ರಾಷ್ಟ್ರೀಯ

ಹನ್ನೊಂದೇ ದಿನದಲ್ಲಿ ಅಸಾರಾಂ ಪೊಲೀಸ್‌ ಬಲೆಗೆ ಬಿದ್ದಿದ್ದು ಹೇಗೆ?

Pinterest LinkedIn Tumblr


ಜೋಧ್‌ಪುರ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು 2013ರಲ್ಲಿ ತಮ್ಮ ಆಶ್ರಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ದೋಷಿ ಎಂಬುದು ಸಾಬೀತಾಗಿದೆ. ವಿಶೇಷ ನ್ಯಾಯಾಧೀಶ (ಎಸ್‌ಸಿ/ಎಸ್‌ಟಿ ಕೋರ್ಟ್‌) ಮಧುಸೂದನ್‌ ಶರ್ಮಾ ಅವರು ಜೋಧ್‌ಪುರ ಜೈಲು ಆವರಣದಲ್ಲೇ ಬುಧವಾರ ಈ ತೀರ್ಪು ಪ್ರಕಟಿಸಿದರು.

ಉತ್ತರ ಪ್ರದೇಶದ ಶಹಜಹಾನ್‌ಪುರದ ಬಾಲಕಿ ಮಧ್ಯಪ್ರದೇಶದ ಛಿಂದ್ವಾರಲ್ಲಿರುವ ಅಸಾರಾಂ ಆಶ್ರಮದಲ್ಲಿ ವಿದ್ಯಾರ್ಥಿನಿಯಾಗಿ ಸೇರಿಕೊಂಡಿದ್ದಳು. 2013ರ ಆಗಸ್ಟ್‌ 15ರಂದು ರಾತ್ರಿ ಜೋಧ್‌ಪುರದ ಮನಾಯ್‌ ಆಶ್ರಮದಲ್ಲಿ ಅಸಾರಾಂ ತನ್ನ ಮೇಲೆ ಅತ್ಯಾಚಾರ ನಡೆಸಿದರು ಎಂದು ಬಾಲಕಿ ಆರೋಪಿಸಿದ್ದಳು.

ಅಸಾರಾಂ ಮತ್ತು ಇತರ ನಾಲ್ವರು ಆರೋಪಿಗಳಾದ ಶಿವ, ಶಿಲ್ಪಿ, ಶರದ್‌ ಮತ್ತು ಪ್ರಕಾಶ್‌ ಎಂಬವರ ವಿರುದ್ಧ 2013ರ ನವೆಂಬರ್‌ 6ರಂದು ಪೊಲೀಸರು ಪೋಕ್ಸೋ ಕಾಯ್ದೆ, ಬಾಲನ್ಯಾಯ ಕಾಯ್ದೆ ಮತ್ತು ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಪಟ್ಟಿ ದಾಖಲಿಸಿದರು.

77 ವರ್ಷ ವಯಸ್ಸಿನ ಅಸಾರಾಂ ಅವರನ್ನು 2013ರ ಸೆಪ್ಟೆಂಬರ್‌ 1ರಂದು ಇಂದೋರ್‌ನಲ್ಲಿ ಬಂಧಿಸಿ ಜೋಧ್‌ಪುರಕ್ಕೆ ಕರೆತರಲಾಯಿತು. 2013ರ ಸೆಪ್ಟೆಂಬರ್‌ 2ರಿಂದೀಚೆಗೆ ಅವರು ನ್ಯಾಯಾಂಗ ವಶದಲ್ಲಿದ್ದಾರೆ.

2013ರ ಆಗಸ್ಟ್‌ 1ರಂದು ಅಪ್ರಾಪ್ತ ವಯಸ್ಸಿನ ಬಾಲಕಿ ಮತ್ತು ಆಕೆಯ ತಂದೆ ದಿಲ್ಲಿ ಪೊಲೀಸ್‌ನ ಐಪಿಎಸ್‌ ಅಧಿಕಾರಿ ಅಜಯ್‌ ಪಾಲ್ ಲಾಂಬಾ ಅವರ ಕಚೇರಿಗೆ ಬಂದು ಸ್ವಯಂಘೋಷಿತ ದೇವಮಾನವದ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ಸಲ್ಲಿಸುತ್ತಾರೆ. ಆಗ ಲಾಂಬಾ ಜೋಧ್‌ಪುರ ಪಶ್ಚಿಮದ ಪೊಲೀಸ್‌ ಉಪ ಆಯುಕ್ತರಾಗಿದ್ದರು.

‘ಮೊದಲಿಗೆ ಆ ಕುಟುಂಬದ ಹೇಳಿಕೆಯನ್ನು ನಾನು ನಂಬಲಿಲ್ಲ. ಬಹಳ ದೊಡ್ಡ ವ್ಯಕ್ತಿಯೊಬ್ಬರ ಹೆಸರು ಕೆಡಿಸಲು ನಡೆಸಿದ ಸಂಚು ಇದಾಗಿರಬಹುದೆ? ಎಂಬ ಸಂದೇಹ ಕಾಡಿತು. ಆದರೆ ನನ್ನ ಗ್ರಹಿಕೆ ತಪ್ಪಾಗಿತ್ತು. ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದ, ಜೋಧ್‌ಪುರದಿಂದ 38 ಕಿ.ಮೀ ದೂರದಲ್ಲಿರುವ ಮನಾಯ್ ಗ್ರಾಮದ ಅಸಾರಾಂ ಆಶ್ರಮದ ಸಂಪೂರ್ಣ ನಕ್ಷೆ ಸಹಿತ ಎಲ್ಲ ವಿವರಗಳನ್ನು ಬಾಲಕಿ ನೀಡಿದಳು. ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡದೆ, ಆ ಕೊಠಡಿಯ ಸಂಪೂರ್ಣ ಚಿತ್ರಣವನ್ನು ಬಾಲಕಿಯೊಬ್ಬಳು ನೀಡಲು ಹೇಗೆ ಸಾಧ್ಯ? ನಮ್ಮ ತನಿಖೆಯ ದಿಕ್ಕನ್ನೇ ಬದಲಿಸಿದ ಸಾಕ್ಷ್ಯಾಧಾರ ಅದಾಗಿತ್ತು’ ಎಂದು ಲಾಂಬಾ ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ ಲಾಂಬಾ ಭ್ರಷ್ಟಾಚಾರ ವಿರೋಧಿ ದಳದಲ್ಲಿ ನಿಯೋಜಿತರಾಗಿದ್ದಾರೆ.

‘ನಂತರ, ಮೀರತ್‌ನ ಒಂದು ಕುಟುಂಬ ಕೂಡ ಇದೇ ರೀತಿ ಮೌಖಿಕ ದೂರು ಸಲ್ಲಿಸಿರುವುದು ಬೆಳಕಿಗೆ ಬಂತು. ಆ ಕುಟುಂಬವನ್ನು ಭೇಟಿ ಮಾಡಿ ಲಿಖಿತ ದೂರು ನೀಡುವಂತೆ ಕೋರಿದಾಗ ಅವರು ಅದಕ್ಕೆ ಒಪ್ಪಲಿಲ್ಲ. ಇದು ತನಿಖೆಯನ್ನು ಮತ್ತೊಂದು ಘಟ್ಟಕ್ಕೆ ತಂದು ನಿಲ್ಲಿಸಿತು’ ಎಂದು ಲಾಂಬಾ ನುಡಿದರು.

ಆಗಸ್ಟ್‌ 31ರಂದು ಪೊಲೀಸರು ಭರ್ಜರಿ ಯಶಸ್ಸು ದಾಖಲಿಸಿದರು. ‘ಅಸಾರಾಂ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಹಾಗಿದ್ದರೂ ಐವರು ಪೊಲೀಸರು ಮತ್ತು ಆರು ಮಂದಿ ಕಮಾಂಡೋಗಳ ತಂಡವೊಂದನ್ನು ಇಂದೋರ್‌ನ ಆಶ್ರಮಕ್ಕೆ ಕಳುಹಿಸಿದೆವು. ಅದೇ ವೇಳೆಗೆ ನಾವು ಜೋಧ್‌ಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಸಾರಾಂ ವಿರುದ್ಧ ತನಿಖೆ ಆರಂಭಿಸಿರುವುದನ್ನು ಬಹಿರಂಗಪಡಿಸಿದೆವು. ಇದರಿಂದ ಇರಸು ಮುರಸಿಗೆ ಒಳಗಾದ ಅಸಾರಾಂ, 2013ರ ಆಗಸ್ಟ್ 31ರಂದು ದಿಢೀರನೆ ಭೋಪಾಲ್‌ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ನಾವು ಮಾಧ್ಯಮದವರ ಜತೆ ಮಾಹಿತಿ ಹಂಚಿಕೊಂಡೆವು. ಮಾಧ್ಯಮದವರು ಅವರನ್ನು ಬೆಂಬತ್ತಿದಾಗ, ನಮ್ಮ ತಂಡ ಅಲ್ಲಿರುವುದರ ಅರಿವಿಲ್ಲದೆ ಅಸಾರಾಂ ತಮ್ಮ ಇಂದೋರ್‌ ಆಶ್ರಮಕ್ಕೆ ಆಗಮಿಸಿದರು’ ಎಂದು ಲಾಂಬಾ ನೆನಪಿಸಿಕೊಂಡರು.

ಅಸಾರಾಂ ಮತ್ತು ಅವರ ಶಿಷ್ಯರು ತಮ್ಮ ಎಲ್ಲ ಆಸ್ತಿಗಳನ್ನೂ ವರ್ಗಾಯಿಸುವುದಾಗಿ ಹೇಳಿ ಪೊಲೀಸರಿಗೆ ಆಮಿಷ ಒಡ್ಡಲು ಪ್ರಯತ್ನಿಸಿದರು. ‘ಬಳಿಕ ನಮಗೆ ಹಣದ ಆಮಿಷದಿಂದ ಹಿಡಿದು ಜೀವ ಬೆದರಿಕೆ ವರೆಗೆ ಎಲ್ಲ ಒತ್ತಡಗಳೂ ಎದುರಾದವು. ಇವೆಲ್ಲದರ ನಡುವೆಯೂ ಅಸಾರಾಂ ಬಗೆಗಿನ ಜನರ ನಂಬಿಕೆ ಬದಲಾಗಲಿಲ್ಲ’ ಎಂದು ಲಾಂಬಾ ತಿಳಿಸಿದರು. ತಮಗೆ ಜೀವ ಬೆದರಿಕೆಯೊಡ್ಡಿ 1,600ಕ್ಕೂ ಹೆಚ್ಚು ಅನಾಮಧೇಯ ಬೆದರಿಕೆ ಪತ್ರಗಳು ಬಂದಿವೆ ಎಂದು ಅವರು ಬಹಿರಂಗಪಡಿಸಿದರು.

Comments are closed.