ಕ್ರೀಡೆ

ದಾಂಡಿಗರು ತಪ್ಪುಗಳಿಂದ ಕಲಿಯುತ್ತಿದ್ದಾರೆ: ಧವನ್

Pinterest LinkedIn Tumblr


ವಿಶಾಖಪಟ್ಟಣ: ಭಾನುವಾರದಂದು ಇಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯಕ್ಕೂ ಮುಂಚಿತವಾಗಿ ಹೇಳಿಕೆ ಕೊಟ್ಟಿರುವ ಭಾರತೀಯ ಕ್ರಿಕೆಟ್ ತಂಡದ ಆಕ್ರಮಣಕಾರಿ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್, ತಮ್ಮ ದಾಂಡಿಗರು ತಪ್ಪುಗಳಿಂದ ಕಲಿಯುತ್ತಿದ್ದಾರೆ ಎಂದಿದ್ದಾರೆ.

ವೇಗಿ ಸ್ನೇಹಿ ಪಿಚ್‌ಗಳಲ್ಲಿನ ತೀರಾ ಕಳಪೆ ಮಟ್ಟದ ಪ್ರದರ್ಶನದಿಂದಾಗಿ ಮುಂಬರುವ ಮಹತ್ವದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಟೀಮ್ ಇಂಡಿಯಾದ ನಿರ್ವಹಣೆ ಹೇಗಿರಲಿದೆ ಎಂಬುದರ ಬಗ್ಗೆ ಆತಂಕ ಮಡುಗಟ್ಟಿದೆ.

ಈ ನಡುವೆ ಹೇಳಿಕೆ ಕೊಟ್ಟಿರುವ ಧವನ್, ನಾವು ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇವೆ. ಪ್ರಮುಖವಾಗಿಯೂ ಕೋಲ್ಕತ್ತಾ ಮತ್ತು ಧರ್ಮಶಾಲಾದಲ್ಲಿ ಎಂದು ಎಡಗೈ ಬ್ಯಾಟ್ಸ್‌ಮನ್ ಸೇರಿಸಿದರು.

ವೇಗಿ ಸ್ನೇಹಿ ಪಿಚ್‌ಗಳಲ್ಲೂ ಧನಾತ್ಮಕ ಚಿಂತನೆಯೊಂದಿಗೆ ನಾವು ಆಡಿದ್ದೇವೆ. ಹಾಗಿದ್ದರೂ ನಾವು ಬಯಸಿದಂತೆ ಆಗಲಿಲ್ಲ. ತಪ್ಪುಗಳಿಂದ ನಾವು ಕಲಿತುಕೊಂಡಿದ್ದೇವೆ ಎಂದು ವಿವರಿಸಿದರು.

ಮೊದಲ ಪಂದ್ಯದ ಸೋಲಿನ ಬಳಿಕವೂ ಒತ್ತಡವನ್ನು ನಿಭಾಯಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಾನು ಹೇಳಿದ ಹಾಗೆಯೇ ಇದು ಕಲಿಕಾ ಕಾಲಘಟ್ಟವಾಗಿದ್ದು, ಇಲ್ಲಿಂದ ಮುಂದಕ್ಕೆ ಮತ್ತಷ್ಟು ಉತ್ತಮ ನಿರ್ವಹಣೆ ನೀಡಲಿದ್ದೇವೆ ಎಂದರು.

ಅದೇ ವೇಳೆಯಲ್ಲಿ ಏಕದಿನದಲ್ಲಿ ಮೂರನೇ ದ್ವಿಶತಕ ಬಾರಿಸಿರುವ ರೋಹಿತ್ ಶರ್ಮಾ ಸಾಧನೆಯನ್ನು ಶ್ಲಾಘಿಸಿರುವ ಧವನ್, ತಾವು ಆಡಿರುವ ಪೈಕಿ ರೋಹಿತ್ ಅತ್ಯುತ್ತಮ ಓಪನಿಂಗ್ ಜತೆಗಾರನಾಗಿದ್ದಾರೆ ಎಂದಿದ್ದಾರೆ.

ಅದೇ ಹೊತ್ತಿಗೆ ರೋಹಿತ್ ನಾಯಕತ್ವವನ್ನು ಕೊಂಡಾಡಲು ಧವನ್ ಮೆರೆಯಲಿಲ್ಲ. ರೋಹಿತ್ ಉತ್ತಮ ನಾಯಕನಾಗಿದ್ದು, ಪ್ರತಿಯೊಬ್ಬ ಆಟಗಾರನೂ ತಮ್ಮ ಜವಾಬ್ದಾರಿ ಅರಿತು ಮೂಲಭೂತ ಅಂಶಗಳನ್ನು ಸರಿಯಾಗಿ ಆಡುವಂತೆ ಪ್ರೇರೇಪಿಸುತ್ತಾರೆ ಎಂದರು.

ಫೈನಲ್ ಪಂದ್ಯ ಬಗ್ಗೆ ಮಾತನಾಡಿದ ಧವನ್, ನಿಸ್ಸಂಶಯವಾಗಿಯೂ ಫೈನಲ್ ಆಡುವಾಗ ಒತ್ತಡ ಇದ್ದೇ ಇರುತ್ತದೆ. ಹಾಗಿದ್ದರೂ ನಮ್ಮದ್ದು ಬಲಿಷ್ಠ ತಂಡವಾಗಿದ್ದು, ಸಾಮರ್ಥ್ಯ ಹಾಗೂ ಕೌಶಲ್ಯಕ್ಕೆ ತಕ್ಕಂತೆ ಆಡಿದ್ದಲ್ಲಿ ವಿಜಯ ನಮ್ಮದಾಗಲಿದೆ ಎಂದರು.

Comments are closed.