು ಆಘಾತಕಾರಿ ಘಟನೆಯಾಗಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಲಿಯಾದ ಜೀವಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಈ ಶಾಲೆಯಲ್ಲಿ 1400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
Comments are closed.