ರಾಷ್ಟ್ರೀಯ

ರೈಲು ಸೀಟಿಗಾಗಿ ನಡೆದ ಜಗಳಲ್ಲಿ ಜುನೈದ್ ಮೃತಪಟ್ಟಿದ್ದು: ಕೋರ್ಟ್

Pinterest LinkedIn Tumblr


ಚಂಡಿಗಡ: ಇಡೀ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದ ಜುನೈದ್ ಖಾನ್ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಇವರ ಸಾವಿಗೆ ಮತೀಯ ಗಲಭೆ ಕಾರಣ ಎಂಬ ಅಂಶವನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ತಳ್ಳಿಹಾಕಿದೆ.

ಚಲಿಸುತ್ತಿದ್ದ ರೈಲಿನಲ್ಲಿ ಜುನೈದ್ ಖಾನ್ ಇರಿತಕ್ಕೆ ಒಳಗಾಗಿ ಮೃತಪಟ್ಟಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇದು ಯಾವುದೇ ಸಮುದಾಯಕ್ಕೆ ಸಂಬಂಧಿಸಿದ ಪ್ರಕರಣ ಅಲ್ಲ, ರೈಲಿನಲ್ಲಿ ಸೀಟಿಗಾಗಿ ಆದ ಜಗಳ ಕೊಲೆಗೆ ಕಾರಣವಾಗಿದೆ ಎಂದಿರುವ ಕೋರ್ಟ್, ಈ ಪ್ರಕರಣದ ಪ್ರಮುಖ ಆರೋಪಿ ರಾಮೇಶ್ವರ್ ದಾಸ್ ಅವರಿಗೆ ಜಾಮೀನು ನೀಡಿದೆ.

ಈ ಪ್ರಕರಣದಲ್ಲಿ ಯಾವುದೇ ಮತೀಯ ಗಲಭೆ ಸೃಷ್ಟಿಸಲು ಕಾರಣವಾಗುವ ಅಂಶಗಳಾಗಲಿ, ಯೋಜಿತ ಕೊಲೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳಾಗಿ ಲಭಿಸಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ರೈಲಿನಲ್ಲಿ ಸೀಟಿಗಾಗಿ ನಡೆದ ಜಗಳದಲ್ಲಿ ಜುನೈದ್ ಬಲಿಯಾಗಿದ್ದಾನೆ ಎಂಬ ಅಂಶ ಸಾಕ್ಷ್ಯಾಧಾರಗಳಿಂದ ಗೊತ್ತಾಗುತ್ತದೆ ಎಂದಿದೆ ಕೋರ್ಟ್.

ಎಫ್‍ಐಆರ್ ಪ್ರಕಾರ, ರೈಲಿನಲ್ಲಿ ಸೀಟಿಗಾಗಿ ಜುನೈದ್ ಜತೆಗೆ ರಾಮೇಶ್ವರ ದಾಸ್ ಮತ್ತು ನರೇಶ್ ನಡುವೆ ಜಗಳವಾಯಿತು. ಆರೋಪಿಗಳಲ್ಲಿ ಒಬ್ಬರು ಚಾಕುವಿನಿಂದ ಇರಿದ ಕಾರಣ ಜುನೈದ್ ಮೃತಪಟ್ಟರು. ಈ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ರಮೇಶ್, ಚಂದರ್, ಪ್ರದೀಪ್, ಗೌರವ್ ಮತ್ತು ರಾಮೇಶ್ವರ್ ದಾಸ್‌ರನ್ನು ಬಂಧಿಸಿದ್ದರು. ರಾಮೇಶ್ವರ ದಾಸ್‌ರನ್ನು ಹೊರತುಪಡಿಸಿ ಉಳಿದೆಲ್ಲಾ ಆರೋಪಿಗಳಿಗೆ ವಿಚಾರಣಾಧೀನ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಹೆಲ್ತ್ ಇನ್ಸ್‌ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ ರಾಮೇಶ್ವರ್ ದಾಸ್ ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು ಅವರನ್ನು ಜಾಮೀನ ಮೇಲೆ ಬಿಡುಗಡೆ ಮಾಡಲಾಗಿದೆ.

ಜೂನ್ 22, 2017ರಂದು ರೈಲಿನಲ್ಲಿ ಜುನೈದ್ ಖಾನ್ ತನ್ನ ಸಹೋದರರ ಜತೆಗೆ ಬಲ್ಲಾಘರ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈದ್ ಹಬ್ಬಕ್ಕಾಗಿ ಶಾಪಿಂಗ್ ಮಾಡಲು ಇವರೆಲ್ಲಾ ಫರೀದಾಬಾದ್‌ಗೆ ಹೋಗಿ ಹಿಂತಿರುಗುತ್ತಿದ್ದರು. ಸೀಟಿಗಾಗಿ ನಡೆದ ಜಗಳದಲ್ಲಿ ಜುನೈದ್‌ಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಘಟನೆ ಬಳಿಕ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿದ್ದವು. ಇದೊಂದು ಮತೀಯ ಗಲಭೆ ಸೃಷ್ಟಿಸಲು ನಡೆದಂತಹ ಸಂಚು ಎಂದು ಬಿಂಬಿಸಲಾಗಿತ್ತು.

Comments are closed.