ಮಂಗಳೂರು: ಕರ್ನಾಟಕದಲ್ಲಿ ಅಭದ್ರತೆ, ಅರಾಜ ಕತೆಯ ವಾತಾವರಣ ನೆಲೆಸಿದೆ. ಅಭಿವೃದ್ಧಿ ಸ್ಥಗಿತ ಗೊಂಡಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾರೆ. ಸರಕಾರದ ಕೃಪಾಶೀರ್ವಾದದೊಂದಿಗೆ ರಾಷ್ಟ್ರವಿರೋಧಿ, ಸಮಾಜಘಾತಕ ಶಕ್ತಿಗಳು ವಿಜೃಂಭಿಸುತ್ತಿವೆ. ಇದಕ್ಕೆ ಇತಿಶ್ರೀ ಹಾಡಬೇಕಾದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರುವುದು ಅತೀ ಅವಶ್ಯವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಮಂಗಳೂರಿನ ಕೇಂದ್ರ ಮೈದಾನದಲ್ಲಿ ಮಂಗಳವಾರ ಜರಗಿದ ಬಿಜೆಪಿ ಜನಸುರಕ್ಷಾ ಯಾತ್ರೆಯ ಸಮಾರೋಪದಲ್ಲಿ ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮುಖ್ಯ ಭಾಷಣ ಮಾಡಿದರು. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಇದ್ದಂತೆ. ಕರ್ನಾಟಕದ ಪ್ರತಿ ಯೋಜನೆಯಿಂದ ಜನರ ದುಡ್ಡನ್ನು ಕಾಂಗ್ರೆಸಿಗರು ಲೂಟಿ ಮಾಡಿದ್ದಾರೆ’ ಕರ್ನಾಟಕದಲ್ಲಿ ಕಾಂಗ್ರೆಸ್ನ ಆಡಳಿತದಿಂದಾಗಿ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಜನ ಜಾಗೃತಿಗಾಗಿ ಸುರಕ್ಷಾ ಯಾತ್ರೆ ನಡೆದಿದೆ. ದೇಶದಲ್ಲಿ ಮೋದಿ ಅಭಿವೃದ್ಧಿಯ ಮಂತ್ರದೊಂದಿಗೆ ಜನರ ವಿಶ್ವಾಸಗಳಿಸುತ್ತಿದ್ದಾರೆ. ಇದರಿಂದ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆಯುವಂತಾಗಿದೆ. ದೇಶದ ಅಭಿವೃದ್ಧಿಗೆ ಜನರ ಅಭಿವೃದ್ಧಿ, ರಕ್ಷಣೆ ಮುಖ್ಯ. ಕರ್ನಾಟಕದಲ್ಲಿ ರಾಷ್ಟ್ರ ವಿರೋಧಿ ಶಕ್ತಿಗಳಿಂದಾಗಿ ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಪರಿಣಾಮವಾಗಿ ಮಹಿಳೆಯರು, ಕಾರ್ಮಿಕರು ರಕ್ಷಣೆ ಇಲ್ಲದೆ ಭೀತಿಯಿಂದ ಬದುಕುವಂತಾಗಿದೆ. ರೈತರು ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ರೈತರ ಒಂದು ಲಕ್ಷದವರೆಗಿನ ಸಾಲ ಮನ್ನಾ ಮಾಡಲು ಅವರಿಗೆ ನೆರವು ನೀಡಿದ್ದೇವೆ. ಕರ್ನಾಟಕದಲ್ಲಿ ಆ ರೀತಿಯ ಕ್ರಮ ಕೈ ಗೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಗೂಂಡಾ ಚಟುವಟಿಕೆಗಳನ್ನು ನಿಯಂತ್ರಿಸುತ್ತೇವೆ ಎಂದು ಭರವಸೆ ನೀಡಿದ ಪ್ರಕಾರ ಕ್ರಮ ಕೈಗೊಂಡಿದ್ದೇವೆ ಎಂದರು
ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರ ರೈತ ವಿರೋಧಿ, ಹಿಂದೂ ವಿರೊಧಿ ನೀತಿಯನ್ನು ಅನುಸರಿಸುತ್ತಿದೆ. ಜೊತೆಗೆ ಜನರಿಗೆ ರಕ್ಷಣೆ ನೀಡುವಲ್ಲಿಯೂ ವಿಫಲವಾಗಿದೆ. ಪೂರ್ವ, ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಮೂಲಕ ಕಾಂಗ್ರೆಸ್ ಪಕ್ಷ ಧೂಳೀಪಟಗೊಂಡಿದೆ. ಕರ್ನಾಟಕದಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದು ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕು ಎಂದು ಹೇಳಿದ ಅವರು, ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ, ಅಪರಾಧ ಮುಕ್ತ ರಾಜ್ಯವನ್ನಾಗಿ ಮಾಡಲು ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕೆಂದು ಆದಿತ್ಯನಾಥ್ ಜನತೆಯಲ್ಲಿ ಮನವಿ ಮಾಡಿದರು.
ಮೋದಿ ಸರಕಾರ ಬಂದ ಬಳಿಕ 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬಿಜೆಪಿಯ ಅಭಿವೃದ್ಧಿಯ ಅಜೆಂಡಾಕ್ಕೆ ಜನ ಬೆಂಬಲ ನೀಡಿದ್ದಾರೆ. ಅಭಿವೃದ್ಧಿ, ಜನರ ಸುರಕ್ಷೆ ಪ್ರಧಾನಿ ಮೋದಿ ಅವರ ಗುರಿಯಾಗಿದ್ದು, ಕರ್ನಾಟಕದಲ್ಲೂ ಇದು ಸಾಕಾರಗೊಳ್ಳಬೇಕು. ಪ್ರಸ್ತುತ ರಾಜ್ಯದಲ್ಲಿ ಅಭಿವೃದ್ಧಿಯೂ ಇಲ್ಲ ಜನರಿಗೆ ರಕ್ಷಣೆಯೂ ಇಲ್ಲ. ಇದನ್ನು ಕೊನೆಗೊಳಿಸಿ ರಾಜ್ಯದಲ್ಲಿ ಅಭಿವೃದ್ಧಿ ಪರ, ಜನಸಾಮಾನ್ಯರ ಬದುಕಿಗೆ ಭದ್ರತೆ ಒದಗಿಸುವ ಸರಕಾರವನ್ನು ನೀಡುವ ನಿಟ್ಟಿನಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಸುರಕ್ಷಾ ಯಾತ್ರೆ ಯಶಸ್ವಿಯಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತನಾಡುತ್ತಾ, ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಯನ್ನು ತಡೆಯಲು ರಾಷ್ಟ್ರೀಯ ತನಿಖಾ ದಳದ ಶಾಖೆಯನ್ನು ಆರಂಭಿಸಬೇಕು ಎಂದು ಕೇಂದ್ರವನ್ನು ಆಗ್ರಹಿಸಲಾಗುವುದು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿ ಕಾರ್ಯಕರ್ತರ ಮೇಲೆ ರಾಜಕೀಯ ಪ್ರೇರಿತವಾಗಿ ಹಾಕಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದರು. ಹತ್ಯೆಗೀಡಾದ 24 ಹಿಂದೂಗಳ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ ಹಾಗೂ ಆತ್ಮಹತ್ಯೆ ಮಾಡಿಕೊಂಡ 3,750 ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಮತ್ತು ಹತ್ಯೆಗೆ ಕಾರಣವಾಗಿರುವ ಸಂಘಟನೆಯನ್ನು ನಿಷೇಧಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಬೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಕೆಎಫ್ ಡಿ, ಪಿಎಫ್ ಐ 175 ಪ್ರಕರಣ ಹಿಂಪಡೆದ ಬಳಿಕ ಸಾಕಷ್ಟು ಕೊಲೆ ನಡೆದಿದೆ. ಕಳೆದ ಎರಡೂ ವರ್ಷಗಳಲ್ಲಿ 23 ಹಿಂದೂ ಕಾರ್ಯಕರ್ತರ ಕೊಲೆ ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರನ್ನು ನರ ಹಂತಕ ಎಂದು ಕರೆದಿದ್ದರು. ಮೋದಿ ಮೇಲಿದ್ದ ಆರೋಪ ಸುಳ್ಳು ಸಾಬೀತಾಗಿ ಕ್ಲೀನ್ ಚಿಟ್ ದೊರಕಿದೆ.
ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆ ಮಾತನಾಡಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ತುಷ್ಠೀಕರಣ ನೀತಿ ಅನುಸರಿಸುತ್ತಿದ್ದಾರೆ. 15 ಪರ್ಸೆಂಟ್ ಇರುವ ಅಲ್ಪಸಂಖ್ಯಾತರ ಓಟಿಗಾಗಿ ಜೊಲ್ಲು ಸುರಿಸ್ತೀರಲ್ಲಾ.ಹಾಗಾದ್ರೆ ಬಹುಸಂಖ್ಯಾತ ಹಿಂದುಗಳು ಬೇವರ್ಸಿಗಳಾ? ಹಿಂದುಗಳ ಓಟಿಗೆ ಬೆಲೆ ಇಲ್ಲವೇ ? ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯ ದಲ್ಲಿ 7748ಕ್ಕೂ ಹೆಚ್ಚು ಕೊಲೆ ನಡೆದಿದೆ. 9400 ಡಕಾಯಿತಿ, 7538 ರೇಪ್, 11900 ಕಿಡ್ನಾಪ್, 35 ಸಾವಿರ ಚೀಟಿಂಗ್ ಕೇಸ್, 11 ಲಕ್ಷ ಕ್ರಿಮಿನಲ್ ಕೇಸ್ ದಾಖಲಾಗಿದೆ. ಕರ್ನಾಟಕ ಪಾಪಿಗಳ ಲೋಕದ ಸ್ವರ್ಗ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಲು ಬೆಂಗಳೂರು ಚಲೋ ಮಾಡುತ್ತೇವೆ. ಕಾಂಗ್ರೆಸ್ ಮುಕ್ತ ಕರ್ನಾಟಕ ನಮ್ಮ ಅಭಿಯಾನದ ಗುರಿ. ಓರ್ವ ಪಾತಕಿ ಮುಖ್ಯ ಮಂತ್ರಿ, ಕೊಲೆಗಡುಕ ಸರಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಆಭಿಯಾನ ಮುಂದುವರಿಯಲಿದೆ ಎಂದು ಅನಂತ ಕುಮಾರ್ ಹೆಗ್ಡೆ ಹೇಳಿದರು.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಸುರಕ್ಷ ಯಾತ್ರೆಯನ್ನು ಟೀಕಿಸಿ ಇಲ್ಲಿನ ಮಂಗಳೂರು ಶಾಸಕರು ದಸರಾ ಆಚರಿಸುವ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ರಾಜ್ಯದ ಸಿದ್ದರಾಮಯ್ಯ ಸರಕಾರ ಹಂತಕ ಭಾಗ್ಯ ನೀಡಿದ ಸರಕಾರ. ಕರ್ನಾಟಕದ ಕಾಂಗ್ರೆಸ್ ಸರಕಾರದ್ದು ಅಮಾಯಕರ ಹತ್ಯೆಯೇ ಅಜೆಂಡಾ ಅಗಿದೆ. ಇಲ್ಲಿ ಹಿಂದೂ ಕಾರ್ಯಕರ್ತರೇ ಸುರಕ್ಷಿತರಿಲ್ಲ ಮತ್ತೆ ಜನಸಾಮಾನ್ಯರ ಪಾಡೇನು ಎಂದು ಅವರು ಪ್ರಶ್ನಿಸಿದರು.
ಕರ್ನಾಟಕದಲ್ಲಿ 23 ಕೊಲೆ ಮಾಡಿಸಿ ನಗು ಮುಖದಿಂದಲೇ ಮದುವೆ, ಮುಂಜಿ ಮಾಡಿಸುವ ಸಿದ್ಧರಾಮಯ್ಯನವರಿಗಿಂದ ದೊಡ್ಡ ನರಹಂತಕ ಬೇಕಾ? ಎಂದು ಅವರು ಕಿಡಿಕಾರಿದರು. ಬೆಂಗಳೂರಿನ ಶಿವಾಜಿನಗರದಲ್ಲಿ ಈಗ ಅಫ್ಜಲ್ ಖಾನ್ ಸಂತತಿ ಯವರು ತುಂಬಿದ್ದಾರೆ. ಈಗ ಎಚ್ಚರವಾಗಿಲ್ಲದಿದ್ದರೆ ಕಾಶ್ಮೀರದಲ್ಲಿ ಹಿಂದೂ ಪಂಡಿತರಿಗಾದ ಪರಿಸ್ಥಿತಿಯೇ ಕರಾವಳಿಗಾಗಬಹುದು ಎಂದು ಅವರು ಆತಂಕ ವ್ಯಕ್ತ ಪಡಿಸಿದರು.
ಸಿದ್ಧರಾಮಯ್ಯನವರು ಯೋಗಿ ಬಗ್ಗೆ ಮಾತನಾಡುತ್ತಾರೆ. ಆದರೆ, ಯೋಗಿ ಆದಿತ್ಯ ನಾಥ್ ಅವರ ಬಗ್ಗೆ ಮಾತನಾಡಲೂ ಯೋಗ್ಯತೆ ಬೇಕು. ಈಗ ಉತ್ತರಪ್ರದೇಶದಲ್ಲಿ ಕ್ರಿಮಿನಲ್ ಗಳು ಹೊರಬರಲು ಹೆದರುತ್ತಾರೆ. ಆದರೆ, ರಾಜ್ಯದಲ್ಲಿ ಕ್ರಿಮಿನಲ್ ಗಳನ್ನು ಮೆರವಣಿಗೆಯಲ್ಲಿ ಕರೆದುಕೊಂಡು ಹೋಗುವ ಪರಿಸ್ಥತಿ ನಿರ್ಮಾಣ ವಾಗಿದೆ ಎಂದು ನಳಿನ್ ಕುಮಾರ್ ಅವರು ಅಕ್ರೋಶ ವ್ಯಕ್ತ ಪಡಿಸಿದರು.
ಬಿಜೆಪಿ ಉಪಾಧ್ಯಕ್ಷ ಶ್ರೀರಾಮಲು ಮಾತನಾಡುತ್ತಾ ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿ, ಸಂಘ ಪರಿವಾರದವರ ಮೇಲಿನ ಎಲ್ಲಾ ಪ್ರಕರಣಗಳನ್ನು 24 ಗಂಟೆಗಳ ಒಳಗೆ ಹಿಂದಕ್ಕೆ ಪಡೆಯಲು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಯಡಿಯೂರಪ್ಪ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಸಿ.ಟಿ.ರವಿ, ಸುನಿಲ್ ಕುಮಾರ್, ಪ್ರತಾಪ್ ಸಿಂಹ, ಗಣೇಶ್ ಕಾರ್ನಿಕ್, ಅಂಗಾರ, ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ರತ್ನಾಕರ ಹೆಗ್ಡೆ ಮಟ್ಟಾರ್ ಮೊದಲಾದವರು ಉಪಸ್ಥಿತರಿದದರು.