ರಾಷ್ಟ್ರೀಯ

ಲೋಕಸಭೆಗೆ ಅವಧಿಪೂರ್ವ ಚುನಾವಣೆ?: ರಾಷ್ಟ್ರಪತಿಗಳ ಭಾಷಣದಲ್ಲಿ ಪ್ರಸ್ತಾವ

Pinterest LinkedIn Tumblr

0
ಹೊಸದಿಲ್ಲಿ: ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರೂ ಆಶಯ ವ್ಯಕ್ತಪಡಿಸಿದ್ದಾರೆ. 2019ರಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಯನ್ನು 2018ರ ಅಂತ್ಯದ ವೇಳೆಗೆ ರಾಜ್ಯ ವಿಧಾನಸಭೆ ಚುನಾವಣೆಗಳ ಜತೆಗೇ ನಡೆಸುವ ಸಾಧ್ಯತೆ ಹೆಚ್ಚಾಗಿದೆ.

ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್‌, ಪದೇ ಪದೇ ನಡೆಯುವ ಚುನಾವಣೆಗಳು ದೇಶದ ಆರ್ಥಿಕತೆ, ಮಾನವ ಸಂಪನ್ಮೂಲ ಹಾಗೂ ಅಭಿವೃದ್ಧಿ ಕಾರ್ಯಗಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಪ್ರತಿಪಾದಿಸಿದರು. ಚುನಾವಣೆ ಘೋಷಣೆಯಾದ ಕೂಡಲೇ ‘ಮಾದರಿ ನೀತಿ ಸಂಹಿತೆ’ ಜಾರಿಯಾಗುವುದರಿಂದ ಎಷ್ಟೋ ಅಭಿವೃದ್ಧಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆ ಎಂದು ರಾಷ್ಟ್ರಪತಿ ನುಡಿದರು.

ಸರಕಾರವೇ ಸಿದ್ಧಪಡಿಸಿದ ಭಾಷಣವನ್ನು ಓದಿದ ರಾಷ್ಟ್ರಪತಿಗಳು, ‘ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯಬೇಕು; ಬಳಿಕ ಎಲ್ಲ ಪಕ್ಷಗಳು ಒಮ್ಮತಕ್ಕೆ ಬರಬೇಕು’ ಎಂದು ಕರೆ ನೀಡಿದರು.

ಸೋಮವಾರ ನಡೆದ ಎನ್‌ಡಿಎ ಸಭೆಯಲ್ಲಿ ಪ್ರಧಾಣಿ ನರೇಂದ್ರ ಮೋದಿ ಅವರೂ ಈ ವಿಷಯವನ್ನು ಮತ್ತೆ ಪ್ರಸ್ತಾಪಿಸಿದರು. ರಾಜಕೀಯ ಮುಖಂಡರು ಈ ನಿಟ್ಟಿನಲ್ಲಿ ಚರ್ಚೆ ಆರಂಭಿಸಬೇಕು; ಈ ಪ್ರಸ್ತಾವದ ಪರವಾಗಿ ವಾತಾವರಣ ರೂಪಿಸಬೇಕು; ಪದೇ ಪದೇ ನಡೆಯುವ ಚುನಾವಣೆಗಳು ಅಭಿವೃದ್ಧಿಗೆ ಹಾನಿಕರ ಮಾತ್ರವಲ್ಲ, ಆರ್ಥಿಕತೆಗೂ ದೊಡ್ಡ ಹೊಡೆತ ನೀಡುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಏಕಕಾಲಕ್ಕೆ ಚುನಾವಣೆಗಳನ್ನು ನಡೆಸಬೇಕೆಂಬ ಮೋದಿ ಅವರ ಪ್ರಸ್ತಾವದ ಬಗ್ಗೆ ಕಾಂಗ್ರೆಸ್‌ ಇದುವರೆಗೂ ಯಾವುದೇ ನಿಲುವು ತಳೆದಿಲ್ಲ. ವಾಸ್ತವದಲ್ಲಿ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳನ್ನು ಚುನಾವಣೆ ಆಯೋಗ ಪ್ರತ್ಯೇಕವಾಗಿ ನಡೆಸುವುದಾಗಿ ತಿಳಿಸಿದಾಗ ಕಾಂಗ್ರೆಸ್‌ ಇದನ್ನು ಪ್ರಶ್ನಿಸಿತ್ತು. ಈ ಎರಡು ಚುನಾವಣೆಗಳನ್ನೇ ಏಕಕಾಲಕ್ಕೆ ನಡೆಸಲಾಗದಿದ್ದರೆ ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವುದು ಹೇಗೆ ಸಾಧ್ಯ ಎಂದು ಅದು ಪ್ರಶ್ನಿಸಿತ್ತು.

ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾವದ ಬಗ್ಗೆ ಪ್ರತಿಪಕ್ಷಗಳಿಗೆ ಸಣ್ಣ ಆತಂಕವೂ ಉಂಟಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಂತಹ ಪ್ರಮುಖ ರಾಜ್ಯಗಳಲ್ಲಿ ಹಾಲಿ ಇರುವ ಬಿಜೆಪಿ ಸರಕಾರಗಳನ್ನೇ ಮುಂದುವರಿಸಲು ಕೇಂದ್ರ ಸರಕಾರ ಇಂತಹದೊಂದು ಪ್ರಸ್ತಾವ ಮುಂದಿಡುತ್ತಿದೆ ಎಂಬ ಸಂದೇಹ ಪ್ರತಿಪಕ್ಷಗಳದ್ದು.

ವಿವಿಧ ರಾಜ್ಯಗಳಲ್ಲಿ ಸರಕಾರಗಳ ಅವಧಿ ಬೇರೆ ಬೇರೆ ಆಗಿರುವುದರಿಂದ ರಾಜಕೀಯವಾಗಿ ಇದು ಅಷ್ಟು ಸುಲಭವೂ ಅಲ್ಲ. ಆದರೆ ಉತ್ತರದ ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಲೋಕಸಭೆ ಚುನಾವಣೆಯ ಜತೆಗೆ ನಡೆಸುವ ಆಯ್ಕೆ ಬಿಜೆಪಿಯ ಮುಂದಿದೆ. ಅಲ್ಲದೆ ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾ ಚುನಾವಣೆಗಳೂ ಲೋಕಸಭೆ ಚುನಾವಣೆಯ ಜತೆಗೇ ನಡೆಯುತ್ತವೆ. ಈ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿರುವ ಪಕ್ಷಗಳು ಒಪ್ಪಿದರೆ ಕೆಲವು ತಿಂಗಳ ಮುಂಚಿತವಾಗಿ ಅಲ್ಲಿ ಚುನಾವಣೆ ನಡೆಸಬಹುದು ಎಂಬ ಯೋಚನೆ ಕೇಂದ್ರ ಸರಕಾರದ್ದಾಗಿದೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಪ್ರಸ್ತಾಪಿಸಿದ ಬಳಿಕ, ಹೊಸದಾಗಿ ನೇಮಕಗೊಂಡ ಮುಖ್ಯ ಚುನಾವಣಾ ಆಯುಕ್ತ ಒ.ಪಿ ರಾವತ್‌ ಅವರು, ರಾಷ್ಟ್ರೀಯ ಮತ್ತು ರಾಜ್ಯಗಳ ಚುನಾವಣೆ ಏಕಕಾಲಕ್ಕೆ ನಡೆಸುವ ಬಗ್ಗೆ ‘ಶಾಸನಾತ್ಮಕ ಚೌಕಟ್ಟು’ ರೂಪಿಸಲು ಬಹಳಷ್ಟು ಕಾಲಾವಕಾಶ ಬೇಕಾಗುತ್ತದೆ ಎಂದಿದ್ದರು. ಅದಕ್ಕೆ ಸಂವಿಧಾನ ತಿದ್ದುಪಡಿಯೂ ಅಗತ್ಯವಿದೆ ಎಂದು ಅವರು ನೆನಪಿಸಿದ್ದರು.

Comments are closed.