ರಾಷ್ಟ್ರೀಯ

ಕರ್ನಾಟಕ ಚುನಾವಣೆಯ ಆಯೋಗ ದಿನಾಂಕ ಘೋಷಣೆ ಮಾಡುವ ಮುನ್ನವೇ ಅಮಿತ್ ಮಾಳವೀಯಾಗೆ ಗೊತ್ತಾಗಿದ್ದು ಹೇಗೆ ?

Pinterest LinkedIn Tumblr

ನವದೆಹಲಿ: ಮಂಗಳವಾರ ಬೆಳಗ್ಗೆ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಿದ್ದರು. ಆದರೆ ರಾವತ್ ಅವರು ಘೋಷಿಸುವುದಕ್ಕಿಂತ ಮುನ್ನವೇ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕವನ್ನು ಟ್ವೀಟ್ ಮಾಡಿದ್ದಾರೆ!

ಮುಖ್ಯ ಚುನಾವಣಾ ಆಯುಕ್ತರು ದಿನಾಂಕವನ್ನು ಘೋಷಿಸುವ ಮುನ್ನವೇ ಅಮಿತ್ ಮಾಳವೀಯ ಅವರಿಗೆ ಇದು ಹೇಗೆ ಗೊತ್ತಾಯಿತು ಎಂದು ನೆಟಿಜನ್‍ಗಳು ಪ್ರಶ್ನಿಸಿದ್ದಾರೆ.

ಮಾಳವೀಯ ಟ್ವೀಟ್‍ನಲ್ಲಿ ಏನಿದೆ?

ಕರ್ನಾಟಕದಲ್ಲಿ ಮೇ 12ರಂದು ಮತದಾನ. ಮೇ 18ರಂದು ಮತ ಎಣಿಕೆ ಎಂದು ಟ್ವೀಟ್ ಮಾಡಿದ್ದರು. ಟ್ವೀಟ್ ಮಾಡಿದ ಸಮಯ ಬೆಳಗ್ಗೆ 11.08.

ಈ ಹೊತ್ತಿಗೆ ರಾವತ್ ಅವರು ದಿನಾಂಕ ಘೋಷಣೆ ಮಾಡಿರಲಿಲ್ಲ. ಆದರೆ ಮಾಹಿತಿ ಮಾಳವೀಯ ಅವರಿಗೆ ಸಿಕ್ಕಿದ್ದು ಹೇಗೆ ಎಂದು ಕೆಲವು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ.

ಈ ಟ್ವೀಟ್‌ಗಳಿಗೆ ಉತ್ತರಿಸಿದ ಮಾಳವೀಯ ಟೈಮ್ಸ್ ನೌ ನೋಡಿ ಎಂದಿದ್ದಾರೆ. ಅಂದರೆ ಟೈಮ್ಸ್ ನೌ ಸುದ್ದಿ ವಾಹಿನಿ ನೋಡಿ ತಾನು ಟ್ವೀಟ್ ಮಾಡಿದ್ದೇನೆ ಎಂದು ಇದರರ್ಥ.

ದಿನಾಂಕ ಘೋಷಣೆ ಆಗುವ ಮುನ್ನವೇ ಟ್ವೀಟ್ ಮಾಡಿದ್ದಕ್ಕೆ ಗುಡುಗಿದ ಟ್ವಿಟ್ಟಿಗರು ಮಾಳವೀಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮಾಳವೀಯ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಟ್ವೀಟ್ ಡಿಲೀಟ್ ಮಾಡಿದ್ದು ಯಾಕೆ?
ಒಂದು ವೇಳೆ ಮಾಳವೀಯ ಅವರು ಹೇಳುವಂತೆ ತಾನು ಸುದ್ದಿ ವಾಹಿನಿ ನೋಡಿ ಟ್ವೀಟ್ ಮಾಡಿದ್ದು ಎಂದಾದರೆ ಆ ಟ್ವೀಟ್ ಡಿಲೀಟ್ ಮಾಡುವ ಅಗತ್ಯವೇನಿತ್ತು? ಎಂಬ ಪ್ರಶ್ನೆಯನ್ನು ನೆಟಿಜನ್‍ಗಳು ಕೇಳಿದ್ದಾರೆ.

ಮಾಳವೀಯ ಅವರು ಮತ ಎಣಿಕೆ ದಿನಾಂಕ ಮೇ.18 ಎಂದು ತಪ್ಪಾಗಿ ಟ್ವೀಟ್ ಮಾಡಿದ್ದರು ಅದಕ್ಕಾಗಿ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ಮಾಳವೀಯ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಹಾಗಾದರೆ ಟೈಮ್ಸ್ ನೌ ದಿನಾಂಕ ಘೋಷಿಸುವ ಮುನ್ನವೇ ಬ್ರೇಕಿಂಗ್ ನ್ಯೂಸ್ ಮಾಡಿತ್ತೇ?

ಟೈಮ್ಸ್ ನೌ ಒಂದು ಟ್ವೀಟ್ ಮಾಡಿತ್ತು. ಅದರಲ್ಲಿ ಮತ ಎಣಿಕೆ ದಿನಾಂಕ ಮೇ.18 ಎಂದಿತ್ತು. ಆಮೇಲೆ ಆ ಟ್ವೀಟ್ ಡಿಲೀಟ್ ಮಾಡಿ ಮತ ಎಣಿಕೆ ಮೇ.15 ಎಂದು ಟ್ವೀಟಿಸಿತ್ತು. ಇಲ್ಲಿ ಟೈಮ್ಸ್ ನೌ ಟ್ವೀಟ್ ಮಾಡಿದ ಸಮಯ ಬೆಳಗ್ಗೆ 11.14 ಮತ್ತು 11.26. ಅಂದರೆ ಸುದ್ದಿಗೋಷ್ಠಿಯಲ್ಲಿ ರಾವತ್ ಅವರು ದಿನಾಂಕ ಘೋಷಣೆ ಮಾಡಿದ್ದು ಇಷ್ಟು ಹೊತ್ತಿಗೆ. ಹಾಗಾದರೆ ಇದಕ್ಕಿಂತ ಮುನ್ನ ಮಾಳವೀಯ ಅವರಿಗೆ ಈ ಮಾಹಿತಿ ಸಿಕ್ಕಿದ್ದು ಹೇಗೆ? ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

Comments are closed.