ರಾಷ್ಟ್ರೀಯ

ಪಾಕ್‌ ಗಂಡನ ಹಿಂಸೆಯಿಂದ ಮಗಳ ರಕ್ಷಿಸಿ: ಸುಷ್ಮಾ ನೆರವಿಗೆ ಹೆತ್ತವರ ಮೊರೆ

Pinterest LinkedIn Tumblr


ಹೈದರಾಬಾದ್‌: ಲಾಹೋರ್‌ ನಿವಾಸಿಯಾಗಿರುವ ಮೊಹಮ್ಮದಿ ಬೇಗಂಳಿಗೆ ಭಾರತದ ತವರಿಗೆ ಭೇಟಿ ನೀಡಲು ಅವಕಾಶ ನೀಡದೆ ಆಕೆಯ ಪಾಕಿಸ್ತಾನಿ ಗಂಡ ಸತಾಯಿಸುತ್ತಿದ್ದಾನೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಧ್ಯಪ್ರವೇಶದಿಂದಾಗಿ ಪಾಕ್‌ ಅಧಿಕಾರಿಗಳು 45 ವರ್ಷದ ಆ ಮಹಿಳೆಗೆ ಭಾರತದ ಪ್ರವಾಸಕ್ಕಾಗಿ ವೀಸಾ ಮಂಜೂರು ಮಾಡಿದ್ದರು.

ಭಾರತ ಸರಕಾರ ಆಕೆಗೆ ಹೊಸದಾಗಿ ಪಾಸ್‌ಪೋರ್ಟ್‌ ಒದಗಿಸಿದೆ. ನವೆಂಬರ್‌ 9ರಂದು ನೀಡಲಾದ ವೀಸಾದ ಅವಧಿ ಡಿಸೆಂಬರ್‌ 16ಕ್ಕೆ ಕೊನೆಗೊಳ್ಳುತ್ತಿದೆ. ವೀಸಾ ಅವಧಿ ಮುಗಿಯಲು ಇನ್ನು ಕೇವಲ 7 ದಿನಗಳಷ್ಟೇ ಉಳಿದಿವೆ. ಹೀಗಾಗಿ ಮೊಹಮ್ಮದಿ ಬೇಗಂಳ ಹೆತ್ತವರು ಚಿಂತಿತರಾಗಿದ್ದಾರೆ. ‘ಆಕೆಯ ಗಂಡ ಆಕೆಯನ್ನು ಹಿಂಸಿಸುತ್ತಿದ್ದು, ಭಾರತಕ್ಕೆ ಬರಲು ಬಿಡುತ್ತಿಲ್ಲ. ಅಕೆಗೆ ಅಮಾನುಷ ಹಿಂಸೆ ನೀಡಲಾಗುತ್ತಿದೆ’ ಎಂದು ಹಾಜಿರಾ ಬೇಗಂ ಯೂಟ್ಯೂಬ್‌ ಸಂದೇಶದ ಮೂಲಕ ಸುಷ್ಮಾ ಸ್ವರಾಜ್‌ ಅವರಲ್ಲಿ ದುಃಖ ತೋಡಿಕೊಂಡಿದ್ದಾರೆ.

ಮೊಹಮ್ಮದಿ ಬೇಗಂ 1996ರಲ್ಲಿ ಮೊಹಮ್ಮದ್‌ ಯೂನಿಸ್‌ ಜತೆ ಮದುವೆಯಾಗಿದ್ದಳು. ಆತ ಓಮಾನ್‌ ಪ್ರಜೆ ಎಂದು ಭಾವಿಸಿ ಮದುವೆ ಮಾಡಲಾಗಿತ್ತು. ಆದರೆ ಮದುವೆಯ ನಂತರ ಆತನೊಬ್ಬ ಪಾಕಿಸ್ತಾನಿ ಎಂಬುದು ಗೊತ್ತಾಯಿತು. ಪತ್ನಿಯನ್ನು ಆತ ಒಮಾನ್‌ನಿಂದ ಪಾಕಿಸ್ತಾನಕ್ಕೆ ಸ್ಥಳಾಂತರಿಸಿದ್ದ.

ಮೊಹಮ್ಮದಿ ಬೇಗಂ ಐದು ಮಕ್ಕಳ ತಾಯಿಯಾಗಿದ್ದು, ಗಂಡನ ಹಿಂಸೆ ತಾಳಲಾಗದೆ ಯೂಟ್ಯೂಬ್‌ ವೀಡಿಯೋ ಮೂಲಕ ದೂರಿಕೊಂಡಿದ್ದಳು. ಇದನ್ನು ನೋಡಿ ಆಕೆಯ ನೆರವಿಗೆ ಬಂದ ಎಂಬಿಟಿ ನಾಯಕ ಅಮ್ಜದುಲ್ಲಾ ಖಾನ್‌ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಪತ್ರ ಬರೆದು ಮಹಿಳೆಗೆ ನೆರವಾಗುವಂತೆ ಕೋರಿದ್ದರು. ಅದರಂತೆ ಸಚಿವೆ ಆಕೆಯ ನೆರವಿಗೆ ಧಾವಿಸಿದ್ದರು.

Comments are closed.