ರಾಷ್ಟ್ರೀಯ

ಪಿಎನ್​ಬಿ ನಂತರ ಟಿಡಿಎಸ್ ದೋಖಾ

Pinterest LinkedIn Tumblr


ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಂಚನೆ ಪ್ರಕರಣ ದೇಶಾದ್ಯಂತ ತಲ್ಲಣ ಮೂಡಿಸಿರುವ ಬೆನ್ನಲ್ಲೇ 3220 ಕೋಟಿ ರೂ. ಮೊತ್ತದ ಮತ್ತೊಂದು ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನೌಕರರ ಸಂಬಳದಿಂದ ಕಡಿತ ಮಾಡಿದ ಟಿಡಿಎಸ್ ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ಸಂದಾಯ ಮಾಡದೆ ಸ್ವಂತಕ್ಕೆ ಬಳಸಿಕೊಂಡಿದ್ದ 447ಕ್ಕೂ ಹೆಚ್ಚು ಕಂಪನಿಗಳು 2017ರ ಏಪ್ರಿಲ್​ನಿಂದ 2018ರ ಮಾರ್ಚ್​ವರೆಗೆ ಎಸಗಿರುವ ಅಕ್ರಮವನ್ನು ಐಟಿ ಇಲಾಖೆ ಪತ್ತೆ ಮಾಡಿದೆ. ಐಟಿ ಇಲಾಖೆಯ ಟಿಡಿಎಸ್ ವಿಭಾಗ ವಂಚನೆ ಸಂಬಂಧಿತ ಕಂಪನಿಗಳಿಗೆ ಹಲವು ಬಾರಿ ನೋಟಿಸ್ ಜಾರಿಗೊಳಿಸಿದ್ದರೂ ಫಲಕಾಣದ ಹಿನ್ನೆಲೆಯಲ್ಲಿ ಇದೀಗ ಸದರಿ ಕಂಪನಿಗಳ ವಿರುದ್ಧ ತೆರಿಗೆವಂಚನೆ ಪ್ರಕರಣ ದಾಖಲಿಸಿಕೊಂಡಿದೆ.

ತೆರಿಗೆ ವಸೂಲಿಗೆ ಕ್ರಮ: ಟಿಡಿಎಸ್ ವಂಚಿಸಿದ ಕಂಪನಿಗಳ ಬ್ಯಾಂಕ್ ಖಾತೆ, ಸ್ಥಿರ,ಚರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಇಲಾಖೆ ಮುಂದಾಗಿದೆ. ಬಹುತೇಕ ಕಂಪನಿಗಳು ಉದ್ಯೋಗಿಗಳ ವೇತನದಿಂದ ಕಡಿತಗೊಳಿಸಿದ ಶೇಕಡ 50 ಟಿಡಿಎಸ್ ಹಣವನ್ನು ಸರ್ಕಾರಕ್ಕೆ ಜಮೆ ಮಾಡಿವೆ.

ವಂಚಕರು ಯಾರು?

ಗರಿಷ್ಠ ತೆರಿಗೆ ವಂಚನೆ ಎಸಗಿರುವುದು ಒಂದು ರಿಯಲ್ ಎಸ್ಟೇಟ್ ಕಂಪನಿಯ ಮಾಲೀಕ. ಆ ಬಿಲ್ಡರ್ ತನ್ನ ಉದ್ಯೋಗಿಗಳ ವೇತನದಿಂದ 100 ಕೋಟಿ ರೂಪಾಯಿ ಟಿಡಿಎಸ್ ಕಡಿತಗೊಳಿಸಿದ್ದು, ಅದನ್ನು ಪುನಃ ವ್ಯಾಪಾರಕ್ಕೆ ಬಳಸಿಕೊಂಡಿರುವುದು ಪತ್ತೆಯಾಗಿದೆ. ಆತ ಪ್ರಭಾವಿಯಾಗಿದ್ದು ರಾಜಕೀಯವಾಗಿಯೂ ಹಿಡಿತ ಹೊಂದಿರುವ ವ್ಯಕ್ತಿ ಎಂದು ಮೂಲಗಳು ತಿಳಿಸಿವೆ. ಇನ್ನುಳಿದಂತೆ, ಮೂಲಸೌಕರ್ಯ ಕಂಪನಿಯೊಂದು ಬಂದರು ಅಭಿವೃದ್ಧಿ ಕಾಮಗಾರಿಯ ಹಣದ ಟಿಡಿಎಸ್ 14 ಕೋಟಿ ರೂಪಾಯಿಯನ್ನು ಬೇರೆ ಕಡೆ ವರ್ಗಾಯಿಸಿದೆ. ಐಟಿ ಸೊಲ್ಯುಷನ್ ಒದಗಿಸುವ ಬಹುರಾಷ್ಟ್ರೀಯ ಕಂಪನಿಯೊಂದು 11 ಕೋಟಿ ರೂಪಾಯಿ ವಂಚಿಸಿದೆ. ಸಿನಿಮಾ ತಯಾರಕ ಸಂಸ್ಥೆಗಳು, ಮೂಲಸೌಕರ್ಯ ಸಂಸ್ಥೆ, ನವೋದ್ಯಮಗಳು ಕೂಡ ಈ ಪಟ್ಟಿಯಲ್ಲಿವೆ.

ಶಿಕ್ಷೆ ಏನು?

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 276 ಬಿ ಪ್ರಕಾರ ಮೊದಲು ವಿಚಾರಣೆ ನಡೆಸಲಾಗುತ್ತದೆ. ತೆರಿಗೆ ವಂಚನೆಗೆ ಕನಿಷ್ಠ ಮೂರು ತಿಂಗಳದಿಂದ ಗರಿಷ್ಠ ಏಳು ವರ್ಷಗಳ ಸಜೆ ಹಾಗೂ ದಂಡ ವಿಧಿಸುವುದಕ್ಕೆ ಅವಕಾಶವಿದೆ. ಈ ಪ್ರಕರಣದಲ್ಲಿ ತೆರಿಗೆ ವಂಚಕರ ವಿರುದ್ಧ ಆದಾಯ ತೆರಿಗೆ ಕಾಯ್ದೆ ಹೊರತಾಗಿ, ಭಾರತೀಯ ದಂಡ ಸಂಹಿತೆಯ ಪ್ರಕಾರ ವಂಚನೆ, ಉದ್ಯೋಗಿಗಳಿಗೆ ವಿಶ್ವಾಸ ವಂಚನೆಯ ಆರೋಪಗಳನ್ನೂ ಹೊರಿಸಲಾಗಿದೆ.

ನೌಕರರ ಮೇಲೇನು ಪರಿಣಾಮ?:

ಐಟಿ ರಿಟರ್ನ್ಸ್ ಸಲ್ಲಿಸುವಲ್ಲಿ ಟಿಡಿಎಸ್ ಸಹಕಾರಿಯಾಗಿದ್ದು, ಒಂದೊಮ್ಮೆ ಟಿಡಿಎಸ್ ಜಮೆ ಆಗದೇ ಇದ್ದಲ್ಲಿ ಉದ್ಯೋಗಿ ಐಟಿ ರಿಟರ್ನ್ಸ್ ಸಲ್ಲಿಸಿದಾಗ ಲೆಕ್ಕ ಹೊಂದಾಣಿಕೆಯಾಗದು.
ಆದಾಯ ತೆರಿಗೆ ಇಲಾಖೆ ವೆಬ್​ಸೈಟ್​ನಲ್ಲಿ ನೀವು ಇನ್ನೂ ತೆರಿಗೆ ಪಾವತಿಸಿಲ್ಲ ಎಂಬ ಮಾಹಿತಿಯನ್ನು ಉದ್ಯೋಗಿಗಳು ಕಾಣುತ್ತಾರೆ.
ತೆರಿಗೆ ಪಾವತಿಸಿಲ್ಲ ಎಂದರೆ ಖಟ್ಲೆ ಆರಂಭ ಎಂದೇ ಅರ್ಥ. ವ್ಯಾಜ್ಯ ಬೇಡ ಎಂದಾದಲ್ಲಿ ತೆರಿಗೆಯನ್ನು ಸ್ವತಃ ಮತ್ತೊಮ್ಮೆ ಭರಿಸಬೇಕಾಗುತ್ತದೆ.
ತೆರಿಗೆ ಹೊಂದಾಣಿಕೆಯಾಗದೇ ಇದ್ದಾಗ ಅದನ್ನು ನಿರ್ಲಕ್ಷಿಸಿದರೆ ಮುಂದೆ ತೊಂದರೆ ತಪ್ಪಿದ್ದಲ್ಲ.
ಎಸ್​ಎಂಎಸ್ ಅಲರ್ಟ್:
ಟಿಡಿಎಸ್ ಕುರಿತಂತೆ ಮಾಹಿತಿ ಒದಗಿಸಲು ಕೇಂದ್ರ ಸರ್ಕಾರ 2016ರ ಅ.25ರಂದು ತೆರಿಗೆದಾರರಿಗೆ ಎಸ್​ಎಂಎಸ್ ಅಲರ್ಟ್ ಸೇವೆಯನ್ನು ಆರಂಭಿಸಿದೆ.
ಪ್ರತಿ ತ್ರೖೆಮಾಸಿಕದಲ್ಲಿ ಟಿಡಿಎಸ್ ಸಂಗ್ರಹಿಸಿದ ಕುರಿತು ಆಯಾ ಉದ್ಯೋಗಿಗೆ ಎಸ್​ಎಂಎಸ್ ಅಲರ್ಟ್ ರವಾನೆಯಾಗುತ್ತದೆ.
ಹಣಕಾಸು ವರ್ಷದ ಕೊನೆಗೆ ವೇತನ ಚೀಟಿ ಮತ್ತು ಎಸ್​ಎಂಎಸ್ ಜತೆಗೆ ಹೊಂದಾಣಿಕೆ ಇದೆಯೇ ಎಂಬುದನ್ನು ಪರಿಶೀಲಿಸಬೇಕು.
ಒಂದೊಮ್ಮೆ ಸರಿ ಇಲ್ಲದೇ ಇದ್ದಲ್ಲಿ, ಕೂಡಲೇ ಆದಾಯ ತೆರಿಗೆ ಇಲಾಖೆಯನ್ನು ಸಂರ್ಪಸಿ ಲೋಪದೋಷವನ್ನು ಸರಿಪಡಿಸಿಕೊಳ್ಳಬೇಕು.

ಕಂಪನಿಗಳೇನು ಮಾಡಬೇಕು?:

ಉದ್ಯೋಗದಾತ ಕಂಪನಿಗಳು ಉದ್ಯೋಗಿಗಳ ವೇತನದಲ್ಲಿ ಹಿಡಿದಿಟ್ಟ ಟಿಡಿಎಸ್ ಹಣವನ್ನು ಆಯಾ ತಿಂಗಳ ಕೊನೆಯಲ್ಲಿ ಏಳು ದಿನಗಳ ಒಳಗಾಗಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಜಮೆ ಮಾಡತಕ್ಕದ್ದು.
ಉದಾಹರಣೆಗೆ ಹೇಳುವುದಾದರೆ ಮಾರ್ಚ್ ತಿಂಗಳ ವೇತನದಲ್ಲಿ ಹಿಡಿದಿಟ್ಟ ಹಣವನ್ನು ಏಪ್ರಿಲ್ 30ರೊಳಗೆ ಪಾವತಿಸಬೇಕು.
ಗುತ್ತಿಗೆದಾರರ ಪಾವತಿಯನ್ನು ಮೂರು ತಿಂಗಳಿಗೊಮ್ಮೆ ಮಾಡುವುದಕ್ಕೆ ಅವಕಾಶವಿದೆ.

ಟಿಡಿಎಸ್ ಪಾವತಿ ಸುಲಭ:

ಕಂಪನಿಗಳು ಟಿಡಿಎಸ್ ಹಣವನ್ನು ಇ-ಪಾವತಿ ಮೂಲಕ ಜಮೆ ಮಾಡಬಹುದು.
ನಿಗದಿತ ಬ್ಯಾಂಕ್ ಶಾಖೆ ಮೂಲಕವೂ ಜಮೆ ಮಾಡಬಹುದು.

ಟಿಡಿಎಸ್ ಎಂದರೆ…

ಮೂಲದಲ್ಲೇ ತೆರಿಗೆ ಕಡಿತ: ಉದ್ಯೋಗಿಗಳಿಗೆ ವೇತನ ನೀಡುವಾಗಲೇ ಅಥವಾ ಗುತ್ತಿಗೆದಾರರಿಗೆ ಹಣ ನೀಡುವಾಗಲೇ ತೆರಿಗೆ ಹಣವನ್ನು ಕಡಿತಗೊಳಿಸಿ(ಮೂಲದಲ್ಲೇ ತೆರಿಗೆ ಕಡಿತಗೊಳಿಸುವುದು) ನೀಡಲಾಗುತ್ತದೆ. ಈ ಪ್ರಕ್ರಿಯೆಗೆ ಟಿಡಿಎಸ್ ಅಥವಾ ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್ ಎನ್ನುತ್ತಾರೆ.
ಉದ್ಯೋಗಿಗಳಿಂದ ನಂತರ ತೆರಿಗೆ ಸಂಗ್ರಹಿಸುವ ಬದಲು, ಉದ್ಯೋಗದಾತರ ಮೂಲಕವೇ ತೆರಿಗೆ ಸಂಗ್ರಹಿಸುವುದು ಟಿಡಿಎಸ್ ವ್ಯವಸ್ಥೆಯ ಉದ್ದೇಶ.
ಟಿಡಿಎಸ್ ಬಗ್ಗೆ ಉದ್ಯೋಗಿಗಳು ಸಂಕಟ ಪಡಬೇಕಾದ್ದಿಲ್ಲ. ಪ್ರತಿವರ್ಷ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವಾಗ ಇದರ ವಿವರ ಸಲ್ಲಿಸಿ, ಹೆಚ್ಚುವರಿ ಹಣ ಕಡಿತಗೊಂಡಿದ್ದರೆ ಹಿಂಪಡೆಯಬಹುದಾಗಿದೆ.

Comments are closed.