ಕರಾವಳಿ

ದ.ಕ. ಜಿಲ್ಲೆಯಲ್ಲಿನ ಕೋಮು ಸಂಘರ್ಷಗಳನ್ನು ಹತೋಟಿಗೆ ತರಲು ಕಾಂಗ್ರೆಸ್ ಸರಕಾರ ವಿಫಲ : ಮಂಗಳೂರಿನಲ್ಲಿ ಎಚ್.ಡಿ.ಕೆ

Pinterest LinkedIn Tumblr

ಮಂಗಳೂರು, ಮಾರ್ಚ್. 07: ಜೆಡಿಎಸ್ ವಿಕಾಸ ಪರ್ವ ಸಮಾವೇಶ ನಗರದ ಪುರಭವನದಲ್ಲಿ ಮಂಗಳವಾರ ನಡೆಯಿತು. ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮಾವೇಶವನ್ನು ಉದ್ಘಾಟಿಸಿದರು.

ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನರ ಭಾವನೆಗಳನ್ನು ಕೆರಳಿಸಿ ಧರ್ಮದ ಹೆಸರಿನಲ್ಲಿ ಕೋಮು ಗಲಭೆಯನ್ನು ಹುಟ್ಟು ಹಾಕುವ ಪಕ್ಷಗಳನ್ನು ಜನರು ಅಧಿಕಾರದಿಂದ ದೂರ ಇಡಬೇಕು. ರಸ್ತೆಯಲ್ಲಿ ಯುವಕರು ಹೊಡೆದಾಡಿಕೊಂಡರೆ ಕೋಮು ಬಣ್ಣವನ್ನು ಹಚ್ಚಲಾಗುತ್ತಿದೆ. ಜಿಲ್ಲೆಯಲ್ಲಿ ಒಂದು ಕೊಲೆ ನಡೆದರೆ ತಿಂಗಳು ಕಾಲ ಸೆ.144 ಜಾರಿಯಲ್ಲಿರುತ್ತದೆ. ಧಾರ್ಮಿಕ ಕ್ಷೇತ್ರಗಳ ಪುಣ್ಯ ಭೂಮಿಯಾಗಿರುವ ದ.ಕ. ಜಿಲ್ಲೆಯಲ್ಲಿ ಮರುಕಳಿಸುವ ಕೋಮು ಸಂಘರ್ಷಗಳನ್ನು ಹತೋಟಿಗೆ ತರಲು ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳ ಆಡಳಿತವನ್ನು ನೋಡಿದ್ದೇನೆ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆಯಾಗುತ್ತಿಲ್ಲ. ರೈತರ ಬೆಳೆಗಳಿಗೆ ಸರಿ ಯಾದ ಬೆಲೆ, ಹೆಚ್ಚುತ್ತಿರುವ ನಿರುದ್ಯೋಗ, ಮಹಿಳೆಯರ ರಕ್ಷಣೆಯ ಬಗ್ಗೆ ಈ ಎರಡೂ ಪಕ್ಷಗಳು ಆದ್ಯತೆ ನೀಡಿಲ್ಲ. ಪ್ರತಿ ಕುಟುಂಬಕ್ಕೆ ನೆಮ್ಮದಿಯ ಬದುಕು ಕಲ್ಪಿಸಲು ಜೆಡಿಎಸ್ ಬದ್ಧವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮರುದಿನವೇ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತೇನೆ. ಜನರ ರಕ್ಷಣೆ ಜೆಡಿಎಸ್ನಿಂದ ಮಾತ್ರ ಸಾಧ್ಯ ಎಂದು ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಜೆಡಿಎಸ್ ನಾಯಕರು, ಕಾರ್ಯಕರ್ತರು ಗ್ರಾಮಗಳಿಗೆ ಹೋಗಿ ಪ್ರತಿ ಮನೆಗೆ ಭೇಟಿ ನೀಡಿ ಪಕ್ಷದ ಬಗ್ಗೆ ಜನರಿಗೆ ಮನವರಿಗೆ ಮಾಡಬೇಕು. ಈ ಬಾರಿ ಜಿಲ್ಲೆಯಲ್ಲಿ ಬದಲಾವಣೆ ತರಲು ಕಾರ್ಯಕರ್ತರು ಶ್ರಮಿಸಬೇಕೆಂದು ಕುಮಾರಸ್ವಾಮಿ ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಅವರು ಮಾತನಾಡಿ, ಆಹಾರ ಸಚಿವ ಯು.ಟಿ.ಖಾದರ್ ಅವರು ಇತ್ತೀಚೆಗೆ ವಿದೇಶದಲ್ಲಿ ದುಡಿಯುವ ಜಿಲ್ಲೆಯ ಜನತೆಯ ಬಗ್ಗೆ ಅವಮಾನಕಾರಿಯಾಗಿ ಹೇಳಿಕೆ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಸಚಿವ ಸ್ಥಾನದಲ್ಲಿರುವವರು ಈ ರೀತಿಯಾಗಿ ಕೀಳುಮಟ್ಟದ ಹೇಳಿಕೆ ನೀಡಬಾರದು. ಉದ್ಯೋಗವನ್ನು ಅರಸುತ್ತಾ ವಿದೇಶಕ್ಕೆ ತೆರಳುವ ಜನರು ಯಾವ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ಖಾದರ್ ಅವರು ಅರಿತುಕೊಳ್ಳಬೇಕು. ತಮ್ಮ ಪತ್ನಿಯ, ಮಕ್ಕಳ ಚಿನ್ನಾಭರಣವನ್ನು ಬ್ಯಾಂಕಿನಲ್ಲಿ ಅಡವು ಇಟ್ಟು ವಿದೇಶಕ್ಕೆ ಹೋಗಿ ಅಲ್ಲಿ ಕಷ್ಟಪಟ್ಟು, ಬೆವರು ಸುರಿಸಿ ಕೆಲಸ ಮಾಡುತ್ತಿದ್ದಾರೆ. ಇಂತಹ ಶ್ರಮ ಜೀವಿಗಳನ್ನು ಖಾದರ್ ಅವಮಾನಿಸಿದ್ದಾರೆ ಎಂದು ಫಾರೂಕ್ ಹೇಳಿದರು.

ಮಾಜಿ ಮಂಗಳೂರು ಮೇಯರ್ ಕೆ.ಅಶ್ರಫ್ ಅವರು ಪಕ್ಷದ ಸಿದ್ಧಾಂತವನ್ನು ಒಪ್ಪಿಗೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ರಾಜ್ಯದ ಜನರು ಕಾಂಗ್ರೆಸ್ನಿಂದ ಭ್ರಮನಿರಸನ ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಬಿ.ಎಂ.ಫಾರೂಕ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಗೊಂಡ ಮಾಜಿ ಮೇಯರ್ ಆಶ್ರಫ್ : ಕುಮಾರ ಸ್ವಾಮಿಯವರ ಉಪಸ್ಥಿತಿಯಲ್ಲಿ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ ಕೆ.ಅಶ್ರಫ್ ನೂರಾರು ಬೆಂಬಲಿಗರೊಂದಿಗೆ ಜೆಡಿಎಸ್ ಗೆ ಸೇರ್ಪಡೆಗೊಂಡರು.

ವೇದಿಕೆಯಲ್ಲಿ ಕುಮಾರಸ್ವಾಮಿ ಅವರು ಅಶ್ರಫ್ ಅವರಿಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸಿದರು. ಇದಕ್ಕೂ ಮುನ್ನ ಕೆ.ಅಶ್ರಫ್ ಅವರನ್ನು ಅವರ ಬೆಂಬಲಿಗರು ಮೆರವಣಿಗೆಯಲ್ಲಿ ಪುರಭವನಕ್ಕೆ ಕರೆ ತಂದರು. ಮುಡಾ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಶಿಲ್ಪಾ ರಮೇಶ್ ಅವರೂ ಜೆಡಿಎಸ್ಗೆ ಸೇರ್ಪಡೆಗೊಂಡರು. ಜತೆಗೆ ಜಿಲ್ಲಾ ಅಂಗವಿಕಲಕರ ಫೆಡರೇಶನ್ ಅಧ್ಯಕ್ಷ ದಿನೇಶ್ ಶೆಟ್ಟಿ ಸಹಿತ ಹಲವು ಮಂದಿ ಜೆಡಿಎಸ್ ಗೆ ಸೇರ್ಪಡೆಗೊಂಡರು.

ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಮಾಜಿ ಶಾಸಕ ಅಮರನಾಥ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ರವೂಫ್ ಪುತ್ತಿಗೆ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಹಾಜಿ ಕರ್ನಿರೆ, ಕಾರ್ಪೊರೇಟರ್ಗಳಾದ ರಮೀಝಾ ಬಾನು, ಅಝೀಝ್ ಕುದ್ರೋಳಿ, ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ, ಯುವ ಜೆಡಿಎಸ್ ಅಧ್ಯಕ್ಷ ಅಕ್ಷತ್ ಸುವರ್ಣ, ಸುಮತಿ ಹೆಗ್ಡೆ, ಭಾರತಿ ಪುಷ್ಪರಾಜ್, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಘುನಾಥ್ ಮೊದಲಾದವರು ಉಪಸ್ಥಿತರಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ ಸ್ವಾಗತಿಸಿದರು.

Comments are closed.