ರಾಷ್ಟ್ರೀಯ

ಬುಲೆಟ್‌ ರೈಲು: ಅಹಮದಾಬಾದ್‌-ಮುಂಬಯಿ ನಡುವೆ ದಿನಕ್ಕೆ 70 ಟ್ರಿಪ್‌

Pinterest LinkedIn Tumblr


ಅಹಮದಾಬಾದ್‌: ರಾಷ್ಟ್ರೀಯ ಹೈಸ್ಪೀಡ್‌ ರೈಲ್ವೇ ಕಾರ್ಪೋರೇಶನ್‌ ಲಿಮಿಟೆಡ್‌ (NHSRC) ಬುಲೆಟ್‌ ರೈಲು ನಿಲ್ದಾಣಕ್ಕಾಗಿ ಸಾಬರ್ಮತಿ ಹಳೆಯ ಮತ್ತು ಹೊಸ ನಿಲ್ದಾಣಗಳ ನಡುವಣ ಭೂಮಿಯ ಸ್ವಾಧೀನ ಪ್ರಕ್ರಿಯೆಗಳನ್ನು ಆರಂಭಿಸಿದೆ.

ಬುಲೆಟ್‌ ರೈಲು ನಿಲ್ದಾಣವು ಈಗಿನ ಹಳೆಯ ಮತ್ತು ಹೊಸ ಸಾಬರ್ಮತಿ ನಿಲ್ದಾಣಗಳ ನಡುವೆ ಎತ್ತರದಲ್ಲಿ ಇರಲಿದೆ.

ಬುಲೆಟ್‌ ಟ್ರೈನ್‌ ಪ್ರಯಾಣ ಸಾಬರ್ಮತಿ ನಿಲ್ದಾಣದಿಂದಲೇ ಆರಂಭವಾಗಿ ಅಲ್ಲೇ ಕೊನೆಗೊಳ್ಳುತ್ತದೆ. ಮುಂಬಯಿ (ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌) ಮತ್ತು ಸಾಬರ್ಮತಿ ನಡುವಣ ವೇಗದ ರೈಲು ಪ್ರಯಾಣದ ಅವಧಿ 2 ಗಂಟೆ 07 ನಿಮಿಷ ಆಗಲಿದೆ. ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ಇದ್ದರೆ ಪ್ರಯಾಣದ ಅವಧಿ 2.58 ಗಂಟೆ ಆಗಲಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟಣೆಯ ಅವಧಿಯಲ್ಲಿ- ಬೆಳಗ್ಗೆ 7ರಿಂದ 10 ಗಂಟೆ ಹಾಗೂ ಸಂಜೆ 5ರಿಂದ 7 ಗಂಟೆ ಅವಧಿಯಲ್ಲಿ ಪ್ರತಿ ಗಂಟೆಗೆ ಮೂರು ರೈಲುಗಳ ಓಡಾಟ (ಪ್ರತಿ 20 ನಿಮಿಷಗಳಿಗೊಂದರಂತೆ) ಇರಲಿದೆ. ದಟ್ಟಣೆ ಇಲ್ಲದ ಅವಧಿಯಲ್ಲಿ ಗಂಟೆಗೆ ಎರಡು ರೈಲುಗಳು ಓಡಾಟ ನಡೆಸಲಿವೆ. ಆರಂಭದಲ್ಲಿ ರೈಲಿನಲ್ಲಿ 750 ಮಂದಿ ಪ್ರಯಾಣಿಸಬಹುದು. ಕ್ರಮೇಣ ಪ್ರಯಾಣಿಕರ ಸಾಮರ್ಥ್ಯವನ್ನು 1,250ಕ್ಕೆ ಹೆಚ್ಚಳವಾಗಲಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಧನಂಜಯ್ ಕುಮಾರ್ ತಿಳಿಸಿದರು.

ಬುಲೆಟ್‌ ರೈಲಿನ ವಿನ್ಯಾಸ ಗಂಟೆಗೆ 350 ಕಿ.ಮೀ ವೇಗಕ್ಕೆ ಸೂಕ್ತವಾಗಿರಲಿದ್ದು, ಗರಿಷ್ಠ 320 ಕಿ.ಮೀ ವೇಗದಲ್ಲಿ ಓಡಾಟ ನಡೆಸಲಿದೆ.

ಪ್ರಸ್ತುತ ಈ ಮಾರ್ಗದಲ್ಲಿ ಓಡುವ ರೈಲು ಈ ದೂರವನ್ನು ಕ್ರಮಿಸಲು ಸುಮಾರು 7 ಗಂಟೆ ತೆಗೆದುಕೊಳ್ಳುತ್ತದೆ. ವಿಮಾನ ಪ್ರಯಾಣಕ್ಕೆ ಒಂದು ಗಂಟೆ ಬೇಕಾಗುತ್ತದೆ.

Comments are closed.