ರಾಷ್ಟ್ರೀಯ

ತಮಿಳುನಾಡು ಕುರಂಕಣಿ ಬೆಟ್ಟದಲ್ಲಿ ಭಾರೀ ಕಾಡ್ಗಿಚ್ಚು; 9 ಮಂದಿ ಸಜೀವ ದಹನ, ಹಲವರ ರಕ್ಷಣೆ

Pinterest LinkedIn Tumblr

ಚೆನ್ನೈ: ತಮಿಳುನಾಡು ರಾಜ್ಯದ ಥೇಣಿ ಜಿಲ್ಲೆಯ ಕುರಂಕಣಿ ಬೆಟ್ಟದಲ್ಲಿ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಚಾರಣಕ್ಕೆ ತೆರಳಿದ್ದ 9 ಮಂದಿ ವಿದ್ಯಾರ್ಥಿಗಳು ಸಜೀವ ದಹನಗೊಂಡಿದ್ದು, ಹಲವರನ್ನು ರಕ್ಷಣೆ ಮಾಡಲಾಗಿದೆ ಎಂದು ಸೋಮವಾರ ತಿಳಿದುಬಂದಿದೆ.

ಕೇರಳದ ಸೂರ್ಯನೆಲ್ಲಿ ಮೂಲದ 40 ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಕಾಡ್ಗಿಚ್ಚಿನ ಪರಿಣಾಮ ಇದರಲ್ಲಿ 9 ಮಂದಿ ಸಜೀವ ದಹನಗೊಂಡಿದ್ದಾರೆಂದು ತಿಳಿದುಬಂದಿದೆ. ಈ ವರೆಗೂ 15 ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ವಿದ್ಯಾರ್ಥಿಗಳ ರಕ್ಷಣಾ ಪ್ರಕ್ರಿಯೆಯಲ್ಲಿ ಭಾರತೀಯ ವಾಯುಪಡೆ ಭಾಗಿಯಾಗಿದ್ದು, ವೈಮಾನಿಕ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

ಅರಣ್ಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪ್ರಾಣಾಪಾಯದಲ್ಲಿ ಸಿಲುಕಿದ್ದ ಹಲವರನ್ನು ರಕ್ಷಣಾ ಪಡೆಗಳು ರಕ್ಷಣೆ ಮಾಡಿದ್ದು, ಸುಟ್ಟ ಗಾಯಗಳಿಂದ ಬಳಲುತ್ತಿದ್ದ 10 ಮಂದಿಯನ್ನು ಮದುರೈ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

8 ಮಂದಿಯನ್ನು ಮದುರೈ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲು ಮಾಡಿದ್ದರೆ, ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. 10 ಮಂದಿಯ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ರಾಜ್ಯ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಅವರು ಗಾಯಾಳುಗಳು ದಾಖಲಾಗಿರುವ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದಾರೆಂದು ಮದುರೈ ಜಿಲ್ಲಾಧಿಕಾರಿ ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ವಾಯುಪಡೆಗಳು ಬೆಂಕಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಅರಣ್ಯಕ್ಕೆ ರಾಸಾಯನಿಕ ಪುಡಿ ಹಾಕುತ್ತಿದ್ದಾರೆಂದು ವರದಿಗಳು ತಿಳಿಸಿವೆ.

Comments are closed.