ರಾಷ್ಟ್ರೀಯ

ಕನಿಮೋಳಿ ಕರುಣಾನಿಧಿಯ ಅಕ್ರಮ ಸಂಬಂಧದ ಮಗು: ಬಿಜೆಪಿ ಮುಖಂಡನಿಂದ ವಿವಾದಾತ್ಮಕ ಹೇಳಿಕೆ

Pinterest LinkedIn Tumblr


ಚೆನ್ನೈ: ಡಿಎಂಕೆ ರಾಜ್ಯ ಸಭಾ ಸದಸ್ಯೆ ಕನಿಮೋಳಿ ಡಿಎಂಕೆ ವರಿಷ್ಠ ಕರುಣಾನಿಧಿ ಅವರ ಅಕ್ರಮ ಸಂಬಂಧದ ಮಗು ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್‌. ರಾಜಾ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.

ಬಿಜೆಪಿ ಮುಖಂಡನ ಈ ಹೇಳಿಕೆಗೆ ಬಿಜೆಪಿ ಸೇರಿದಂತೆ ನಾನಾ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಬಿಜೆಪಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಹಾದರದ ಮಗು ಎಂಬುದು ಇಲ್ಲ. ಎಲ್ಲ ಮಕ್ಕಳೂ ನ್ಯಾಯಸಮ್ಮತವಾಗಿ ಹುಟ್ಟುವವರೇ ಆಗಿರುತ್ತಾರೆ. ಪ್ರತಿ ಮಕ್ಕಳಿಗೂ ತಂದೆ ಮತ್ತು ತಾಯಿ ಇರುತ್ತಾರೆ ಎಂದು ಕಾಂಗ್ರೆಸ್‌ ಮುಖಂಡ ಚಿದಂಬರಂ ಟ್ವೀಟ್‌ ಮೂಲಕ ಎಚ್‌. ರಾಜಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಉನ್ನತಾಧಿಕಾರಿಗಳ ಲೈಂಗಿಕ ಬಯಕೆ ತೀರಿಸಬೇಕೆಂದು ವಿದ್ಯಾರ್ಥಿನಿಯರ ಮೇಲೆ ಒತ್ತಡ ತಂದಿದ್ದಾರೆ ಎಂಬ ಆರೋಪಗಳನ್ನು ಎದುರಿಸುತ್ತಿರುವ ಮಧುರೈ ಕಾಮರಾಜ್ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ನಿರ್ಮಲಾ ದೇವಿ ಜತೆಗಿನ ಸಂಬಂಧದ ಬಗ್ಗೆ ಪತ್ರಕರ್ತೆ ಪ್ರಶ್ನಿಸಿದ್ದಕ್ಕೆ ಇಂಥ ಪ್ರಶ್ನೆಗಳನ್ನು ಕರುಣಾನಿಧಿಗೆ ಕೇಳುವ ಧೈರ್ಯ ಪತ್ರಕರ್ತರಿಗಿದೆಯೇ ಎಂದು ಟ್ವಿಟರ್‌ನಲ್ಲಿ ಎಚ್‌. ರಾಜಾ ಪ್ರಶ್ನಿಸಿದ್ದರು.

ಇದು ಕೇವಲ ಪ್ರಚಾರದ ಗಿಮಿಕ್‌. ಇಂಥ ಬೇಜವಾಬ್ದಾರಿಯುತ ಹೇಳಿಕೆಗಳ ಮೂಲಕ ರಾಜ್ಯದಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಎಚ್‌. ರಾಜಾ ಅವರನ್ನು ಗೂಂಡಾ ಕಾಯಿದೆಯಡಿ ಬಂಧಿಸಬೇಕು ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಮುತ್ತರಸನ್‌ ಹೇಳಿದ್ದಾರೆ.

ರಾಜಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿರುವ ಮಹಿಳೆಯರನ್ನು ನಾನಾ ರೀತಿಗಳಲ್ಲಿ ಹೆದರಿಸಲು ಮುಂದಾಗುತ್ತಾರೆ. ಈ ಮಾರ್ಗವೂ ಒಂದು. ಆದರೆ ಅದೆಲ್ಲ ಈಗ ನಡೆಯುವುದಿಲ್ಲ ಎಂದು ಕನಿಮೋಳಿ ಹೇಳಿದ್ದಾರೆ.

ಸಾರ್ವಜನಿಕ ಜೀವನದಲ್ಲಿ ಮಹಿಳೆಯ ವೈಯಕ್ತಿಕ ಜೀವನದ ಬಗ್ಗೆ ಲಘುವಾಗಿ ಮಾತನಾಡಲು ಅದೆಷ್ಟು ಧೈರ್ಯ , ಇದನ್ನು ಖಂಡಿಸುತ್ತೇವೆ. ಅಂಥ ಹೇಳಿಕೆಗಳ ಮೂಲಕ ಗಲಭೆಗೆ ಕಾರಣರಾಗುವವರನ್ನು ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ತಮಿಳ್‌ ಸಲೈ ಸೌಂದರಾಜನ್‌ ಹೇಳಿದ್ದಾರೆ.

Comments are closed.