
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಮೂಲದ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ವಿಶೇಷ ತನಿಖಾ ತಂಡಕ್ಕೆ(ಎಸ್ಐಟಿ) ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ.
ಎಸ್‌ಐಟಿ ತಂಡದ ವಶದಲ್ಲಿರುವ ಮದ್ದೂರಿನ ಹೊಟ್ಟೆ ಮಂಜ, ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ.
ಕಳೆದ ಮಾರ್ಚ್ 9ರಂದು ನವೀನ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರು ಪರೀಕ್ಷೆಗೊಳಪಡಿಸಲು ಎಸ್ಐಟಿ ನ್ಯಾಯಾಲಯದ ಅನುಮತಿ ಕೋರಿತ್ತು. ಇದಕ್ಕೆ ಇಂದು ನ್ಯಾಯಾಲಯ ಒಪ್ಪಿಗೆ ಸೂಚಿಸಿದ್ದು ಯಾವಾಗ ಪರೀಕ್ಷೆಗೊಳಪಡಿಸುವುದು ಎಂಬುದು ಮಾತ್ರ ನಿರ್ಧಾರವಾಗಿಲ್ಲ. ಇಂದು ಬೆಂಗಳೂರಿನ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರುಪಡಿಸಿದ ಸಂದರ್ಭದಲ್ಲಿ ಆರೋಪಿಯನ್ನು ಮಂಪರು ಪರೀಕ್ಷೆಗೊಳಪಡಿಸಿದರೆ ಸತ್ಯ ಹೊರಬರಲಿದೆ ಎಂದು ಎಸ್ ಐಟಿ ತಂಡದ ಅಧಿಕಾರಿಗಳು ಕೇಳಿಕೊಂಡ ಹಿನ್ನೆಲೆಯಲ್ಲಿ ಕೋರ್ಟ್ ಅಸ್ತು ಎಂದಿದೆ.
ನವೀನ್ ನನ್ನು ಅಹಮದಾಬಾದ್ ಮತ್ತು ಹೈದರಾಬಾದ್ ಗಳಲ್ಲಿ ಮಂಪರು ಪರೀಕ್ಷೆಗೊಳಪಡಿಸುವ ಸಾಧ್ಯತೆಯಿದೆ. ಕಳೆದ ಫೆ.24ರಂದು ಹೊಟ್ಟೆ ಮಂಜನನ್ನು ಮದ್ದೂರಿನ ಬಳಿ ಎಸ್.ಐ.ಟಿ ತಂಡದಿಂದ ಬಂಧಿಸಲಾಗಿತ್ತು.
Comments are closed.