ರಾಷ್ಟ್ರೀಯ

ಆಧಾರ್‌ ಕಾಯ್ದೆ ಉಲ್ಲಂಘನೆ: ಏರ್‌ಟೆಲ್‌ ಇ-ಕೆವೈಸಿ ಲೈಸೆನ್ಸ್‌ ತಾತ್ಕಾಲಿಕ ರದ್ದು

Pinterest LinkedIn Tumblr

ಹೊಸದಿಲ್ಲಿ: ಇ-ಕೆವೈಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರ್ತಿ ಏರ್‌ಟೆಲ್‌ನ ಸಿಮ್‌ ಕಾರ್ಡ್‌ ಹಾಗೂ ಪೇಮೆಂಟ್‌ ಬ್ಯಾಂಕ್‌ ಗ್ರಾಹಕರ ಜತೆ ಆಧಾರ್‌ ಲಿಂಕ್ಡ್‌ ಇ-ಕೆವೈಸಿ ಪರಿಶೀಲನೆಗೆ ನೀಡಿದ್ದ ಲೈಸೆನ್ಸ್‌ ಅನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ತಾತ್ಕಾಲಿಕವಾಗಿ ರದ್ದುಪಡಿಸಿದೆ.

ಏರ್‌ಟೆಲ್‌ ಸಿಮ್‌ ಗ್ರಾಹಕರ ಅನುಮತಿಯಿಲ್ಲದೆ ಅವರ ಆಧಾರ್‌ ಆಧರಿತ ಇ-ಕೆವೈಸಿ ತಪಾಸಣೆ ವಿವರಗಳನ್ನು ಪೇಮೆಂಟ್‌ ಬ್ಯಾಂಕ್‌ ಖಾತೆಗಳಿಗೂ ಜೋಡಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ.

ಆಧಾರ್‌ ಕಾಯ್ದೆ ಉಲ್ಲಂಘನೆ ಆರೋಪದ ಕುರಿತು ಭಾರ್ತಿ ಏರ್‌ಟೆಲ್‌ ವಿರುದ್ಧ ಪ್ರಾಧಿಕಾರ ಕಳೆದ ತಿಂಗಳು ತನಿಖೆಗೆ ಆದೇಶಿಸಿತ್ತು. ಮೊಬೈಲ್‌ ಗ್ರಾಹಕರ ಇ-ಕೆವೈಸಿ ಪ್ರಕ್ರಿಯೆಯನ್ನೇ ಬಳಸಿ ಗ್ರಾಹಕರಿಗೆ ಅರಿವಿಲ್ಲದಂತೆ ಅವರ ಹೆಸರಿಗೆ ಪೇಮೆಂಟ್‌ ಬ್ಯಾಂಕ್‌ ಖಾತೆಗಳನ್ನು ತೆರೆಯುತ್ತಿರುವ ಬಗ್ಗೆ ದೂರು ನೀಡಲಾಗಿತ್ತು. ತಕ್ಷಣದಿಂದಲೇ ಈ ಅಕ್ರಮ ನಿಲ್ಲಿಸದಿದ್ದರೆ ಭಾರೀ ಪ್ರಮಾಣದ ದಂಡ ತೆರಬೇಕಾದೀತು ಎಂದು ಯುಐಡಿಎಐ ಭಾರ್ತಿ ಏರ್‌ಟೆಲ್‌ಗೆ ಎಚ್ಚರಿಕೆ ನೀಡಿತ್ತು.

ಸರಕಾರ ಡಿಬಿಟಿ ವಿಧಾನದಲ್ಲಿ ಜನತೆಯ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸುವ ಸಬ್ಸಿಡಿ ಮತ್ತು ಇತರ ಹಣ ನೇರವಾಗಿ 23 ಲಕ್ಷಕ್ಕೂ ಹೆಚ್ಚು ಗ್ರಾಹಕರ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್‌ ಖಾತೆಗಳಿಗೆ 47 ಕೋಟಿ ರೂ ಜಮೆಯಾಗಿದೆ ಎಂದು ವರದಿಯಾಗಿತ್ತು.

‘ಇದು ಗಂಭೀರ ಸ್ವರೂಪದ ಲೋಪ. ಆಧಾರ್‌ ಕಾಯ್ದೆಯ ನಿಯಮಗಳ ಪ್ರಕಾರ ಮೇಲ್ನೋಟಕ್ಕೇ ಇದೊಂದು ಅಪರಾಧಿಕ ವಿಶ್ವಾಸ ಮತ್ತು ಗುತ್ತಿಗೆಯ ದ್ರೋಹವಾಗಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಮೂಲವೊಂದು ವಿಕ ಸೋದರ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದೆ.

ಅಡುಗೆ ಅನಿಲದ ಸಬ್ಸಿಡಿ ಹಣ ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ ಖಾತೆಗೆ ಜಮೆಯಾಗಿದೆ ಎಂದು ಹಲವು ಗ್ರಾಹಕರು ದೂರಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿತ್ತು. ಈ ಮೊದಲೇ ಆಧಾರ್‌ ಜೋಡಿಸಲಾದ ಬ್ಯಾಂಕ್‌ ಖಾತೆಗೆ ಬೀಳುತ್ತಿದ್ದ ಸಬ್ಸಿಡಿ ಹಣ ಇತ್ತೀಚೆಗೆ ಏರ್‌ಟೆಲ್ ಖಾತೆಗೆ ಬೀಳುತ್ತಿರುವುದನ್ನು ಗ್ರಾಹಕರು ಯುಐಡಿಎಐ ಗಮನಕ್ಕೆ ತಂದಿದ್ದರು.

ಈ ಅಕ್ರಮ ಬೆಳಕಿಗೆ ಬಂದ ಬಳಿಕ ಯುಐಡಿಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್‌ ಭೂಷಣ್‌ ಪಾಂಡೆ, ಆಧಾರ್‌ ಪರಿಶೀಲನೆ ವೇಳೆ ಕೆಲವು ಟೆಲಿಕಾಂ ಕಂಪನಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಹಾಗಿದ್ದರೂ ಯಾವ ಟೆಲಿಕಾಂ ಕಂಪನಿ ಎಂದು ಅವರು ಬಹಿರಂಗಪಡಿಸಿರಲಿಲ್ಲ.

ಆಧಾರ್‌ ಪ್ರಾಧಿಕಾರ ಕೈಗೊಂಡ ಶಿಸ್ತುಕ್ರಮದಿಂದಾಗಿ ಏರ್‌ಟೆಲ್‌ ತನ್ನ ಗ್ರಾಹಕರ ಇ-ಕೆವೈಸಿ (ಆಧಾರ್‌ ಜೋಡಣೆ ಪ್ರಕ್ರಿಯೆ) ನಡೆಸುವುದಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ತಡೆಯಾಜ್ಞೆ ತೆರವಾಗುವ ವರೆಗೆ ಏರ್‌ಟೆಲ್‌ ಪೇಮೆಂಟ್ ಬ್ಯಾಂಕ್‌ ಕೂಡ ಹೊಸ ಖಾತೆ ತೆರೆಯಲು ಸಾಧ್ಯವಾಗದು.

ಪ್ರತಿಬಾರಿ ಆಧಾರ್‌ ಪರಿಶೀಲನೆ ಮಾಡುವಾಗಲೂ ಗ್ರಾಹಕರ ಅನುಮತಿ ಪಡೆದೇ ಮಾಡಬೇಕೆಂದು ಆಧಾರ್‌ ಕಾಯ್ದೆ -2016 ಕಡ್ಡಾಯಗೊಳಿಸಿದೆ. ಏರ್‌ಟೆಲ್‌ ತನ್ನ ಗ್ರಾಹಕರ ಸಿಮ್‌ ಕಾರ್ಡ್‌ಗಳ ಪರಿಶೀಲನೆ ವೇಳೆ ಪಡೆದ ಆಧಾರ್‌ ಕೆವೈಸಿಯನ್ನೇ ಬಳಸಿಕೊಂಡು ಗ್ರಾಹಕರ ಹೆಸರಿನಲ್ಲಿ ತನ್ನ ಪೇಮೆಂಟ್‌ ಬ್ಯಾಂಕಿನ ಖಾತೆಗಳನ್ನು ತೆರೆದಿತ್ತು. ಈ ರೀತಿ ಅನುಮತಿಯಿಲ್ಲದೆ ಆಧಾರ್‌ ಕೆವೈಸಿ ಪಡೆದರೆ ದಿನವೊಂದಕ್ಕೆ 1 ಲಕ್ಷ ರೂ.ಗಳಂತೆ ದಂಡ ತೆರಬೇಕಾಗುತ್ತದೆ. ಅಲ್ಲದೆ ಗ್ರಾಹಕರ ಜತೆಗಿನ ಒಪ್ಪಂದಗಳನ್ನು ರದ್ದುಪಡಿಸಬೇಕಾಗುತ್ತದೆ.

ಸೆಪ್ಟೆಂಬರ್ 18ರಂದು ಮೊದಲ ಬಾರಿಗೆ ಏರ್‌ಟೆಲ್‌ಗೆ ನೋಟೀಸ್‌ ಜಾರಿ ಮಾಡಲಾಗಿತ್ತು. ಅದಕ್ಕೆ ಉತ್ತರಿಸಿದ ಏರ್‌ಟೆಲ್‌ ತನ್ನ ಗ್ರಾಹಕರ ಸಿಮ್‌ ವೆರಿಫಿಕೇಶನ್‌ ಮತ್ತು ಪೇಮೆಂಟ್ ಬ್ಯಾಂಕ್‌ ಖಾತೆ ತೆರೆಯುವ ಪ್ರಕ್ರಿಯೆಗಳನ್ನು ಸಂಪೂರ್ಣ ಪ್ರತ್ಯೇಕಿಸಿರುವುದಾಗಿ ತಿಳಿಸಿತ್ತು. ಆದರೆ ಈ ಉತ್ತರ ತೃಪ್ತಿಕರವಾಗಿಲ್ಲದ ಕಾರಣ ನವೆಂಬರ್‌ 24ರಂದು ಯುಐಡಿಎಐ ಮತ್ತೊಂದು ನೋಟೀಸ್‌ ಜಾರಿ ಮಾಡಿತ್ತು.

ನಂತರ ಏರ್‌ಟೆಲ್‌ ಮೊಬೈಲ್‌ ಆಪ್‌ ಅನ್ನು ಪರಾಮರ್ಶಿಸಿದ ಯುಐಡಿಎಐ, ಆಪ್‌ ತೆರೆದ ತಕ್ಷಣವೇ ಸ್ವಾಗತ ಸಂದೇಶದೊಂದಿಗೆ ಮೊದಲೇ ಟಿಕ್‌ ಮಾಡಲಾದ ಬಾಕ್ಸ್‌ಗಳು ಕ್ಷಣಕಾಲ ಮಿನುಗಿದ ಬಳಿಕ “Upgrade or create my Airtel Payment Bank wallet using existing Airtel mobile KYC.”ಎಂಬ ಸಂದೇಶ ಕಾಣಿಸುವುದನ್ನು ಪತ್ತೆ ಹಚ್ಚಿತು. ಆಧಾರ್‌ ಕಾಯ್ದೆ ಮತ್ತು ನಿಯಮಗಳ ಸಂಪೂರ್ಣ ಉಲ್ಲಂಘನೆ ಇದು ಎಂದು ತೀರ್ಮಾನಿಸಿರುವ ಪ್ರಾಧಿಕಾರ ಏರ್‌ಟೆಲ್‌ಗೆ ನೀಡಿರುವ ಇ-ಕೆವೈಸಿ ಅನುಮತಿಯನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ.

Comments are closed.