ರಾಷ್ಟ್ರೀಯ

ಇಂದು ತ್ರಿಪುರ ವಿಧಾನಸಭೆ ಚುನಾವಣೆ, ಫಲಿತಾಂಶ ಮಾರ್ಚ್‌ 3ಕ್ಕೆ

Pinterest LinkedIn Tumblr


ಅಗರ್ತಲಾ: ತ್ರಿಪುರಾ ವಿಧಾನಸಭೆ ಚುನಾವಣೆ ನಾಳೆ (ಫೆ.18) ನಡೆಯಲಿದ್ದು, ಮಾರ್ಚ್‌ 3ರಂದು ಫಲಿತಾಂಶ ಪ್ರಕಟವಾಗಲಿದೆ.

ಮುಂಜಾನೆ 7 ಗಂಟೆಯಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು, 3,214 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಅವುಗಳಲ್ಲಿ 47 ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ ಎಂದು ಚುನಾವಣೆ ಆಯೋಗ ಹೇಳಿದೆ.

ಮುಖ್ಯಮಂತ್ರಿ ಮಾಣಿಕ್ ಸರ್ಕಾರ್​ ನೇತೃತ್ವದ ಎಡಪಕ್ಷ ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿದ್ದು, ಈ ಬಾರಿ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುವುದು ಕಷ್ಟ ಎಂದು ರಾಜಕೀಯ ವಲಯದಲ್ಲಿ ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದಲ್ಲಿ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿರುವುದರಿಂದ ಎಡಪಕ್ಷ ಗೆಲ್ಲಲು ತಿಣುಕಾಡಬೇಕಿದೆ.

ಮತದಾರರ ವಿವರ

ಒಟ್ಟಾರೆ 25 ಲಕ್ಷ ಮತದಾರರನ್ನು ಹೊಂದಿರುವ ತ್ರಿಪುರಾದಲ್ಲಿ 13 ಲಕ್ಷ ಪುರುಷರು ಮತ್ತು 12 ಲಕ್ಷ ಮಹಿಳಾ ಮತದಾರರು ಇದ್ದಾರೆ. ಈ ಬಾರಿ ಹೊಸದಾಗಿ 47,803 ಜನ ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ.

ತ್ರಿಪುರ ವಿಧಾನಸಭೆಯ 60 ಸೀಟುಗಳ 59 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 307 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಚರಿಲಮ್‌ ವಿಧಾನಸಭೆ ಕ್ಷೇತ್ರದಲ್ಲಿ ಮಾರ್ಚ್‌ 12ರಂದು ಮತದಾನ ನಡೆಯಲಿದೆ. ಕ್ಷೇತ್ರದ ಸಿಪಿಐ(ಎಂ) ಅಭ್ಯರ್ಥಿಯಾಗಿದ್ದ ರಾಮೇಂದ್ರ ನಾರಾಯಣ್‌ ದೆಬ್‌ ಬರ್ಮಾ ಅವರ ಅಕಾಲಿಕ ಮರಣದಿಂದಾಗಿ ಚುನಾವಣೆಯನ್ನು ಮುಂದೂಡಲಾಗಿದೆ.

20 ಸೀಟುಗಳನ್ನು ಬುಡಕಟ್ಟು ಜನಾಂಗಕ್ಕೆ ಮೀಸಲಿಡಲಾಗಿದೆ. ಸಿಪಿಐ(ಎಂ) 57 ಸೀಟುಗಳಲ್ಲಿ ಸ್ಪರ್ಧಿಸುತ್ತಿದ್ದು, ಇತರ ಎಡಪಕ್ಷಗಳು, ಆರ್‌ಎಸ್‌ಪಿ, ಫಾರ್ವರ್ಡ್ ಬ್ಲಾಕ್ ಮತ್ತು ಸಿಪಿಐ ಒಂದೊಂದು ಸ್ಥಾನದಲ್ಲಿ ಸ್ಪರ್ಧಿಸಲಿವೆ.

ಬುಡಕಟ್ಟು ಜನಾಂಗದ ಭಾರತೀಯ ಪೀಪಲ್ಸ್‌ ಫ್ರಂಟ್‌ ಆಫ್‌ ತ್ರಿಪುರ(ಐಪಿಎಫ್‌ಟಿ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಯು 51 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹೊಂದಿದ್ದು, ಇನ್ನುಳಿದ 9 ಕ್ಷೇತ್ರಗಳಲ್ಲಿ ಐಪಿಎಫ್‌ಟಿ ಸ್ಫರ್ಧಿಸಲಿದೆ.

ಕಾಂಗ್ರೆಸ್‌ ಈ ಬಾರಿ ಸ್ವತಂತ್ರವಾಗಿ ಸ್ವರ್ಧಿಸುತ್ತಿದ್ದು, 59 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನುಳಿದ ಗೋಮತಿ ಜಿಲ್ಲೆಯ ಕಾಕ್ರಬೋನ್‌ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಘೋಷಿಸಿಲ್ಲ.

ಈ ಬಾರಿ ಇಂಡೋ ಟಿಬೆಟಿಯನ್‌ ಗಡಿ ಪೊಲೀಸ್‌ ನಿರ್ದೇಶಕ ಆರ್‌ ಕೆ ಪಚ್ನಾಂದ್‌ ಅವರು ವಿಶೇಷ ವೀಕ್ಷಕರಾಗಿ ನೇಮಕಗೊಂಡಿದ್ದಾರೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೂರು ಸಶಸ್ತ್ರ ಸೇನಾ ಪಡೆಗಳನ್ನು ರಾಜ್ಯ ಸಶಸ್ತ್ರ ಸಿಬ್ಬಂದಿ ಮತ್ತು ಪೊಲೀಸ್‌ ಸಿಬ್ಬಂದಿಯೊಂದಿಗೆ ನಿಯೋಜಿಸಲಾಗಿದೆ ಎಂದು ತ್ರಿಪುರ ಮುಖ್ಯ ಚುನಾವಣಾ ಅಧಿಕಾರಿ ಶ್ರೀರಾಮ್ ತರಣಿಕಂತಿ ಹೇಳಿದ್ದಾರೆ.

Comments are closed.