ರಾಷ್ಟ್ರೀಯ

ರೇಪ್‌ ಸಂತ್ರಸ್ತಳನ್ನು ಮದುವೆಯಾಗಲು ಬಂದು ಲಾಕಪ್‌ ಸೇರಿದ

Pinterest LinkedIn Tumblr


ಹೊಸದಿಲ್ಲಿ: ಅತ್ಯಾಚಾರ ಸಂತ್ರಸ್ತಳನ್ನು ಮದುವೆಯಾಗುವ ಮೂಲಕ ಹೊಸ ಜೀವನ ಕಂಡುಕೊಳ್ಳಲು ಬಂದ ಅತ್ಯಾಚಾರಿಯನ್ನು ದಿಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. 2017ರಲ್ಲಿ ಆರೋಪಿ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಈ ಕುರಿತು ಜನವರಿಯಲ್ಲಿ ದೂರು ದಾಖಲಿಸಲಾಗಿತ್ತು. ಇದೀಗ ಪೋಸ್ಕೋ ಕಾಯ್ದೆಯಡಿ ಆತನನ್ನು ಬಂಧಿಸಲಾಗಿದೆ.

ಬಿಹಾರದ ಕಿಶಾನ್‌ಗಂಜ್‌ ಮೂಲದ 21 ವರ್ಷದ ಮುನ್ನು ಬಂಧನಕ್ಕೆ ಒಳಗಾದ ಯುವಕ.

ತನ್ನ ವಿರುದ್ಧ ದೂರು ದಾಖಲಾಗಿದೆ ಎಂಬುದನ್ನು ತಿಳಿದ ಆರೋಪಿ ದಿಲ್ಲಿ ಬಿಟ್ಟು ನೇಪಾಳಕ್ಕೆ ಪರಾರಿಯಾಗಿದ್ದ. ನೇಪಾಳದಿಂದಲೇ ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ವಿವಾಹವಾಗುವುದಾಗಿ ತಿಳಿಸಿದ್ದ. ಈ ಕುರಿತು ಸಂತ್ರಸ್ತೆಯ ತಾಯಿ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಆತನ ಮದುವೆ ಪ್ರೊಪೋಸಲ್‌ಅನ್ನು ಒಪ್ಪಿಕೊಳ್ಳುವಂತೆ ಬಾಲಕಿಯನ್ನು ಮನವೊಲಿಸಿದರು. ತನ್ನಿಂದ ಅತ್ಯಾಚಾರಕ್ಕೆ ಒಳಗಾದ ಹುಡುಗಿಯನ್ನೇ ಮದುವೆಯಾಗಿ ಹೊಸ ಜೀವನ ನಡೆಸುವ ಕನಸು ಹೊತ್ತು ದಿಲ್ಲಿಗೆ ವಾಪಾಸಾಗಿದ್ದ. ಇದೇ ಸಂದರ್ಭಕ್ಕಾಗಿ ಕಾದಿದ್ದ ಪೊಲೀಸರು ತಕ್ಷಣ ಬಂಧಿಸಿದ್ದಾರೆ.

ನೆರೆ ಮನೆಯಲ್ಲಿ ನೆಲೆಸಿದ್ದ ಮುನ್ನು ಏಪ್ರಿಲ್‌ನಲ್ಲಿ ಒಬ್ಬೊಂಟಿಯಾಗಿದ್ದಾಗ ಮನೆ ಪ್ರವೇಶಿಸಿ ಅತ್ಯಾಚಾರ ಎಸಗಿದ್ದ. ಯಾರಿಗೂ ವಿಷಯ ತಿಳಿಸಬಾರದು ಎಂದು ಬೆದರಿಕೆಯನ್ನು ಒಡ್ಡಿದ್ದ. ಆತನ ಬೆದರಿಕೆಗೆ ಮಣಿದ ಹುಡುಗಿ ಅತ್ಯಾಚಾರದ ಬಗ್ಗೆ ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಆದರೆ ಸ್ವಲ್ಪ ದಿನಗಳ ನಂತರ ಆಕೆಯ ಹೆಸರನ್ನು ಕೆಡಿಸಲು ಆರಂಭಿಸಿದ್ದ.

ಅತ್ಯಾಚಾರದ ಸುದ್ದಿ ಎಲ್ಲೆಡೆ ಹರಡಿತ್ತು. ಶಾಲೆಗೆ ಹೋಗುತ್ತಿದ್ದ ಆಕೆಯ ತಂಗಿಗೂ ವಿಚಾರ ಗೊತ್ತಾಗುವಂತಾಗಿತ್ತು. ಇದರಿಂದ ಸಂತ್ರಸ್ತೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಕೊನೆಗೆ ಯುವಕನ ಕಿರುಕುಳ ತಾಳಲಾರದೆ ಜನವರಿಯಲ್ಲಿ ದೂರು ದಾಖಲಿಸಿದ್ದಳು.

Comments are closed.